ಆ್ಯಪ್ನಗರ

ನಾರಾಯಣಗುರು ಮಠದಿಂದ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

ರಾಜ್ಯದ ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಶನಿವಾರ ನಿಟ್ಟೂರಿನ ನಾರಾಯಣ ಗುರು ಮಠದ ಶ್ರೀರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಾರ್ವಜನಿಕರು ಹುಂಚದ ಕಟ್ಟೆಯಿಂದ ಮೂಗುಡ್ತಿವರೆಗೆ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಿದರು.

Vijaya Karnataka 18 Aug 2019, 5:00 am
ರಿಪ್ಪನ್‌ಪೇಟೆ: ರಾಜ್ಯದ ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಶನಿವಾರ ನಿಟ್ಟೂರಿನ ನಾರಾಯಣ ಗುರು ಮಠದ ಶ್ರೀರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಾರ್ವಜನಿಕರು ಹುಂಚದ ಕಟ್ಟೆಯಿಂದ ಮೂಗುಡ್ತಿವರೆಗೆ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಿದರು.
Vijaya Karnataka Web SMR-17RPT1


ಈ ಸಂದರ್ಭ ಮಾತನಾಡಿದ ಸ್ವಾಮೀಜಿಗಳು, ರಾಜ್ಯದಲ್ಲಿ ಹಿಂದೆಂದು ಕಂಡರಿಯದ ನೆರೆ ಹಾವಳಿ ಸಂಭವಿಸಿದ್ದು, 20ಜಿಲ್ಲೆಗಳ ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಬದುಕು ಕಟ್ಟಿಕೊಡಲು ಸಮಾಜದ ಪ್ರತಿಯೊಬ್ಬರು ಸಹಕಾರ ನೀಡಬೇಕು. ಆಗ ಮಾತ್ರ ಮಾನವ ಜೀವನ ಸಾರ್ಥಕವಾಗುತ್ತದೆ. ಹಾಗೇಯೆ ನೊಂದ ವ್ಯಕ್ತಿಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರೆ ಭಗವಂತ ನಮಗೆ ನೆಮ್ಮದಿ ಬದುಕನ್ನು ಕೊಡುತ್ತಾನೆ. ಎಲ್ಲ ಭಕ್ತರು ತಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ಸಂತ್ರಸ್ತರಿಗೆ ನೆರವಾಗಬೇಕೆಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನೆರೆ ಸಂತ್ರಸ್ತರಿಗೆ ನೆರವು ನೀಡಲು ಸರಕಾರದ ಜತೆಗೆ ಮಠಮಾನ್ಯಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿಯು ಸಹ ನೆರೆಹಾವಳಿಯಿಂದ ಕೋಟ್ಯಂತರ ರೂ. ನಷ್ಟವುಂಟಾಗಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಮಟ್ಟದ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ. ನೆರೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆಯಿಲ್ಲ ಎಂದರು.

ಪಾದಯಾತ್ರೆಯಲ್ಲಿ ಸಾರ್ವಜನಿಕರಿಂದ ಆಹಾರೋತ್ಪನ್ನ, ಧವಸ ಧಾನ್ಯ ಹಾಗೂ ದೇಣಿಗೆ ಸಂಗ್ರಹಿಸಲಾಯಿತು. ತಾ.ಪಂ. ಅಧ್ಯಕ್ಷ ತೊರೆಗೆದ್ದೆ ವಾಸಪ್ಪ ಗೌಡ, ಜಿ.ಪಂ.ಸದಸ್ಯೆ ಶ್ವೇತಾ ಆರ್‌.ಬಂಡಿ. ಗ್ರಾ.ಪಂ. ಅಧ್ಯಕ್ಷೆ ಗೀತಾ ಮಂಜುನಾಥ್‌, ಉಪಾಧ್ಯಕ್ಷ ಬಷೀರ್‌ ಅಹಮ್ಮದ್‌, ಎಪಿಎಂಸಿ ಸದಸ್ಯ ಬಂಡಿ ರಾಮಚಂದ್ರ, ಕೆರಮನೆ ರಮೇಶ್‌, ಟಿ.ಡಿ.ತುಕಾರಾಂ, ಸೋಮಶೇಖರ್‌, ಎನ್‌. ಸತೀಶ್‌ , ಹೂವಪ್ಪ , ಲಿಂಗರಾಜು ,ಮಠದ ವಕ್ತಾರ ಮಹೇಂದ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಲಕ್ಷ ರೂ. ದೇಣಿಗೆ: ಶ್ರೀನಾರಾಯಣ ಗುರು ಮಹಾ ಸಂಸ್ಥಾನ ಮಠದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ. ದೇಣಿಗೆ ನೀಡಲಾಗುವುದು. ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ಮೀಸಲು ಇಟ್ಟಿದ್ದ ಹಣವನ್ನೇ ದೇಣಿಗೆಯಾಗಿ ನೀಡಿದ್ದು, ಈ ಬಾರಿ ನಾರಾಯಣ ಗುರು ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. -ಶ್ರೀರೇಣುಕಾನಂದ ಸ್ವಾಮೀಜಿ, ಶ್ರೀನಾರಾಯಣ ಗುರು ಮಹಾ ಸಂಸ್ಥಾನ ಮಠ, ನಿಟ್ಟೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ