ಆ್ಯಪ್ನಗರ

ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆ ಸ್ಥಾಪನೆ ಗುರಿ

ವಿಶ್ವಮಟ್ಟದ ಸಂಶೋಧನೆಗೆ ಪೂರಕವಾದ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ತೆರೆಯಬೇಕೆಂಬ ಗುರಿ ತಮ್ಮದು ಎಂದು ನೂತನ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.

Vijaya Karnataka 4 Aug 2019, 5:00 am
ಶಿವಮೊಗ್ಗ: ವಿಶ್ವಮಟ್ಟದ ಸಂಶೋಧನೆಗೆ ಪೂರಕವಾದ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ತೆರೆಯಬೇಕೆಂಬ ಗುರಿ ತಮ್ಮದು ಎಂದು ನೂತನ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.
Vijaya Karnataka Web SMG-0308-2-15-3SMG1


ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಮಾರನೆ ದಿನ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರು ಅಲ್ಲದೆ ಹೊರ ರಾಜ್ಯ ಮತ್ತು ವಿದೇಶದವರೂ ಇಲ್ಲಿ ಬಂದು ಸಂಶೋಧನೆ ನಡೆಸಲು ಅನುಕೂಲವಾಗುವಂತಹ ಸಂಪನ್ಮೂಲ ಹೊಂದಿದ ಅತ್ಯುತ್ತಮ ಸಂಶೋಧನಾ ಸಂಸ್ಥೆ ತೆರೆಯಬೇಕೆಂಬ ಮಹದಾಸೆ ಇದೆ ಎಂದು ತಿಳಿಸಿದರು.

ಮೈಸೂರು ಮತ್ತು ದಾವಣಗೆರೆ ವಿವಿಯಲ್ಲಿ ತಲಾ 10 ವರ್ಷ, ಕುವೆಂಪು ವಿವಿಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದೇನೆ. ವಿಶ್ವದೆಲ್ಲೆಡೆಯ ಪ್ರಮುಖ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಬೋಧನೆ ಮತ್ತು ಸಂಶೋಧನೆಯನ್ನು ಕಂಡಿದ್ದೇನೆ. ಈ ಅನುಭವವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ. ಕುವೆಂಪು ವಿವಿಯು ಈಗಾಗಲೆ ರಾಜ್ಯದ ನಂಬರ್‌ 1 ವಿಶ್ವವಿದ್ಯಾಲಯವೆನಿಸಿಕೊಂಡಿದೆ. ಈ ಹೆಗ್ಗಳಿಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ, ಬೋಧನೆ ಮತ್ತು ಸಂಶೋಧನೆಯಲ್ಲಿ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುವ ಗುರಿ ನಮಗಿದೆ ಎಂದರು.

ವಿಶ್ವವಿದ್ಯಾಲಯವು ಆರ್ಥಿಕವಾಗಿ ಸ್ವಲ್ಪ ಹಿನ್ನಡೆಯಲ್ಲಿದೆ. ವಾರ್ಷಿಕ 80 ಕೋಟಿ ರೂ. ಬೇಕಾದರೂ ಸರಕಾರದಿಂದ 56 ಕೋಟಿ ರೂ. ಅನುದಾನ ಬರುತ್ತಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ಯುಜಿಸಿಗೆ ನಿಯೋಗ ತೆರಳಲಾಗುವುದು. ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಹೊಸ ಯೋಜನೆಗಳನ್ನು ಕುವೆಂಪು ವಿವಿ ಮೂಲಕ ಜಾರಿಗೊಳಿಸುವ ಪ್ರಯತ್ನ ನಡೆಸಲಾಗುವುದು. ಜಾನಪದ, ಆಹಾರ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಕೋರ್ಸ್‌ಗಳು, ಕಲಾ ವಿಭಾಗದಲ್ಲಿ ಬೇಡಿಕೆ ಇರುವ ಕೋರ್ಸ್‌ಗಳನ್ನು ಆರಂಭಿಸಲು ಆದ್ಯತೆ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಚ್‌.ಎಸ್‌.ಭೋಜ್ಯಾನಾಯ್ಕ್‌, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜಾನಾಯಕ್‌, ಹಣಕಾಸು ಅಧಿಕಾರಿ ಪ್ರೊ. ಹಿರೇಮಣಿ ನಾಯ್ಕ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಸತ್ಯಪ್ರಕಾಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ