ಆ್ಯಪ್ನಗರ

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ

ಎಳ್ಳಮಾವಾಸ್ಯೆ ಅಂಗವಾಗಿ ಪುರಾಣ ಪ್ರಸಿದ್ಧ ಪಟ್ಟಣದ ಶ್ರೀರಾಮೇಶ್ವರ ದೇವರ ಜಾತ್ರೆ ಶನಿವಾರ ವಿಜೃಂಭಣೆಯಿಂದ ಆರಂಭವಾಯಿತು. ತುಂಗಾನದಿಯ ಪುರಾಣ ಪ್ರಸಿದ್ಧ ಪರಶುರಾಮಕೊಂಡದಲ್ಲಿ ನಾಡಿನ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಮುಂಜಾನೆ ಮಾಗಿ ಚಳಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀರಾಮೇಶ್ವರ ದೇವರ ದರ್ಶನ ಪಡೆದರು.

Vijaya Karnataka 6 Jan 2019, 5:00 am
ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಅಂಗವಾಗಿ ಪುರಾಣ ಪ್ರಸಿದ್ಧ ಪಟ್ಟಣದ ಶ್ರೀರಾಮೇಶ್ವರ ದೇವರ ಜಾತ್ರೆ ಶನಿವಾರ ವಿಜೃಂಭಣೆಯಿಂದ ಆರಂಭವಾಯಿತು. ತುಂಗಾನದಿಯ ಪುರಾಣ ಪ್ರಸಿದ್ಧ ಪರಶುರಾಮಕೊಂಡದಲ್ಲಿ ನಾಡಿನ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಮುಂಜಾನೆ ಮಾಗಿ ಚಳಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀರಾಮೇಶ್ವರ ದೇವರ ದರ್ಶನ ಪಡೆದರು.
Vijaya Karnataka Web SMR-5TTH6


ತೀರ್ಥಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ನಸುಕಿನ ಜಾವ ಭಕ್ತರು ಪರಶುರಾಮಕೊಂಡ ಬಳಿ ನೆರೆದಿದ್ದರು. ಪುಣ್ಯಸ್ನಾನಕ್ಕೆ ಅಡ್ಡಿ ಉಂಟಾಗದಂತೆ ಕೊಂಡದ ಬಳಿ ರಕ್ಷಣೆಗೆ ವಿಶೇಷ ವ್ಯವಸ್ಥೆ, ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮಾಗಿ ಚಳಿ ಹೆಚ್ಚಾದ ಕಾರಣ 10 ಗಂಟೆ ನಂತರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿದರು. ಎಳ್ಳಮಾವಾಸ್ಯೆ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಶ್ರೀರಾಮೇಶ್ವರ ಅನ್ನದಾಸೋಹ ಸಮಿತಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆರತ್ನಾಕರ್‌, ತಹಸೀಲ್ದಾರ್‌ ಆನಂದಪ್ಪನಾಯಕ್‌ ಸೇರಿದಂತೆ ಅನೇಕ ಗಣ್ಯರು ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀರಾಮೇಶ್ವರ ದೇವಸ್ಥಾನ ಜೀರ್ಣೋದ್ದಾರ, ಪ್ರತಿಷ್ಠಾಪನೆ ನಂತರ ಮೊದಲ ಬಾರಿಗೆ ಎಳ್ಳಮಾವಾಸ್ಯೆ ಜಾತ್ರೆ ನಡೆದಿದೆ.

ಹೆಚ್ಚು ಜನ ಸೇರದ ಜಾತ್ರೆ :
ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವ, ಸಿಡಿಮದ್ದು ಪ್ರದರ್ಶನ ಕಾರ‍್ಯಕ್ರಮ ಜ.7ರಂದು ತುಂಗಾನದಿ ತಟದಲ್ಲಿ ನಡೆಯಲಿದೆ. ಸುಗ್ಗಿ ಕಾಲದ ಜಾತ್ರೆ ಮಹೋತ್ಸವಗಳಲ್ಲಿ ಒಂದಾದ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಶನಿವಾರ ಹೆಚ್ಚು ಜನರು ಸೇರಿರಲಿಲ್ಲ. ಭಾನುವಾರ ನಡೆಯುವ ರಥೋತ್ಸವ, ಸೋಮವಾರ ನಡೆಯುವ ತೆಪ್ಪೋತ್ಸವಕ್ಕೆ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

ಅನೇಕ ಕಡೆ ಜಾತ್ರೆ ಮಹೋತ್ಸವ :
ಎಳ್ಳಮಾವಾಸ್ಯೆ ಅಂಗವಾಗಿ ತಾಲೂಕಿನ ಮಾಳೂರು ಸಮೀಪದ ಗುಮ್ಮನಮಕ್ಕಿಯಲ್ಲಿ ಸಪ್ತ ಮಾತೃಕೆಯರ ಸಮಾಗಮದ ಸೀಮೆದೇವತೆಗಳ ಜಾತ್ರೆ ಅದ್ದೂರಿಯಾಗಿ ನಡೆಯಿತು. ಅಕ್ಕತಂಗಿಯರಾದ ಸಪ್ತ ಮಾತೃಕೆಯರು ಪಲ್ಲಕ್ಕಿ ಮೂಲಕ ಜಾತ್ರಾ ಸ್ಥಳಕ್ಕೆ ಆಗಮಿಸಿದಾಗ ಭಕ್ತರು ಹರಕೆ ಕಾಣಿಕೆ ಸಲ್ಲಿಸಿದರು. ಜಾತ್ರೆ ದಿನದಿಂದ ದೇವತೆಗಳ ಸೀಮೆ ತಿರುಗಾಟ ಆರಂಭವಾಗಲಿದೆ. ಜಾತ್ರೆ ಸಂಭ್ರಮದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಬಾಳಗಾರಿನಲ್ಲಿ ಶ್ರೀರಾಮೇಶ್ವರ ದೇವರ ಜಾತ್ರೆ, ಮಂಡಗದ್ದೆ, ಕನ್ನಂಗಿ ಸಮೀಪದ ಕುಟ್ಲುಗಾರುನಲ್ಲಿ ಸಂಭ್ರಮದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ