ಆ್ಯಪ್ನಗರ

ಬೆತ್ತಲೆ ಮೆರವಣಿಗೆ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಿ

ದಲಿತ ಯುವಕನ ಮೇಲೆ ಹಲ್ಲೆ ಮಾಡಿ, ಬೆತ್ತಲೆ ಮೆರವಣಿಗೆ ಮಾಡಿರುವ ಅಮಾನುಷ ಕೃತ್ಯವನ್ನು ಖಂಡಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

Vijaya Karnataka 15 Jun 2019, 5:00 am
ಶಿವಮೊಗ್ಗ : ದಲಿತ ಯುವಕನ ಮೇಲೆ ಹಲ್ಲೆ ಮಾಡಿ, ಬೆತ್ತಲೆ ಮೆರವಣಿಗೆ ಮಾಡಿರುವ ಅಮಾನುಷ ಕೃತ್ಯವನ್ನು ಖಂಡಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
Vijaya Karnataka Web SMR-14ganesh1


ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಶ್ಯಾನಾಡ್ರಹಳ್ಳಿಯ ಪ್ರತಾಪ್‌ ಎಂಬ ಯುವಕ ಐಎಎಸ್‌ ಪರೀಕ್ಷೆ ಬರೆಯಲು ಮೈಸೂರಿಗೆ ಆಗಮಿಸಿದ್ದನು. ವಾಪಸ್‌ ಸ್ವಗ್ರಾಮಕ್ಕೆ ತೆರಳುವಾಗ ಬೈಕ್‌ ಕೆಟ್ಟು ಹೋಗಿದೆ. ಇದೇ ಸಮಯದಲ್ಲಿ ದುಷ್ಕರ್ಮಿಗಳು ಇವನ ಮೇಲೆ ಹಲ್ಲೆ ಮಾಡಿ ಬೈಕ್‌ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರಿಂದ ಗಾಂಬರಿಗೊಂಡ ಪ್ರತಾಪ್‌ ಆಶ್ರಯ ಕೋರಿ ಸಮೀಪದ ದೇವಸ್ಥಾನಕ್ಕೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಆ ದೇವಸ್ಥಾನ ಅರ್ಚಕರು ಇವನ ಮೇಲೆ ಅನುಮಾನ ವ್ಯಕ್ತಪಡಿಸಿ ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಪರಿಸ್ಥಿತಿ ವಿಚಾರಿಸದೇ ಜಾತಿ ಎಂಬ ಕಾರಣಕ್ಕೆ ಪ್ರತಾಪನ ಮೇಲೆ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಆತನ ಕೈಗಳನ್ನು ಕಟ್ಟಿಹಾಕಿ ಮೆರವಣಿಗೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿದ್ದರೂ ಜಾತಿ ಕ್ರೂರತೆ ಎಷ್ಟಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಈ ರೀತಿಯ ಹೀನ ಕೃತ್ಯಗಳು ನಡೆಯುತ್ತಿರುವುದು ದುರಂತ. ನಡುರಸ್ತೆಯಲ್ಲೇ ಈ ಘಟನೆ ನಡೆದರೂ ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೇ ಪ್ರತಾಪನನ್ನೇ ಮಾನಸಿಕ ಅಸ್ವಸ್ಥ ಎನ್ನುವ ಹಣೆಪಟ್ಟಿಕಟ್ಟಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ ಎಂದು ದೂರಿದರು.

ಸದ್ಯ ಪ್ರತಾಪ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದಲಿತ ಯುವಕ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್‌ನ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ, ಪ್ರಮುಖರಾದ ಏಳುಕೋಟಿ, ಹರಿಗೆ ರವಿ ಮತ್ತಿತರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ