ಆ್ಯಪ್ನಗರ

ಆನೆಗಳ ಆಟ ‘ವಂಡರ್‌’

ಅದು ವಂಡರ್‌ ಲೋಕ. ಭಾನುವಾರವಾಗಿದ್ದರಿಂದ ಬಾಸ್ಕೆಟ್‌ಬಾಲ್‌, ಪುಟ್‌ಬಾಲ್‌ ಸೇರಿದಂತೆ ನಾನಾ ಆಟೋಟ ನಡೆಯಿತು. ಇದೆಲ್ಲವನ್ನು ಆಡಿದ್ದು ಪಳಗಿದ ಮದಕರಿಗಳು. ಮಾವುತರ ಸೂಚನೆಗೆ ತಕ್ಕಂತೆ ನಾನಾ ಆಟಗಳಲ್ಲಿ ಭಾಗವಹಿಸಿ ಮಸ್ತ್‌ ಮಜಾ ನೀಡುವ ಪರಿ ಎಂತಹವರನ್ನು ರೋಮಾಂಚನಗೊಳಿಸಿತು.

Vijaya Karnataka 28 Jan 2019, 5:00 am
ಶಿವಮೊಗ್ಗ: ಅದು ವಂಡರ್‌ ಲೋಕ. ಭಾನುವಾರವಾಗಿದ್ದರಿಂದ ಬಾಸ್ಕೆಟ್‌ಬಾಲ್‌, ಪುಟ್‌ಬಾಲ್‌ ಸೇರಿದಂತೆ ನಾನಾ ಆಟೋಟ ನಡೆಯಿತು. ಇದೆಲ್ಲವನ್ನು ಆಡಿದ್ದು ಪಳಗಿದ ಮದಕರಿಗಳು. ಮಾವುತರ ಸೂಚನೆಗೆ ತಕ್ಕಂತೆ ನಾನಾ ಆಟಗಳಲ್ಲಿ ಭಾಗವಹಿಸಿ ಮಸ್ತ್‌ ಮಜಾ ನೀಡುವ ಪರಿ ಎಂತಹವರನ್ನು ರೋಮಾಂಚನಗೊಳಿಸಿತು.
Vijaya Karnataka Web SMR-27GANESH7


ಇದು ನಗರ ಹೊರವಲಯದ ಸಕ್ರೆಬೈಲ್‌ ಆನೆ ಬಿಡಾರದ ಬಳಿ ಸಹ್ಯಾದ್ರಿ ಉತ್ಸವ ಅಂಗವಾಗಿ ಆನೆಗಳಿಗಾಗಿ ನಡೆದ ವಿವಿಧ ಆಟೋಟದ ದೃಶ್ಯ.

ಫುಟ್‌ಬಾಲ್‌ನಲ್ಲಿ ಅರ್ಜುನ, ಸೂರ್ಯ ಭರ್ಜರಿ ಪ್ರದರ್ಶನ ನೀಡಿದರು. ಅರ್ಜುನನ ಕಿಕ್‌ಗೆ ಬಾಲ್‌ ಬೌಂಡರಿ ದಾಟುತಿತ್ತು. ಇದನ್ನು ಕಂಡು ಪ್ರೇಕ್ಷ ಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸೂರ್ಯ ಕೂಡ ತಾನೇನು ಕಮ್ಮಿ ಇಲ್ಲ ಭರ್ಜರಿ ಕಿಕ್‌ ಹೊಡೆದ. ಹೇಮಾವತಿ, ಆಲೆ ಕೂಡ ಇವರಿಗೆ ಸಾಥ್‌ ನೀಡಿ ಅಂಗಳದ ಎಲ್ಲ ದಿಕ್ಕುಗಳಿಗೂ ಚೆಂಡನ್ನು ತಲುಪಿಸಿದರು.

ಬಾಸ್ಕೆಟ್‌ ಬಾಲ್‌ ಹಾಕುವ ಆಟದಲ್ಲೂ ಆಲೆ ಸೂರ್ಯ ತನ್ನ ಕರಾಮತ್ತು ಪ್ರದರ್ಶಿಸಿತು. ಬಿಸಿಲಿನಿಂದ ಕಂಗೆಟ್ಟಿದ ಜನಕ್ಕೆ ಆನೆಗಳು ನೀರು ಪ್ರೋಕ್ಷ ಣೆ ಮಾಡುವ ಮೂಲಕ ಸಂತಸ ನೀಡಿದವು. ಕಬ್ಬು ತಿನ್ನುವ ಸ್ಪರ್ಧೆ, ಬಾಲ ಹಿಡಿದು, ಕಿವಿ ಹಿಡಿದು ನಡೆಯುವ ಆಟ, ದಂತ ಹಿಡಿದು ನಡೆಯುವುದು ಹೀಗೆ ಜಲವು ಸ್ಪರ್ಧೆಗಳು ಪ್ರೇಕ್ಷ ಕರಿಗೆ ರಂಜಿಸಿದವು.

ಫುಟ್‌ಬಾಲ್‌ ಹಾಗೂ ಬಾಸ್ಕೆಟ್‌ಬಾಲ್‌ ಆಟವಂತೂ ಪುಟಾಣಿಗಳಿಗೆ ನೋಡಲು ತುಂಬಾ ಸೊಗಸಾಗಿತ್ತು. ಅಮತ, ಆಲೆ ಮತ್ತು ಸೂರ್ಯ ಫುಟ್‌ಬಾಲ್‌ನಲ್ಲಿ ಅತ್ಯದ್ಭುತವಾಗಿಯೇ ಚೆಂಡನ್ನು ಕ್ರೀಡಾಂಗಣದ ಮೂಲೆಗಳಿಗೆ ಅಟ್ಟುತ್ತಿದ್ದ ದೃಶ್ಯ ಕಂಡು ಕುಪ್ಪಳಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಪುಟಾಣಿಗಳು, ಮಹಿಳೆಯರು, ವೃದ್ಧರು ಗಜಪಡೆಯ ಆಟ ಕಂಡು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಅಬ್ಬರ ಇಲ್ಲ ಮನೋರಂಜನೆಯೇ ಎಲ್ಲ:

ಪ್ರತಿ ವರ್ಷ ವನ್ಯಜೀವಿ ಸಪ್ತಾಹದ ವೇಳೆ ಆನೆ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಮತ್ತೊಮ್ಮೆ ಆನೆ ಹಬ್ಬ ನೋಡುವ ಅವಕಾಶ ಸಿಕ್ಕಿತ್ತು. ಇಲಾಖೆ ವತಿಯಿಂದ ಆನೆ ಹಬ್ಬಕ್ಕೆ ಅನುಮತಿ ಸಿಗದ ಕಾರಣ ಸರಳವಾಗಿ ಆನೆಗಳು ಭಾಗವಹಿಸಿದ್ದವು. ಯಾವುದೇ ಬಣ್ಣ, ಪೋಷಾಕುಗಳಿಲ್ಲದೇ ಜನರನ್ನು ರಂಜಿಸಿದವು. ಕೊನೆ ಕ್ಷ ಣದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಹಾಗೂ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಆಗಮಿಸಿ ಆನೆಗಳ ಆಟೋಟ ಕಣ್ತುಂಬಿಕೊಂಡರು.

ಭಾಗವಹಿಸಿದ ಆನೆಗಳು: ಸೂರ್ಯ, ಅರ್ಜುನ್‌, ಹೇಮಾವತಿ, ಆಲೆ, ಶಾರದಾ, ಗಂಗೆ, ಗೀತಾ ಹಾಗೂ ಅನಾಥ ಮರಿ ಭಾಗವಹಿಸಿದ್ದವು.


ಅನಾಥನಿಗೆ ಅಕ್ಕರೆ:

ಸಕಲೇಶಪುರದಲ್ಲಿ ತಾಯಿಯಿಂದ ಬೇರ್ಪಟ್ಟು ಸಕ್ರೆಬೈಲು ಆನೆ ಬಿಡಾರ ಸೇರಿರುವ ಆನೆ ಮರಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು ಅದರ ತುಂಟಾಟ ಕಂಡು ಬೆರಗಾದರು. ತಾಯಿಯಿಂದ ಬೇರ್ಪಟ್ಟು ಈ ಬಿಡಾರ ಸೇರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ ಇನ್ನೂ ಹೆಚ್ಚಿನ ಜನ ಅದರ ಸುತ್ತಲೂ ನೆರೆದರು. ಬಹುತೇಕರು ಸೆಲ್ಫಿ ತೆಗೆದು ಕೊಂಡರೆ, ಕೆಲವರು ಸ್ಪರ್ಶಿಸಿ ಸಂತೋಷಪಟ್ಟರು.

ಪ್ರೇಕ್ಷ ಕರಿಗೆ ರಂಜನೆ

ಆನೆಗಳು ಆಟೋಟಗಳಿಂದ ಜನರನ್ನು ರಂಜಿಸಿದ್ದಷ್ಟೇ ಅಲ್ಲದೇ ಸೆಲ್ಫಿಗೆ ಪೋಸ್‌ ಕೊಟ್ಟವು. ಯಾವುದೇ ಬಿಗಿ ಭದ್ರತೆ ಇಲ್ಲದ ಕಾರಣ ತಮ್ಮ ಇಷ್ಟದ ಆನೆಗಳ ಬಳಿ ಹೋಗಲು ಪ್ರೇಕ್ಷ ಕರಿಗೆ ಅವಕಾಶ ನೀಡಲಾಗಿತ್ತು. ಮಾವುತರ ಅನುಮತಿ ಮೇರೆಗೆ ಆನೆಗಳನ್ನು ಮುಟ್ಟಿ, ಸೆಲ್ಫಿ ತೆಗೆಸಿಕೊಂಡು ಸಂತಸ ಪಟ್ಟರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ