ಆ್ಯಪ್ನಗರ

ಹೆಗಲತ್ತಿಗೆ ಶಾಸಕ, ಡಿಸಿ ಭೇಟಿ, ಹಾನಿ ಪರಿಶೀಲನೆ

ಗುಡ್ಡ ಕುಸಿತದಿಂದ ಅಪಾರ ಪ್ರಮಾಣದಲ್ಲಿ ಸಾಗುವಳಿ ಪ್ರದೇಶ ಹಾನಿಗೊಂಡ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಸೋಮವಾರ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.

Vijaya Karnataka 13 Aug 2019, 5:00 am
ತೀರ್ಥಹಳ್ಳಿ : ಗುಡ್ಡ ಕುಸಿತದಿಂದ ಅಪಾರ ಪ್ರಮಾಣದಲ್ಲಿ ಸಾಗುವಳಿ ಪ್ರದೇಶ ಹಾನಿಗೊಂಡ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಸೋಮವಾರ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.
Vijaya Karnataka Web SMR-12TTH5


ಸಾಗುವಳಿ ಪ್ರದೇಶದಿಂದ ಸುಮಾರು 3 ಕಿ.ಮೀ. ದೂರದ ಗುಡ್ಡ ಕುಸಿತದಿಂದ ಉಂಟಾಗಿರುವ ಹಾನಿಯಿಂದ ಸುಮಾರು 25 ಕುಟುಂಬಗಳಿಗೆ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳು ತಕ್ಷಣ ಸೂಕ್ತ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಬೇಕಿದೆ ಎಂದು ಆರಗಜ್ಞಾನೇಂದ್ರ ಅವರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

ಸಂತ್ರಸ್ತ ಕುಟುಂಬಗಳಿಗೆ ಕುಡಿಯುವ ನೀರಿನ ಬಾವಿ ಈಗ ಇಲ್ಲವಾಗಿದೆ. ಸಾಗುವಳಿ ಜಮೀನು ಸಂಪೂರ್ಣ ನಾಶವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್‌ ಮೂಲಕ ಜನರಿಗೆ ಸಹಕಾರ ನೀಡಬೇಕಿದೆ. ತಾಲೂಕಿನಲ್ಲಿ ಇದೊಂದು ವಿಶೇಷ ಪ್ರಕರಣವಾಗಿದ್ದು, ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.

ಹಾನಿ ಪ್ರಮಾಣವನ್ನು ಮೊದಲಿಗೆ ಗುರುತಿಸಲಾಗುತ್ತದೆ. ಗುಡ್ಡ ಕುಸಿತಕ್ಕೆ ಕಾರಣವಾದ ಅಂಶಗಳ ಕುರಿತು ಭೂ ವಿಜ್ಞಾನಿಗಳಿಂದ ವರದಿ ಪಡೆಯಲಾಗುತ್ತದೆ. ಯಾವುದೇ ತೊಂದರೆ ಆಗದಂತೆ ಜನರನ್ನು ರಕ್ಷಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಭರವಸೆ ನೀಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌, ತಾ.ಪಂ.ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಕವಿರಾಜ್‌, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್‌, ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಸಿಂಗನಬಿದರೆ ಗ್ರಾ.ಪಂ.ಅಧ್ಯಕ್ಷ ಚಂದ್ರಪ್ಪ, ಮಂಡಗದ್ದೆ ಗ್ರಾ.ಪಂ. ಅಧ್ಯಕ್ಷ ಮಧುಶೆಟ್ಟಿ, ತಹಸೀಲ್ದಾರ್‌ ಭಾಗ್ಯ, ಡಿವೈಎಸ್ಪಿ ರವಿಕುಮಾರ್‌, ಎಸಿಎಫ್‌ ಶಿವಕುಮಾರ್‌, ಮುಖಂಡರಾದ ತಳಲೆಪ್ರಸಾದ್‌ಶೆಟ್ಟಿ, ತೋಟದಕೊಪ್ಪ ತಿಮ್ಮಪ್ಪ ಮತ್ತಿತರರು ಇದ್ದರು.

ನದಿಗಳಲ್ಲಿ ಪ್ರವಾಹ ಇಳಿಮುಖ

ಸತತ ಮಳೆಯಿಂದ ತಾಲೂಕಿನಲ್ಲಿ ಹೆಚ್ಚಾಗಿದ್ದ ತುಂಗಾ, ಮಾಲತಿ, ಕುಶಾವತಿ ನದಿ ಪ್ರವಾಹ ಸೋಮವಾರ ತಗ್ಗಿದೆ. ನದಿಗಳು ಸಹಜ ಹರಿವಿನ ಸ್ಥಿತಿಗೆ ಮರಳಿದ್ದು ಆಗುಂಬೆಯಲ್ಲಿ 63.04, ತೀರ್ಥಹಳ್ಳಿಯಲ್ಲಿ 44.06 ಮಿ.ಮೀ. ಮಳೆ ಸುರಿದಿದೆ.

ಶಿವಮೊಗ್ಗ- ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ ಆಗುಂಬೆ ಸಮೀಪ ಕೌರಿಹಕ್ಕಲಿನಲ್ಲಿ ಕಿರು ಸೇತುವೆ ಬಿರುಕು ಬಿಟ್ಟಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಸ್ಥಳಕ್ಕೆ ಆಗುಂಬೆ ಗ್ರಾ.ಪಂ. ಅಧ್ಯಕ್ಷ ಹಸಿರುಮನೆ ನಂದನ್‌ ಭೇಟಿ ನೀಡಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ