ಆ್ಯಪ್ನಗರ

ಎಚ್‌1 ಎನ್‌1 ಬಗ್ಗೆ ಭಯಬಿಟ್ಟು ಎಚ್ಚರ ವಹಿಸಲು ಸಲಹೆ

ಎಚ್‌1 ಎನ್‌1 ಬಗ್ಗೆ ಜನರು ಭಯಬಿಟ್ಟು ಎಚ್ಚರದಿಂದ ಇದ್ದು, ಲಕ್ಷ ಣಗಳು ಗೋಚರಿಸಿದಾಗ ಕೂಡಲೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಹರ್ಷ ಪಾಟೀಲ್‌ ತಿಳಿಸಿದರು.

Vijaya Karnataka 23 Oct 2018, 5:00 am
ಸೊರಬ: ಎಚ್‌1 ಎನ್‌1 ಬಗ್ಗೆ ಜನರು ಭಯಬಿಟ್ಟು ಎಚ್ಚರದಿಂದ ಇದ್ದು, ಲಕ್ಷ ಣಗಳು ಗೋಚರಿಸಿದಾಗ ಕೂಡಲೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಹರ್ಷ ಪಾಟೀಲ್‌ ತಿಳಿಸಿದರು.
Vijaya Karnataka Web SMR-22SRBP2


ಪಟ್ಟಣದಲ್ಲಿ ಆರೋಗ್ಯ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ತಾಲೂಕು ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ 12 ಎಚ್‌1ಎನ್‌1 ಪ್ರಕರಣಗಳು ಪತ್ತೆಯಾಗಿದ್ದು, ಅವರೆಲ್ಲರೂ ಸರಕಾರಿ ಆಸ್ಪತ್ರೆಯಲ್ಲಿ ಔಷಧ ಪಡೆಯುವ ಮೂಲಕ ಗುಣಮುಖರಾಗುತಿದ್ದಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ರೋಗಿಗೆ ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಚಳಿಯು ಇದ್ದು, ದೇಹ ಬಳಲಿದಂತಾಗಿ ಕೆಲವೊಮ್ಮೆ ವಾಂತಿ ಮತ್ತು ಭೇದಿಯಾಗಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಇದಕ್ಕೆ ರೋಗಿಗಳು ಭಯಭೀತರಾಗುವ ಅವಶ್ಯಕತೆ ಇಲ್ಲ. ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮಿದಾಗ ಹಾಗೂ ಸೀನಿದಾಗ ಈ ವೈರಸ್‌ ಹರಡುವುದರಿಂದ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದಕ್ಕಾಗಿಯೇ ಒಂದು ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಅಲ್ಲದೇ ಪರಿಣಾಮಕಾರಿ ಔಷಧ ಕೂಡ ಲಭ್ಯವಿದ್ದು, ವೈದ್ಯರ ಸಲಹೆಯಂತೆ ಪಡೆಯಬಹುದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತಪಾಸಣೆ ಮಾಡಲಾಗುತ್ತದೆ. ಅಲ್ಲದೆ ಆಶಾ ಕಾರ್ಯಕರ್ತೆಯರಿಂದ ಗ್ರಾಮಗಳಲ್ಲಿ ಡೆಂಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಆರೋಗ್ಯ ಕರ್ನಾಟಕ ಯೋಜನೆ ತಾಲೂಕು ನೋಡಲ್‌ ಸಿಬ್ಬಂದಿ ನಾಗರಾಜ್‌ ಮಾತನಾಡಿ, ಬಿಪಿಎಲ್‌ ಕಾರ್ಡುದಾರರಿಗೆ 1.5 ಲಕ್ಷ ದಿಂದ 2 ಲಕ್ಷ ಗಳವರೆಗೆ ಉಚಿತ ಶಸ್ತ್ರಚಿಕಿತ್ಸ ವೆಚ್ಚವನ್ನು ಸರಕಾರ ಭರಿಸಲಿದೆ. ಆರೋಗ್ಯ ವಿಮೆ ಕಾರ್ಡ್‌ ಇಲ್ಲದ ಬಿಪಿಎಲ್‌ ಕುಟುಂಬದವರು ತುರ್ತು ಚಿಕಿತ್ಸೆ ಪಡೆಯಬೇಕಾದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಡ್‌ನ್ನು ಪಡೆದು ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಂಡು ಚಿಕಿತ್ಸಾ ಸೌಲಭ್ಯ ಪಡೆಯಬಹುದು ಎಂದರು.

ತಹಸೀಲ್ದಾರ್‌ ಕೈಕಶನ್‌, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್‌, ಕ್ಷೇತ್ರ ಆರೋಗ್ಯಾಧಿಕಾರಿ ಅರುಂಧತಿ, ಡಾ.ಕಲ್ಲೇಶ್‌, ಸಾವಿತ್ರಿ, ರೋಟರಿ ಕ್ಲಬ್‌ ಅಧ್ಯಕ್ಷ ಡಿ.ಎಸ್‌.ಶಂಕರ್‌, ಉಮೇಶ್‌ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ