ಆ್ಯಪ್ನಗರ

ಭದ್ರಾವತಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಅಧಿಕಾರಿಗೆ ತರಾಟೆ

ತಾಪಂ ಸಭಾಂಗಣದಲ್ಲಿ ಆಶಾ ಶ್ರೀಧರ್‌ ಅಧ್ಯಕ್ಷ ತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೊಟ್ರಪ್ಪ ಅವರನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

Vijaya Karnataka 25 Jun 2019, 5:00 am
ಭದ್ರಾವತಿ: ತಾಪಂ ಸಭಾಂಗಣದಲ್ಲಿ ಆಶಾ ಶ್ರೀಧರ್‌ ಅಧ್ಯಕ್ಷ ತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೊಟ್ರಪ್ಪ ಅವರನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
Vijaya Karnataka Web SMR-24BDVT1


ಕಾರ‍್ಯನಿರ್ವಾಹಕ ಅಧಿಕಾರಿ ತಮ್ಮಣ್ಣಗೌಡ ಅವರು, ತಾಲೂಕಿನ ಡಿ.ಬಿ.ಹಳ್ಳಿ ಗ್ರಾಮದ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಭೆಗೆ ಮಾಹಿತಿ ನೀಡುವಂತೆ ಸೂಚಿಸಿದಾಗ ತಬ್ಬಿಬ್ಬಾದ ಅಧಿಕಾರಿ ಕೊಟ್ರಪ್ಪ ಅವರನ್ನು ಸದಸ್ಯ ಧರ್ಮೇಗೌಡ , ಸಭೆಗೆ ಆಗಮಿಸುವ ಮುನ್ನ ತಯಾರಿ ಮಾಡಿಕೊಂಡು ಬಾರದೆ ಸಭೆಯಲ್ಲಿ ನಡಾವಳಿ ಓದಿ ತಿಳಿಸುವುದಾದರೆ ಸಭೆಗೆ ಏಕೆ ಬರುತ್ತೀರಿ ಎಂದು ಸಭೆ ಆರಂಭಕ್ಕೂ ಮುನ್ನ ಕಿಡಿಕಾರಿದರು. ಇದಕ್ಕೆ ದನಿಗೂಡಿಸಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪೇಶ್‌ರಾವ್‌ ಹಾಗೂ ಮಂಜುನಾಥ್‌ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಕುಡಿಯುವ ನೀರು ಸರಬರಾಜು ಮಾಡುವ ಕೆರೆಗಳಲ್ಲಿ ಆಳೆತ್ತರ ಗಿಡಗಂಟಿ ಬೆಳದು ಕೆರೆಗಳನ್ನು ಅಶುದ್ಧಗೊಳಿಸಿವೆ. ಈ ಕೆರೆಗಳಿಂದ ಸರಬರಾಜಾಗುವ ನೀರು ಸಾರ್ವಜನಿಕರು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಭೆಯಲ್ಲಿ ಅಧಿಕಾರಿಗಳು ಶುದ್ಧ ಕುಡಿಯುವ ನೀರೊದಗಿಸುತ್ತಿರುವುದಾಗಿ ಹೇಳುತ್ತಾರೆ. ಕೆರೆ ಸ್ವಚ್ಛತೆ ಇಲ್ಲದಾಗ ನೀರು ಎಲ್ಲಿ ಸ್ವಚ್ಛವಾಗಿರುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿರುವುದು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಜವಾಬ್ದಾರಿ. ಆರೋಗ್ಯ ಇಲಾಖೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಜನರ ಆರೋಗ್ಯ ಕಾಪಾಡಲು ಮುಂದಾಗಬೇಕೆಂದು ಸದಸ್ಯ ಧರ್ಮೇಗೌಡ ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರೇಮ್‌ಕುಮಾರ್‌, ಬಾರಂದೂರು ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ ಹೊಳೆಯಿಂದ ಬರುತ್ತಿರುವ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಕುಡಿಯುವ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕೆಂದು ಹೇಳಿದರು. ಇದಕ್ಕೆ ಸಮಜಾಯಿಷಿ ನೀಡಿದ ತಾಪಂ ಇಒ ತಮ್ಮಣ್ಣಗೌಡ, ಕುಡಿಯುವ ನೀರಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷ ಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿರುವ ಬೈಸಿಕಲ್‌ಗಳನ್ನು ಕಳೆದ ಬಾರಿ ಪರೀಕ್ಷೆ ಮುಗಿದರೂ ನೀಡಿರಲಿಲ್ಲ. ಅವುಗಳ ಮಾಹಿತಿಯನ್ನು ಶಿಕ್ಷ ಣ ಇಲಾಖೆ ಸಭೆಗೆ ತಿಳಿಸಬೇಕೆಂದು ಸದಸ್ಯ ಧರ್ಮೆಗೌಡ ಒತ್ತಾಯಿಸಿದೆಉ. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಎಂ.ಸಿ.ಆನಂದ್‌, ಕಳೆದ ಬಾರಿ ಎಲ್ಲ ಶಾಲೆಗಳಿಗೆ ನಿಗದಿತ ಅವಧಿಯಲ್ಲಿ ಸೈಕಲ್‌ ವಿತರಣೆ ಮಾಡಲಾಗಿತ್ತು. ತಾಂತ್ರಿಕ ತೊಂದರೆಯಿಂದ ಕೆಲ ಶಾಲೆಗಳಿಗೆ ತಡವಾಗಿ ಏಪ್ರಿಲ್‌ನಲ್ಲಿ ನೀಡಲಾಯಿತು ಎಂದು ಸಮಜಾಯಿಷಿ ನೀಡಿದರು.

ತಾಪಂ ಕಚೇರಿಯಲ್ಲಿ ಖಾಲಿ ಸ್ಥಾನ ತುಂಬದಿರುವುದರಿಂದ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಹೊರೆಯಾಗಿದೆ. ಇರುವ ಸಿಬ್ಬಂದಿಗೆ ಕೆಲಸದ ಅರಿವಿಲ್ಲದಂತಾಗಿ ಸಮಸ್ಯೆಗಳ ಮಾಹಿತಿ ಕೇಳಿದಾಗ ಕೆಲಸ ಹೇಳಿದರೆ ನಾವೇ ಮಾಡಬೇಕಾ ಎನ್ನುತ್ತಾರೆ ಎಂದು ಸದಸ್ಯ ಕೆ.ಮಂಜುನಾಥ್‌ ಹೇಳಿದರು. ಇದಕ್ಕೆ ಇಓ ಅವರು, ಸಮಸ್ಯೆ ಕುರಿತು ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

==================================
ಬೆಳಗ್ಗೆ 10ಕ್ಕೆ ವಿದ್ಯುತ್‌: ವಿದ್ಯಾರ್ಥಿಗಳಿಗೆ ತೊಂದರೆ: ಸದಸ್ಯ ದಿನೇಶ್‌ ಮಾತನಾಡಿ, ಸೈದರ ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ತಿಂಗಳಿಂದ ಬೆಳಗ್ಗೆ 10ಕ್ಕೆ ವಿದ್ಯುತ್‌ ನೀಡುತ್ತಿದ್ದಾರೆ. ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳಿಗೆ ಬೆಳಗಿನ ಆಹಾರ ತಯಾರಿಸಲು ಅನಾನುಕೂಲವಾಗಿದೆ ಎಂದು ದೂರಿದರು. ಹೊಳೆಹೊನ್ನೂರು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಪ್ಪ , ನಿರಂತರ ವಿದ್ಯುತ್‌ ಸರಬರಾಜು ಮಾಡುವ ಮೂಲಕ ಸಮಸ್ಯೆ ಸರಿಪಡಿಸುವುದಾಗಿ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ನೂತನವಾಗಿ ಟ್ರಾನ್ಸ್‌ಫಾರ್ಮರ್‌ ಅವಶ್ಯವಿದೆ. ವ್ಯವಸ್ಥೆ ಮಾಡಿಕೊಳ್ಳುವಂತೆ ಮೆಸ್ಕಾಂ ಎಂಜಿನಿಯರ್‌ ಚಂದ್ರಪ್ಪ ಅವರಿಗೆ ಇಓ ತಮ್ಮಣ್ಣಗೌಡ ಆದೇಶಿಸಿದರು.

ಅರಬಿಳಚಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ. ಇವುಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಸದಸ್ಯ ಅಣ್ಣಾಮಲೈ ಆಕ್ರೋಶವ್ಯಕ್ತಪಡಿಸಿದರು. ಲಿಖಿತ ದೂರು ನೀಡುವಂತೆ ಮೆಸ್ಕಾಂ ಎಂಜಿನಿಯರ್‌ ಸದಸ್ಯರಿಗೆ ತಿಳಿಸಿದರು.

ಸದಸ್ಯ ದಿನೇಶ್‌ ಮಾತನಾಡಿ, ಅರಶಿನಘಟ್ಟ ಗ್ರಾಮದ ರಸ್ತೆ ಯೂಟರ್ನ್‌ ಮಾದರಿಯಲ್ಲಿದೆ. ಈ ರಸ್ತೆಯಲ್ಲಿ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಹೊಣೆ. ಸಭೆಯ ಠರಾವು ಪುಸ್ತಕದಲ್ಲಿ ದಾಖಲಿಸುವಂತೆ ಒತ್ತಾಯಿಸಿದರು.

ವಿದ್ಯುತ್‌ ಕಂಬ ಬದಲಿಸಿ: ಹಲವಾರು ಗ್ರಾಮ ವ್ಯಾಪ್ತಿಗಳಲ್ಲಿ ವಿದ್ಯುತ್‌ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಅಪಾಯಕ್ಕೂ ಮುನ್ನ ಅವುಗಳನ್ನು ಬದಲಿಸುವಂತೆ ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುನ್ನ ಮುಗಿಸಬೇಕು. ಹಲವಾರು ಭಾಗಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ಅಪೂರ್ಣಗೊಂಡು ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಬದಿಯ ಮಣ್ಣು ಸರಿಯಾದ ರೀತಿಯಲ್ಲಿ ಹಾಕದೆ ಇರುವುದರಿಂದ ಸಮಸ್ಯೆ ಎದುರಾಗಿದೆ. ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ, ಆರೋಗ್ಯ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಬಗ್ಗೆ ಚರ್ಚಿಸಲಾಯಿತು. ತಾಪಂ ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್ಕ , ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ