ಆ್ಯಪ್ನಗರ

ಈಡಿಗರಿಗೆ ಕಾಂಗ್ರೆಸ್‌-ಜೆಡಿಎಸ್‌ ಕೊಡುಗೆ ಏನು?

ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬಿಜೆಪಿಯನ್ನು ಕೋಮುವಾದಿ ಎಂದು ಹೇಳುತ್ತಿದ್ದವರು ಈಗ ಜಾತಿಯನ್ನು ಮುನ್ನೆಲೆಗೆ ತಂದು ಶಾಂತಿ ಕದಡುತ್ತಿದ್ದಾರೆ.

Vijaya Karnataka 26 Oct 2018, 8:58 am
ಸೊರಬ: ಲೋಕಸಭಾ ಉಪ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಈಡಿಗ ಜನಾಂಗಕ್ಕೆ ಕೊಟ್ಟಿರುವ ಕೊಡುಗೆ ಶೂನ್ಯ. ಬಿಜೆಪಿಯಲ್ಲಿ ಈಡಿಗ ಜನಾಂಗದ 7 ಜನ ಶಾಸಕರಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Vijaya Karnataka Web SMR-25SRBP1


ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಲೋಕಸಭಾ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರ ಗುರುವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮತ ಯಾಚಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬಿಜೆಪಿಯನ್ನು ಕೋಮುವಾದಿ ಎಂದು ಹೇಳುತ್ತಿದ್ದವರು ಈಗ ಜಾತಿಯನ್ನು ಮುನ್ನೆಲೆಗೆ ತಂದು ಶಾಂತಿ ಕದಡುತ್ತಿದ್ದಾರೆ. ಬಿಜೆಪಿಯಲ್ಲಿ 7ಶಾಸಕರು ಈಡಿಗ ಜನಾಂಗದವರು. ಕಾಂಗ್ರೆಸ್‌, ಜೆಡಿಎಸ್‌ನಿಂದ ಒಬ್ಬ ಶಾಸಕ ಇಲ್ಲ. ಜಾತಿ, ಧರ್ಮ ಮುಖ್ಯವಲ್ಲ. ಬದಲಾಗಿ ಅಭಿವೃದ್ಧಿ ಮುಖ್ಯ ಎಂಬುದನ್ನು ಮತದಾರರು ಒಪ್ಪಿಕೊಂಡು ವಿಧಾನಸಭಾ ಚುನಾವಣೆಯಲ್ಲಿ 104 ಸೀಟು ಗೆಲ್ಲಿಸಿದ್ದಾರೆ. ಮತ್ತೊಮ್ಮೆ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಜಾತಿ ಬಗ್ಗೆ ಮಾತನಾಡುವ ಕಾಂಗ್ರೆಸ್‌, ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಾಗೋಡು ತಿಮ್ಮಪ್ಪ ಸಂಯಮ ಕಳೆದುಕೊಂಡು ಹಗುರವಾಗಿ ಮಾತನಾಡುತ್ತಿದ್ದಾರೆ. ವಿರೋಧಿಗಳಿಗೆ ನನ್ನ ಬಗ್ಗೆ ಆರೋಪ ಮಾಡುವುದೇ ಹವ್ಯಾಸ ಆಗಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಕುಮಾರಸ್ವಾಮಿ ಅವರು ಬಾಂಡ್‌ ವಿತರಿಸಿಲ್ಲ ಎಂದು ಆರೋಪಿಸಿದರು.

ಸಾಗರ ಶಾಸಕ ಎಚ್‌.ಹಾಲಪ್ಪ ಮಾತನಾಡಿ, ಎಸ್‌.ಬಂಗಾರಪ್ಪ ಜರಿ ಶರ್ಟ್‌, ತಂಪು ಕನ್ನಡಕವನ್ನು ಫ್ಯಾಶನ್‌ಗಾಗಿ ಧರಿಸುತ್ತಿದ್ದರು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬಂಗಾರಪ್ಪ ಅವರಂತೆ ಕನ್ನಡಕ ಹಾಕಿ, ಶರ್ಟ್‌ ಧರಿಸಿ ಶೋ ಕೊಡುತ್ತಿದ್ದಾರೆ. ಬಂಗಾರಪ್ಪ ಅವರ ಅನುಕರಣೆ ಸಲ್ಲದು ಎಂದು ಕುಟುಕಿದರು.

ಶಾಸಕ ಕುಮಾರ್‌ ಬಂಗಾರಪ್ಪ ಮಾತನಾಡಿ, ತಾಲೂಕಿನ ಉದ್ದೇಶಿತ ದಂಡಾವತಿ ಯೋಜನೆ ಅನುಷ್ಠಾನಗೊಳಿಸುವಂತೆ ದಂಡಾವತಿ ವಿರೋಧಿ ಸಮಿತಿ ಹಾಗೂ ಆ ಭಾಗದ ರೈತರು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ನೀರಾವರಿ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಬಿ.ವೈ.ರಾಘವೇಂದ್ರ ಗೆಲುವು ಅವಶ್ಯಕ ಎಂದರು.

ವಿಧಾನ ಪರಿಷತ್‌ ಪ್ರತಿ ಪಕ್ಷ ದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಸುಭಾಷ್‌ ಗುತ್ತೇದಾರ್‌, ವಿಶ್ವೇಶರ ಹೆಗಡೆ ಕಾಗೇರಿ, ಮಾಧುಸ್ವಾಮಿ, ಸಂಸದ ಶಿವಕುಮಾರ್‌ ಉದಾಸಿ, ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ತೇಜಸ್ವಿನಿಗೌಡ, ಮಾಜಿ ಶಾಸಕ ಸ್ವಾಮಿರಾವ್‌, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಶಂಕರಪ್ಪ, ಎ.ಎಲ್‌.ಅರವಿಂದ್‌, ಪಾಣಿ ರಾಜಪ್ಪ, ಶ್ರೀಪಾದ ಹೆಗಡೆ, ಚಿಕ್ಕಾವಲಿ ನಾಗರಾಜಗೌಡ, ಚನ್ನಬಸಪ್ಪ, ನಿರಂಜನ, ಎ.ಎಸ್‌.ಹೇಮಚಂದ್ರ, ದೇವೇಂದ್ರಪ್ಪ, ಕೆ.ಪಿ.ಷಣ್ಮುಖಪ್ಪ ಇತರರಿದ್ದರು.

--------------------
ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರಿಗೆ ಕೇಂದ್ರ ಸಚಿವ ಸ್ಥಾನ ತಪ್ಪಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಮಧು ಬಂಗಾರಪ್ಪ ಅವರ ಬಗ್ಗೆ ಕರುಣೆ ಉಂಟಾಗಿ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡಿ ಮತ್ತೊಮ್ಮೆ ಬಂಗಾರಪ್ಪ ಕುಟುಂಬವನ್ನು ಹರಕೆಯ ಕುರಿಯಾಗಿಸಲು ಹುನ್ನಾರ ನಡೆಸಿದ್ದಾರೆ.

-ಎಚ್‌.ಹಾಲಪ್ಪ , ಸಾಗರ ಶಾಸಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ