ಆ್ಯಪ್ನಗರ

ಲೈಂಗಿಕ ಶೋಷಿತರಿಗೆ ವ್ಯಾಸಂಗದಲ್ಲಿ ವಿಶೇಷ ಮೀಸಲಿಗೆ ತೀರ್ಮಾನ

ಕಷ್ಟದ ಪರಿಸ್ಥಿತಿಯಲ್ಲೂ ದಿಟ್ಟ ಹೆಜ್ಜೆ ಇಟ್ಟು ಉನ್ನತ ವ್ಯಾಸಂಗ ಮಾಡಬಯಸುವ ಲೈಂಗಿಕ ಶೋಷಿತರು ಅಥವಾ ಅವರ ಮಕ್ಕಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪ್ರತ್ಯೇಕ ಶೈಕ್ಷಣಿಕ ಮೀಸಲು ಕಲ್ಪಿಸಲು ಕುವೆಂಪು ವಿಶ್ವವಿದ್ಯಾಲಯ ತೀರ್ಮಾನ ಕೈಗೊಂಡಿದೆ.

ವಿಕ ಸುದ್ದಿಲೋಕ 29 Apr 2016, 9:00 am

ಸಂತೋಷ್‌ ಕಾಚಿನಕಟ್ಟೆ

Vijaya Karnataka Web
ಲೈಂಗಿಕ ಶೋಷಿತರಿಗೆ ವ್ಯಾಸಂಗದಲ್ಲಿ ವಿಶೇಷ ಮೀಸಲಿಗೆ ತೀರ್ಮಾನ


ಶಿವಮೊಗ್ಗ:
ಕಷ್ಟದ ಪರಿಸ್ಥಿತಿಯಲ್ಲೂ ದಿಟ್ಟ ಹೆಜ್ಜೆ ಇಟ್ಟು ಉನ್ನತ ವ್ಯಾಸಂಗ ಮಾಡಬಯಸುವ ಲೈಂಗಿಕ ಶೋಷಿತರು ಅಥವಾ ಅವರ ಮಕ್ಕಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪ್ರತ್ಯೇಕ ಶೈಕ್ಷಣಿಕ ಮೀಸಲು ಕಲ್ಪಿಸಲು ಕುವೆಂಪು ವಿಶ್ವವಿದ್ಯಾಲಯ ತೀರ್ಮಾನ ಕೈಗೊಂಡಿದೆ.

ದೇವದಾಸಿ ಮತ್ತಿತರ ಕೆಟ್ಟ ಪದ್ಧತಿ ಶೂಲಕ್ಕೆ ಸಿಲುಕಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರು ಅಥವಾ ಅವರ ಮಕ್ಕಳು ಸಮಾಜದಲ್ಲಿ ಮುಖ್ಯ ವಾಹಿನಿಯಲ್ಲಿ ಬರುವುದಕ್ಕೆ, ಬಂದರೂ ಉನ್ನತ ವ್ಯಾಸಂಗ ಮಾಡುವುದಕ್ಕೆ ಅವಕಾಶಗಳಿಲ್ಲದೆ ತೀವ್ರ ನೋವು ಅನುಭವಿಸುತ್ತಿದ್ದಾರೆ. ಅಂತಹವರಿಗಾಗಿ ಕೆಲಸ ಮಾಡುತ್ತಿರುವ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ವ್ಯಾಸಂಗದಲ್ಲಿ ವಿಶೇಷ ಮೀಸಲು ಕಲ್ಪಿಸುವಂತೆ ಕುವೆಂಪು ವಿಶ್ವವಿದ್ಯಾಲಯವನ್ನು ಕೋರಿತ್ತು.

ಒಡನಾಡಿಯ ಕೋರಿಕೆಗೆ ಸ್ಪಂದಿಸಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಅವರು ವಿಷಯವನ್ನು ಶಿಕ್ಷಣ ಮಂಡಳಿ ಸಭೆಯ ಮುಂದಿಟ್ಟಿದ್ದರು. ಇದಕ್ಕೆ ಸಮಿತಿ ಸದಸ್ಯರು ಮತ್ತು ಪ್ರಾಧ್ಯಾಪಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯವು ಸಾಮಾಜಿಕ ಶೈಕ್ಷಣಿಕ ಸಂಸ್ಥೆಯಾಗಿದ್ದು ಸಾಮಾಜಿಕ ಕಳಕಳಿ ಜತೆಗೆ ಸಮಾಜದ ಎಲ್ಲ ನೋವುಗಳಿಗೆ ಸ್ಪಂದಿಸುವ ಅಗತ್ಯವಿದೆ. ಬೌದ್ಧಿಕ ಶ್ರೇಷ್ಠತೆ ಎತ್ತಿ ಹಿಡಿಯುವ ದೆಸೆಯಲ್ಲಿ ಮಾನವೀಯ ನೆಲೆಯಲ್ಲಿ ವಿಶೇಷ ಸೌಲಭ್ಯ ಒದಗಿಸುವುದು ವಿಶ್ವವಿದ್ಯಾಲಯದ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ಮಂಡಳಿ ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಗಿದೆ.

ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆದು ಅಂತಿಮವಾಗಿ ಈ ವರ್ಗಕ್ಕೆ ಮಾನವೀಯ ನೆಲೆಯಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ತೀರ್ಮಾನಿಸುವ ಅಧಿಕಾರವನ್ನು ಕುಲಪತಿ ಅವರಿಗೆ ನೀಡಿ ತೀರ್ಮಾನ ಕೈಗೊಂಡಿತು.

ವಿಶೇಷವೆಂದರೆ ಮೈಸೂರು ವಿಶ್ವವಿದ್ಯಾಲಯ ಮತ್ತು ಸಂಸ್ಕೃತ ವಿಶ್ವವಿದ್ಯಾಲಯಗಳು ಈಗಾಗಲೆ ಲೈಂಗಿಕ ಶೋಷಿತರಿಗೆ ವಿಶೇಷ ಮೀಸಲು ಕಲ್ಪಿಸಿವೆ. ಮೈಸೂರು ವಿವಿಯಲ್ಲಿ 2011-12ನೇ ಶೈಕ್ಷಣಿಕ ಸಾಲಿನಿಂದ ಇದು ಜಾರಿಯಾಗಿದೆ. ಸ್ನಾತಕ ಮತ್ತು ಡಿಪ್ಲೊಮಾದಲ್ಲಿ ಅವರಿಗೆ ವಿಶೇಷ ಕೋಟಾದಡಿ ಪ್ರತಿಕೋರ್ಸ್‌ನಲ್ಲಿ ಹೆಚ್ಚುವರಿಯಾಗಿ 2 ಸೀಟ್‌ಗಳನ್ನು ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪ್ರತಿ ಕೋರ್ಸ್‌ಗೆ ಹೆಚ್ಚುವರಿಯಾಗಿ 1 ಸೀಟನ್ನು ಒದಗಿಸಿದೆ. ಅಂತಹ ಅಭ್ಯರ್ಥಿಗೆ ಒಬಿಸಿ ಎಂದು ಪರಿಗಣಿಸಿ ಶೇ.50 ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಕುವೆಂಪು ವಿಶ್ವವಿದ್ಯಾಲಯ ಸಹ ಇದೇ ಮಾದರಿಯಲ್ಲಿ 2016-17ನೇ ಶೈಕ್ಷಣಿಕ ವರ್ಷದಿಂದಲೇ ವಿಶೇಷ ಮೀಸಲು ಕಲ್ಪಿಸಲು ಚಿಂತಿಸಿದ್ದು ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಿದೆ.

ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೈಂಗಿಕ ಶೋಷಿತರು ದೌರ್ಜನ್ಯಕ್ಕೆ ಒಳಗಾದ ವರ್ಗ. ಇದು ಜಾತಿ, ಧರ್ಮ, ಮತವನ್ನು ಮೀರಿ ನಿಂತ ವರ್ಗ. ಏಕೆಂದರೆ ಇಲ್ಲಿ ಎಲ್ಲ ವರ್ಗದವರೂ ಇದ್ದಾರೆ. ಈ ಗುಂಪಿನಲ್ಲಿ ಯಾವುದೇ ಜಾತಿ, ಧರ್ಮದವರಿದ್ದರೂ ಅವರನ್ನು ಕೀಳಾಗಿ ನೋಡಲಾಗುತ್ತದೆ. ಶೋಷಣೆ, ದೌರ್ಜನ್ಯಕ್ಕೆ ಒಳಗಾದವರಿಗೆ ಮೀಸಲು ಕಲ್ಪಿಸಬೇಕೆನ್ನುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಆಶಯವಾಗಿತ್ತು. ಈ ವರ್ಗ ಸಹ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗಿರುವುದರಿಂದ ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕೆ ಹೊರತು ಬೇರೆ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಮೀಸಲು ಕಲ್ಪಿಸಬೇಕೆಂದು ಮೈಸೂರು ವಿವಿ ಬಳಿಕ ಸಂಸ್ಕೃತ ವಿವಿಯನ್ನು ಕೋರಲಾಗಿತ್ತು. ಅಲ್ಲಿ ತಮ್ಮ ಬೇಡಿಕೆಗೆ ಮನ್ನಣೆ ದೊರೆಯಿತು. ಕುವೆಂಪು ವಿಶ್ವವಿದ್ಯಾಲಯದಲ್ಲೂ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಮಗೆ ಸಂತಸ ತಂದಿದೆ ಎಂದು ಒಡನಾಡಿಯ ನಿರ್ದೇಶಕ ಸ್ಟ್ಯಾನ್ಲಿ ಪತ್ರಿಕೆಗೆ ತಿಳಿಸಿದರು.

---------------

ಲೈಂಗಿಕ ಶೋಷಿತರು ಮತ್ತು ಅವರ ಮಕ್ಕಳಿಗೆ ವ್ಯಾಸಂಗದಲ್ಲಿ ವಿಶೇಷ ಮೀಸಲು ಕಲ್ಪಿಸುವ ವಿಚಾರ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮುಂದೆ ಶುಕ್ರವಾರ ಬರಲಿದೆ. ಸಿಂಡಿಕೇಟ್‌ನಲ್ಲಿ ಒಪ್ಪಿಗೆ ಸಿಗುತ್ತಿದ್ದಂತೆಯೇ ಬಳಿಕ ಯಾವ ರೀತಿಯಲ್ಲಿ ವಿಶೇಷ ಮೀಸಲು ಕಲ್ಪಿಸಬೇಕೆಂಬುದನ್ನು ತೀರ್ಮಾನಿಸಲಾಗುತ್ತದೆ.
- ಪ್ರೊ.ಜೋಗನ್‌ ಶಂಕರ್‌, ಕುಲಪತಿ, ಕುವೆಂಪು ವಿಶ್ವವಿದ್ಯಾಲಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ