ಆ್ಯಪ್ನಗರ

ರಾಜ್ಯದಲ್ಲಿ ಡಿಸೆಂಬರ್‌ ಅಂತ್ಯಕ್ಕೆ 534 ಹೊಸ 4ಜಿ ಟವರ್‌ಗಳು

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಡಿಸೆಂಬರ್‌ ಅಂತ್ಯದೊಳಗೆ 534 ಹೊಸ 4ಜಿ ಮೊಬೈಲ್‌ ಟವರ್‌ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಹೇಳಿದರು.

Vijaya Karnataka 25 Mar 2018, 5:00 am
ಶಿವಮೊಗ್ಗ : ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಡಿಸೆಂಬರ್‌ ಅಂತ್ಯದೊಳಗೆ 534 ಹೊಸ 4ಜಿ ಮೊಬೈಲ್‌ ಟವರ್‌ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಹೇಳಿದರು.
Vijaya Karnataka Web 534 new 4g tower at december end
ರಾಜ್ಯದಲ್ಲಿ ಡಿಸೆಂಬರ್‌ ಅಂತ್ಯಕ್ಕೆ 534 ಹೊಸ 4ಜಿ ಟವರ್‌ಗಳು


ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಶಿವಮೊಗ್ಗ ತಾಲೂಕು ಚೋರಡಿ ಮತ್ತು ಹೊಳಲೂರಲ್ಲಿ ಅಳವಡಿಸಿರುವ ರಾಜ್ಯದ ಮೊಟ್ಟ ಮೊದಲ 4ಜಿ ಮೊಬೈಲ್‌ ಟವರ್‌, ಅಂಚೆ ಇಲಾಖೆಯ ದರ್ಪಣ್‌ ಸೇವೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜ್ಯದ ಮೊಬೈಲ್‌ ಬಳಕೆದಾರರಲ್ಲಿ ಬಿಎಸ್‌ಎನ್‌ಎಲ್‌ ಶೇ.14 ಪಾಲು ಹೊಂದಿದೆ. ಬಿಎಸ್‌ಎನ್‌ಎಲ್‌ ರಾಜ್ಯದಲ್ಲಿ ಈ ವರ್ಷ 2000 ಕೋಟಿ ರೂ. ಅದಾಯ ನಿರೀಕ್ಷೆ ಮಾಡಿದೆ. ರಾಜ್ಯದಲ್ಲಿ 2,790 ಟೆಲಿಫೋನ್‌ ಎಕ್ಸ್‌ಚೇಂಚ್‌ಗಳು, 11 ಲಕ್ಷ ಸ್ಥಿರ ದೂರವಾಣಿ ಸಂಪರ್ಕ, 3.5 ಲಕ್ಷ ಬ್ರಾಡ್‌ಬ್ಯಾಂಡ್‌ ಸಂಪರ್ಕ, 70 ಲಕ್ಷ ಮೊಬೈಲ್‌ ಸಂಪರ್ಕ, 19 ಸಾವಿರ ಲೀಸ್‌ ಲೈನ್‌ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 63 ಸಾವಿರ ಸ್ಥಿರ ದೂರವಾಣಿ, 49 ಸಾವಿರ ಬ್ರಾಡ್‌ಬ್ಯಾಂಡ್‌, 6ಸಾವಿರ ಲೀಸ್‌ ಲೈನ್‌, 11 ಲಕ್ಷ ಮೊಬೈಲ್‌ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ ಎಂದರು.

ಡಿಜಿಟಲ್‌ ಇಂಡಿಯಾ ಪರಿಕಲ್ಪನೆ ಮೇಲೆ ಈಗಾಗಲೆ 6092 ಗ್ರಾಮ ಪಂಚಾಯಿತಿಗಳಿಗೆ ಅಂತರ್ಜಾಲ ಸಂಪರ್ಕ ನೀಡಲಾಗಿದ್ದು ಎಲ್ಲ ಗ್ರಾ.ಪಂ.ಗಳಿಗೆ 600 ಕೋಟಿ ರೂ. ವೆಚ್ಚದಲ್ಲಿ ಅಂತರ್ಜಾಲ ಸಂಪರ್ಕ ವೇಗವನ್ನು 100 ಎಂಬಿಪಿಎಸ್‌ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮೊಬೈಲ್‌ ಡೇಟಾ ಗುಣಮಟ್ಟ ಮತ್ತು ವೇಗ ಹೆಚ್ಚಿಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಉನ್ನತೀಕರಿಸಲಾಗುತ್ತಿದೆ. ಶಿವಮೊಗ್ಗದಲ್ಲಿ 20 ಹೊಸ 4ಜಿ ಟವರ್‌ ಮತ್ತು 76 3ಜಿ ಟವರ್‌ ಅಳವಡಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್‌ ಇಂಡಿಯಾ ಘೋಷಣೆ ಬಳಿಕ ಬಿಎಸ್‌ಎನ್‌ಎಲ್‌ನಿಂದ ದೂರ ಸಂಪರ್ಕ ಸೌಲಭ್ಯವನ್ನು ಮತ್ತಷ್ಟು ಉನ್ನತೀಕರಿಸಲಾಗುತ್ತಿದೆ. ಆ ಮೂಲಕ ಖಾಸಗಿ ಸಂಸ್ಥೆಗಳ ಪ್ರಬಲ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲಾಗುತ್ತಿದೆ. ರಿಲೈಯನ್ಸ್‌ ಬಂದ ಬಳಿಕ ಉಳಿದೆಲ್ಲಾ ಖಾಸಗಿ ಮೊಬೈಲ್‌ ಸಂಪರ್ಕಗಳ ಸಂಖ್ಯೆ ಕಡಿತಗೊಂಡರೆ ಬಿಎಸ್‌ಎನ್‌ಎಲ್‌ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೆ ಸಂಸ್ಥೆ ನೀಡುತ್ತಿರುವ ಉತ್ತಮ ಸೇವೆ ಕಾರಣ. ಮೊಬೈಲ್‌ ಮತ್ತು ಡೇಟಾ ಬಳಕೆಯಲ್ಲಿ ಭಾರತ ಇಂದು ಅಮೆರಿಕ ಮತ್ತು ಚೀನಾಕ್ಕಿಂತಲೂ ಮುಂದಿದೆ ಎಂದರು.

ಅಂಚೆ ಇಲಾಖೆಯಲ್ಲಿ ದರ್ಪಣ್‌ ಮೂಲಕ ಅಂಚೆ ಸೇವೆಯನ್ನೂ ಉನ್ನತೀಕರಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಅಂಚೆ ಸೇವೆ ಜತೆಗೆ ಬ್ಯಾಂಕಿಂಗ್‌ ಸೇವೆ ಸಹ ಒದಗಿಸಲಾಗುವುದು. ಈ ಮೂಲಕ ಅಂಚೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ ಎಂದರು.

ಶಿವಮೊಗ್ಗ ರೈಲ್ವೆಯಲ್ಲಿ ಎರಡು ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ಮತ್ತು ಅನುದಾನ ಬೇಕಾಗಿದೆ. ರಾಜ್ಯ ಸರಕಾರ ಭೂಮಿ ಜತೆಗೆ ತನ್ನ ಪಾಲಿನ ಅನುದಾನ ಒದಗಿಸಿದಲ್ಲಿ ಆದಷ್ಟು ಬೇಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಬಿಎಸ್‌ಎನ್‌ಎಲ್‌ ಹೊಸದಿಲ್ಲಿ ಮಾರುಕಟ್ಟೆ ವಿಭಾಗದ ನಿರ್ದೇಶಕ ಆರ್‌.ಕೆ.ಮಿತ್ತಲ್‌, ಪ್ರಧಾನ ವ್ಯವಸ್ಥಾಪಕ ಅನಿಲ್‌ ಜೈನ್‌, ರಾಜ್ಯವಲಯದ ಪ್ರಧಾನ ವ್ಯವಸ್ಥಾಪಕ ಆರ್‌.ಮಣಿ, ಚೀಫ್‌ ಜನರಲ್‌ ಪೋಸ್ಟ್‌ ಮಾಸ್ಟರ್‌ ಚಾರ್ಲ್‌ ಲೋಬೊ ಹಾಗೂ ನೈಋುತ್ಯ ವಲಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ