ಆ್ಯಪ್ನಗರ

ಆರೋಪಿಗಳ ಗಡಿಪಾರಿಗೆ ವೇದಿಕೆ ಆಗ್ರಹ

ರಾಜ್ಯದಲ್ಲಿ ದಲಿತರು, ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಖಂಡಿಸಿ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಸೋಮವಾರ ಸಮಾನ ಮನಸ್ಕರ ವೇದಿಕೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

Vijaya Karnataka 25 Jun 2019, 5:00 am
ತೀರ್ಥಹಳ್ಳಿ : ರಾಜ್ಯದಲ್ಲಿ ದಲಿತರು, ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಖಂಡಿಸಿ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಸೋಮವಾರ ಸಮಾನ ಮನಸ್ಕರ ವೇದಿಕೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
Vijaya Karnataka Web SMR-24TTH8


ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಸಮಾಜಕ್ಕೆ ಸೇರಿದ ಪ್ರತಾಪ್‌ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಲ್ಲಿ ದಯಾನತ್‌ಖಾನ್‌ ಎಂಬ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕನನ್ನು ಕೊಲೆ ಮಾಡಲಾಗಿದೆ. ಈ ಎರಡು ಘಟನೆ ಹಿಂದೆ ಕೋಮುವಾದಿಗಳ ಕೈವಾಡ ಇದ್ದು, ಪ್ರಕರಣ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರಕಾರ ಎಚ್ಚರವಹಿಸದಿರುವುದು ಪ್ರಕರಣಗಳು ಮರುಕಳಿಸಲು ಕಾರಣವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಗಡಿಪಾರು ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ, ಮಲೆನಾಡು ಸಂಘರ್ಷ ಕ್ರಿಯಾಸಮಿತಿ, ಕರವೇ, ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ, ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ, ಕರ್ನಾಟಕ ರೈತ ಸಂಘ, ಎಸ್‌ಡಿಪಿಐ, ಜಯಕರ್ನಾಟಕ ಸಂಘಟನೆ, ಮಲೆನಾಡು ಬೋವಿ ಸಂಘ, ಡಾ. ಬಿ.ಆರ್‌. ಅಂಬೇಡ್ಕರ್‌ ವಿಚಾರ ವೇದಿಕೆ, ಆದಿ ಕರ್ನಾಟಕ ಸಂಘಟನೆಗಳು ಪ್ರತಿಭಟನೆ ನೇತೃತ್ವವಹಿಸಿದ್ದವು. ನೆಂಪೆದೇವರಾಜ್‌ ಮಾತನಾಡಿದರು. ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಘಟನಾ ಕಾರ‍್ಯದರ್ಶಿ ವೆಂಕಟೇಶಹೆಗ್ಡೆ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕೀಗಡಿ ಕೃಷ್ಣಮೂರ್ತಿ, ಪಡುವಳ್ಳಿ ಹರ್ಷೇಂದ್ರಕುಮಾರ್‌, ಪಡುವಳ್ಳಿ ಕಿಟ್ಟಪ್ಪ, ಸಂಯುಕ್ತ ಮುಸ್ಲಿಂ ಒಕ್ಕೂಟದ ಜಫರುಲ್ಲಾ, ಮುಳುಬಾಗಿಲು ಗ್ರಾ.ಪಂ.ಸದಸ್ಯ ಮಂಜುನಾಥಶೆಟ್ಟಿ, ಸುಶೀಲಾಶೆಟ್ಟಿ, ಅನುಸೂಯಶೆಟ್ಟಿ ಮತ್ತಿತರರು ಇದ್ದರು. ಶಿರಸ್ತೇದಾರ್‌ ರಾಕೇಶ್‌ ಮನವಿ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ