ಆ್ಯಪ್ನಗರ

ನಿಲುಗಡೆಗೆ ಬಸ್‌ ಚಾಲಕರ ನಿರಾಕರಣೆ

ಶಿವಮೊಗ್ಗ- ಉಡುಪಿ ಸಂಪರ್ಕದ ಆಗುಂಬೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಲ ಊರುಗಳಲ್ಲಿ ನಿಲ್ಲಿಸುತ್ತಿಲ್ಲ. ಈ ಕಾರಣ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಿಲುಗಡೆಗೆ ಒತ್ತಾಯಿಸಿ ಬಸ್‌ ಅಡ್ಡಗಟ್ಟಿ ಬೀದಿ ಹೋರಾಟ ಆರಂಭಿಸಲು ಇದೀಗ ಸಾರ್ವಜನಿಕರು ಮುಂದಾಗಿದ್ದಾರೆ.

Vijaya Karnataka 4 Jul 2019, 5:00 am
ತೀರ್ಥಹಳ್ಳಿ: ಶಿವಮೊಗ್ಗ- ಉಡುಪಿ ಸಂಪರ್ಕದ ಆಗುಂಬೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಲ ಊರುಗಳಲ್ಲಿ ನಿಲ್ಲಿಸುತ್ತಿಲ್ಲ. ಈ ಕಾರಣ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಿಲುಗಡೆಗೆ ಒತ್ತಾಯಿಸಿ ಬಸ್‌ ಅಡ್ಡಗಟ್ಟಿ ಬೀದಿ ಹೋರಾಟ ಆರಂಭಿಸಲು ಇದೀಗ ಸಾರ್ವಜನಿಕರು ಮುಂದಾಗಿದ್ದಾರೆ.
Vijaya Karnataka Web SMR-3TTH2


ಬಸ್‌ ನಿಲ್ಲಿಸುವಂತೆ ಸಾರ್ವಜನಿಕರ ಬೇಡಿಕೆಗೆ ಜಿಲ್ಲಾಡಳಿತ ಈ ವರೆಗೂ ಸ್ಪಂದಿಸಿಲ್ಲ. ನಾಲೂರು ಹಾಗೂ ಆಗುಂಬೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಬಸ್‌ ನಿಲುಗಡೆ ಸಮಸ್ಯೆ ಹೆಚ್ಚಾಗಿದೆ. ಸರಕಾರಿ ನಿಲ್ದಾಣ ಸ್ಥಳದಲ್ಲೂ ಬಸ್‌ ನಿಲುಗಡೆಗೆ ನಿರಾಕರಿಸಲಾಗುತ್ತಿದ್ದು ಸಾರ್ವಜನಿಕರ ಆಕ್ರೋಶ ಈಗ ಮುಗಿಲು ಮುಟ್ಟಿದೆ.

ಕೊಳಿಗೆ, ಬಿಳಚಿಕಟ್ಟೆ, ಕಲ್ಕೋಡು ಹಸಿರುಮನೆ (ಗಾಳಿಮರ), ಹೊಸೂರು, ಮೇಲಿನ ಹೊಸೂರು, ಕೌರಿಹಕ್ಕಲು, ಕಂಚಿನಹಳ್ಳ ಮುಂತಾದ ಊರುಗಳಲ್ಲಿ ಬಸ್‌ ನಿಲುಗಡೆ ಆಗುತ್ತಿಲ್ಲ. ಬಸ್‌ ನಿಲ್ಲಿಸುವಂತೆ ವಾರ್ಡ್‌, ಗ್ರಾಮಸಭೆ, ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಸ್ವೀಕರಿಸಿ ರವಾನಿಸಿದ್ದರೂ ಜಿಲ್ಲಾಡಳಿತ ಈವರೆಗೂ ಮಾನ್ಯ ಮಾಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾರಿಗೆ ನಿಯಮಗಳ ಅನ್ವಯ ಸಂಚಾರ ಪರವಾನಿಗೆ ಪಡೆದಿರುವ ಬಸ್‌ಗಳು ನಿಲುಗಡೆ ಸ್ಥಳದ ಕುರಿತು ಸಮಯದ ಅವಧಿಯೊಂದಿಗೆ ಸಾರ್ವಜನಿಕವಾಗಿ ಸಮಗ್ರ ಮಾಹಿತಿ ಪ್ರಕಟಿಸಲಿ. ಸಾರಿಗೆ ವ್ಯವಸ್ಥೆ ಸಾರ್ವಜನಿಕ ಸೇವಾ ವ್ಯಾಪ್ತಿ ಹೊಂದಿದ್ದು ಬಸ್‌ ನಿಲುಗಡೆ ನಿರಾಕರಿಸುವುದು ಜಿಲ್ಲಾಡಳಿತಕ್ಕೆ ನಿಯಮ ಬಾಹಿರ ಅನ್ನಿಸಿಲ್ಲವೇ ಎಂಬುದು ತೊಂದರೆಗೆ ಒಳಗಾದ ಸಾರ್ವಜನಿಕರ, ಶಾಲಾ, ಕಾಲೇಜು ಮಕ್ಕಳ ಪ್ರಶ್ನೆ ಆಗಿದೆ.

ಪರವಾನಿಗೆ ರದ್ದು ಮಾಡಿ : ಸಂಚಾರ ಮಾರ್ಗದ ಅನೇಕ ಕಡೆಗಳಲ್ಲಿ ಬಸ್‌ ನಿಲ್ದಾಣದ ಕಟ್ಟಡವನ್ನು ಸರಕಾರದ ಅನುದಾನದಲ್ಲಿ ನಿರ್ಮಿಸಲಾಗಿದ್ದು ಬಸ್‌ ನಿಲ್ದಾಣ ಹೆಸರಿನ ನಾಮಫಲಕ ಇದೆ. ಸರಕಾರವೇ ನಾಮಫಲಕ ಅಳವಡಿಸಿದ ಮೇಲೆ ನಿಲ್ದಾಣ ಸ್ಥಳದಲ್ಲಿ ಬಸ್‌ ನಿಲುಗಡೆಗೆ ನಿರಾಕರಣೆ ಕಾನೂನು ಬಾಹಿರವಾಗಿದೆ. ನಿಲುಗಡೆ ಮಾಡದ ಬಸ್‌ಗಳ ಸಂಚಾರ ಪರವಾನಿಗೆ ರದ್ದುಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದಾಗಿದೆ. ಬಸ್‌ ನಿಲುಗಡೆ ಮಾಡದ ಅಂಶವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಬಸ್‌ ನಿಲುಗಡೆ ಕುರಿತು ಹಲವು ಬಾರಿ ಗ್ರಾ.ಪಂ. ಆಡಳಿತದವ್ಯಾಪ್ತಿಯಲ್ಲಿ ನಿರ್ಣಯ ಸ್ವೀಕರಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ, ಪೋಲಿಸ್‌ ವರಿಷ್ಟಾಧಿಕಾರಿ, ಸಾರಿಗೆ ಆಯುಕ್ತರಿಗೆ ಈ ಸಂಬಂಧ ಮಾಹಿತಿ ನೀಡಲಾಗಿದೆ. ಬಸ್‌ ನಿಲುಗಡೆ ಸಮಸ್ಯೆ ಕುರಿತು ದೂರವಾಣಿ ಮೂಲಕ ಜಿಲ್ಲಾ ಹಂತದ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಈವರೆಗೂ ಯಾವುದೇ ಪರಿಹಾರತ್ಮಕ ಕ್ರಮ ಜರುಗಿಲ್ಲ ಎಂಬುದು ಸಾರ್ವಜನಿಕರು, ಶಾಲಾ, ಕಾಲೇಜು ಮಕ್ಕಳ ದೂರಾಗಿದೆ.

ಸಿಗುವ ಉಡಾಫೆ ಉತ್ತರ : ನಿಲುಗಡೆ ಮಾಡದ ಕುರಿತು ಪ್ರಶ್ನಿಸಿದರೆ ಬಸ್‌ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಉಡಾಫೆ ಉತ್ತರ ಸಿಗುತ್ತಿದೆ. ಕೆಲ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ ಸಿಬ್ಬಂದಿಗಳು ಬಸ್‌ ನಿಲ್ಲಿಸಲ್ಲ ಏನ್ಮಾಡ್ತೀರಾ ಎಂದು ಪ್ರಶ್ನಿಸಿ ಧಮಕಿ ಹಾಕುತ್ತಾರೆ. ಜಿಲ್ಲಾಧಿಕಾರಿ, ಆರ್‌ಟಿಓ, ಪೋಲಿಸರಿಗೆ ಈ ಕುರಿತು ದೂರು ಕೊಡ್ತೀವಿ ಎಂದು ಹೇಳಿದ್ರೂ ಕ್ಯಾರೆ ಮಾಡಲ್ಲ. ದೂರು ಕೊಟ್ಟರೂ ಏನು ಆಗಲ್ಲ. ಅವರನ್ನೆಲ್ಲಾ ಸರಿ ಮಾಡೋ ತಾಕತ್ತು ನಮಗಿದೆ ಎಂದು ಮರು ಉತ್ತರ ಕೊಟ್ಟು ದಬಾಯಿಸುತ್ತಾರೆ. ಬಸ್‌ ನಿಲುಗಡೆ ಸಮಸ್ಯೆ ಕುರಿತು ಪರಿಹರಿಸಲು ತಾಲೂಕು ಆಡಳಿತ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಹೆಣ್ಣು ಮಕ್ಕಳಲ್ಲಿ ಭಯ.. : ಒಂದೆಡೆ ಬಸ್‌ ನಿಲ್ಲಿಸುವುದಿಲ್ಲ ಎಂಬ ಆತಂಕ. ಇನ್ನೊಂದೆಡೆ ಬಸ್‌ಗಾಗಿ ದೂರದವರೆಗೆ ನಡೆಯಬೇಕಾದ ಅನಿವಾರ‍್ಯತೆ. ಬಸ್‌ ಸಂಚಾರದ ಕಾಡು ಮಾರ್ಗದಲ್ಲಿ ನಡಿಗೆ ಶಾಲಾ ಮಕ್ಕಳಲ್ಲಿ ಭಯ ಮೂಡಿಸಿದೆ. ಪುಂಡಪೋಕರಿಗಳ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಬಸ್‌ಗಾಗಿ ಒಂಟಿ ಹೆಣ್ಣು ಮಕ್ಕಳ ಕಾಲ್ನಡಿಗೆ ಸಹಜವಾಗಿ ಆತಂಕ ಹೆಚ್ಚಿಸಿದೆ. ಅಪಾಯದ ಪ್ರಕರಣ ಘಟಿಸಿದರೆ ಪೊಲೀಸ್‌ ಇಲಾಖೆಗೆ ತಲೆನೋವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ