Please enable javascript.ಎಸ್ಸೆಸ್ಸೆಲ್ಸಿಗೆ ಇನ್ನು ಸಿಸಿಇ ಪರೀಕ್ಷಾ ಪದ್ಧತಿ - ಎಸ್ಸೆಸ್ಸೆಲ್ಸಿಗೆ ಇನ್ನು ಸಿಸಿಇ ಪರೀಕ್ಷಾ ಪದ್ಧತಿ - Vijay Karnataka

ಎಸ್ಸೆಸ್ಸೆಲ್ಸಿಗೆ ಇನ್ನು ಸಿಸಿಇ ಪರೀಕ್ಷಾ ಪದ್ಧತಿ

ವಿಕ ಸುದ್ದಿಲೋಕ 23 Jul 2014, 5:27 am
Subscribe

ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಹಳೇ ಪರೀಕ್ಷಾ ಪದ್ಧತಿಗೆ ವಿದಾಯ ಹೇಳಿದ್ದು 2014-15ನೇ ಸಾಲಿ ನಿಂದ ಪ್ರತಿ ವಿಷಯವೂ 80+20 ಅಂಕಗಳನ್ನು ಒಳ ಗೊಂಡ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಪದ್ಧತಿಯನ್ನು (ಸಿಸಿಇ) ಜಾರಿಗೊಳಿಸಿದೆ.

ಎಸ್ಸೆಸ್ಸೆಲ್ಸಿಗೆ ಇನ್ನು ಸಿಸಿಇ ಪರೀಕ್ಷಾ ಪದ್ಧತಿ
ಬಾಹ್ಯ 80-ಆಂತರಿಕ 20 ಅಂಕ
ಪ್ರಥಮ ಭಾಷೆಗೆ 25 ಆಂತರಿಕ ಅಂಕ
ತೇರ್ಗಡೆಗೆ ಪ್ರಥಮ ಭಾಷೆಗೆ ಕನಿಷ್ಠ 30 ಅಂಕ
ಉಳಿದ ವಿಷಯಗಳಿಗೆ 24 ಅಂಕ
ತೇರ್ಗಡೆಗೆ ಒಟ್ಟಾರೆ 500ಕ್ಕೆ 175 ಅಂಕ
ತೇರ್ಗಡೆಯಲ್ಲಿ ಆಂತರಿಕ ಅಂಕದ
ಪರಿಗಣನೆ ಇಲ್ಲ

ಸಂತೋಷ್ ಕಾಚಿನಕಟ್ಟೆ

ಶಿವಮೊಗ್ಗ:
ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಹಳೇ ಪರೀಕ್ಷಾ ಪದ್ಧತಿಗೆ ವಿದಾಯ ಹೇಳಿದ್ದು 2014-15ನೇ ಸಾಲಿ ನಿಂದ ಪ್ರತಿ ವಿಷಯವೂ 80+20 ಅಂಕಗಳನ್ನು ಒಳ ಗೊಂಡ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಪದ್ಧತಿಯನ್ನು (ಸಿಸಿಇ) ಜಾರಿಗೊಳಿಸಿದೆ.

ಈ ಸಾಲಿನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪ್ರತಿ ವಿಷಯದಲ್ಲಿ 100 ಪೂರ್ಣಾಂಕಕ್ಕೆ ಪರೀಕ್ಷೆ ಬರೆಯುವ ಬದಲು 80ಅಂಕಕ್ಕೆ ಬ್ಯಾಹ್ಯ ಪರೀಕ್ಷೆ ಮತ್ತು 20 ಅಂಕಕ್ಕೆ ಆಂತರಿಕ ಪರೀಕ್ಷೆ ಬರೆಯಲಿದ್ದಾರೆ.

ಇದುವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕೇವಲ ಬೌದ್ಧಿಕ ಕ್ಷೇತ್ರಕ್ಕೆ ಮಾತ್ರ ಮೀಸಲಿಟ್ಟು ವಿದ್ಯಾ ರ್ಥಿಗಳ ನೆನಪಿನ ಶಕ್ತಿಯನ್ನು ಪರೀಕ್ಷಿಸಲಾಗುತ್ತಿತ್ತು. ಬದಲಾಗುತ್ತಿರುವ ಶೈಕ್ಷಣಿಕ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಅವರ ಬೌದ್ಧಿಕ ಕ್ಷೇತ್ರದೊಂದಿಗೆ ಮನೋಜನ್ಯ ವಲಯವನ್ನೂ ಪರಿಗಣಿಸುವ ಉದ್ದೇಶದಿಂದ ಸಿಸಿಇ ಪದ್ಧತಿಯನ್ನು ಜಾರಿಗೊಳಿಸಿದೆ.

ನೂತನ ಪರೀಕ್ಷಾ ಪದ್ಧತಿಯಲ್ಲಿ ಪರೀಕ್ಷೆ ಜತೆಯಲ್ಲೇ ಫಲಿತಾಂಶ ಪ್ರಕಟಣೆಯೂ ಬದಲಾಗಿದೆ. ಇದೂವರೆಗೆ ವಿದ್ಯಾರ್ಥಿಗಳಿಸಿದ ಅಂಕಗಳ ಆಧಾರದ ಮೇಲೆ ಮಾತ್ರ ಫಲಿತಾಂಶ ಪ್ರಕಟಿಸಲಾಗುತ್ತಿತ್ತು. ಇನ್ನು ಮುಂದೆ ಅಂಕಗಳ ಜತೆ ಶ್ರೇಣಿ ಪದ್ಧತಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರು ಜೂನ್ 26ರಂದು ಆದೇಶ ಹೊರಡಿಸಿದ್ದಾರೆ.

ನೂತನ ಪದ್ಧತಿಯಂತೆ ಪ್ರಥಮ ಭಾಷೆಗೆ ಬಾಹ್ಯ 100 ಮತ್ತು ಆಂತರಿಕ 25 ಅಂಕ ನಿಗದಿಪಡಿಸಲಾಗಿದೆ. ಉಳಿದೆಲ್ಲಾ ವಿಷಯಗಳಿಗೆ ತಲಾ 80+20 ಅಂಕಗಳನ್ನು ನಿಗದಿಪಡಿಸಲಾಗಿದೆ. ಎಲ್ಲ ವಿಷಯ ಗಳಲ್ಲಿ ಬಾಹ್ಯ ಪರೀಕ್ಷೆಗೆ 500 ಮತ್ತು ಆಂತರಿಕ ಪರೀಕ್ಷೆಗೆ 125 ಅಂಕಗಳನ್ನು ನಿಗದಿ ಮಾಡಲಾಗಿದೆ. 20 ಅಂಕಗಳ ಆಂತರಿಕ ಪರೀಕ್ಷೆಯನ್ನು ಸಿಸಿಇ ಆಧಾರದ ಮೇಲೆ ಆಯಾ ಶಾಲೆಗಳಲ್ಲೇ ನಡೆಸಿ ಫಲಿತಾಂಶವನ್ನು ಬೋರ್ಡ್‌ಗೆ ಕಳುಹಿಸಲಾಗುತ್ತದೆ.

ವಿದ್ಯಾರ್ಥಿಗಳ ತೇರ್ಗಡೆಗೆ ಅಂತಿಮ ಫಲಿತಾಂಶ ವನ್ನು ನಿರ್ಧರಿಸುವಾಗ ಬಾಹ್ಯ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30 ಮತ್ತು ಒಟ್ಟಾರೆ ಶೇ.35 ಅಂಕ ಗಳಿಸಿರಬೇಕು. ಅಂದರೆ, ಪ್ರಥಮ ಭಾಷೆಯಲ್ಲಿ 100 ಅಂಕಕ್ಕೆ ಕನಿಷ್ಠ 30 ಅಂಕ, ಉಳಿದ ವಿಷಯದಲ್ಲಿ 80ಕ್ಕೆ ಕನಿಷ್ಠ 24 ಅಂಕ, ಎಲ್ಲ ವಿಷಯಗಳಲ್ಲಿ 500 ಅಂಕಗಳಿಗೆ ಕನಿಷ್ಠ 175 (ಶೇ.35) ಅಂಕ ಪಡೆದಿರಬೇಕು. ಆದರೆ, ತೇರ್ಗಡೆಗೆ ಆಂತರಿಕ ಪರೀಕ್ಷೆಯಲ್ಲಿ ಇಂತಿಷ್ಟೇ ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮ ಇಲ್ಲ. ಈ ಮೂಲಕ ಆಂತರಿಕ ಪರೀಕ್ಷೆಯಲ್ಲೇ 20 ಅಂಕಕೊಟ್ಟು ಉಳಿದ 80 ಅಂಕದಲ್ಲಿ ಕನಿಷ್ಠ 10 ಅಂಕ ಗಳಿಸಿ ಉತ್ತೀರ್ಣರಾಗಬಹುದಾದ ಅಥವಾ ಶಾಲೆಗೆ ಪೂರ್ಣ ಫಲಿತಾಂಶ ತರಬಹುದಾದ ಅವಕಾಶಕ್ಕೆ ತಡೆಯೊಡ್ಡಲಾಗಿದೆ.

ಫಲಿತಾಂಶಗಳನ್ನು ಅಂಕ ಮತ್ತು ಶ್ರೇಣಿಗಳ ಆಧಾರದ ಮೇಲೆ ಪ್ರಕಟಿಸಲಾಗುತ್ತದೆ. ಇದರ ಪ್ರಕಾರ ಶೇ.90-100 ಅಂಕಗಳಿಗೆ ಎ ಪ್ಲಸ್, ಶೇ.80-89 ಅಂಕಕ್ಕೆ ಎ, ಶೇ.70-79 ಅಂಕಕ್ಕೆ ಬಿ ಪ್ಲಸ್, ಶೇ.60-69ಅಂಕಕ್ಕೆ ಬಿ, ಶೇ.50-59 ಅಂಕಕ್ಕೆ ಸಿ ಪ್ಲಸ್, ಶೇ.30- 49 ಅಂಕಕ್ಕೆ ಸಿ ಶ್ರೇಣಿ ನಿಗದಿಪಡಿಸಲಾಗಿದೆ.

ಖಾಸಗಿ ಅಭ್ಯರ್ಥಿಗಳಿಗೆ ಮಾತ್ರ ಈ ಹಿಂದಿನಂತೆ ಪ್ರಥಮ ಭಾಷೆಗೆ 125 ಮತ್ತು ಉಳಿದ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಪದ್ಧತಿ ಬದಲಾದ ಕಾರಣ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೊಸ ನಿಯಮಾನುಸಾರ ಹಳೇ ಪಠ್ಯಕ್ರಮದಲ್ಲಿ 4 ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

----
ವಿದ್ಯಾರ್ಥಿಗಳನ್ನು ಪ್ರಗತಿಶೀಲರನ್ನಾಗಿಸಲು, ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಿಸಲು, ಅವರಲ್ಲಿ ಶಿಸ್ತು, ಕಾರ್ಯತತ್ಪರತೆ, ಸೃಜನಶೀಲತೆ, ಕಲಾತ್ಮಕತೆಗಳಿಗೆ ತೆರೆದುಕೊಳ್ಳುವಂತೆ ಮಾಡಲು ನೂತನ ಪರೀಕ್ಷಾ ಪದ್ಧತಿ ಜಾರಿಗೊಳಿಸಲಾಗಿದೆ. ಮೇಲ್ನೋಟಕ್ಕೆ ಉತ್ತಮವಾಗಿದೆ. ಅದರ ಸಾಧಕ-ಬಾಧಕಗಳು ಮುಂದೆ ಗೊತ್ತಾಗಲಿದೆ.
- ಬಸವರಾಜಪ್ಪ, ಡಿಡಿಪಿಐ, ಶಿವಮೊಗ್ಗ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ