ಆ್ಯಪ್ನಗರ

ಜನರ ಜತೆಗಿದ್ದು, ಮುಂದಿನ ಚುನಾವಣೆ ಗೆಲ್ಲುತ್ತೇನೆ: ಮಧು

ನಾನು ಶಾಸಕನಾದ ಅವಧಿಯಲ್ಲಿ ತಾಲೂಕಿಗೆ ತಂದ ಅನುದಾನದ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸುತ್ತಿರುವ ಶಾಸಕ ಕುಮಾರ್‌ ಬಂಗಾರಪ್ಪ ಅವರಿಗೆ ತಾಕತ್ತಿದ್ದರೆ ಹೊಸ ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಸವಾಲ್‌ ಹಾಕಿದರು.

Vijaya Karnataka 23 Nov 2018, 5:00 am
ಸೊರಬ: ನಾನು ಶಾಸಕನಾದ ಅವಧಿಯಲ್ಲಿ ತಾಲೂಕಿಗೆ ತಂದ ಅನುದಾನದ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸುತ್ತಿರುವ ಶಾಸಕ ಕುಮಾರ್‌ ಬಂಗಾರಪ್ಪ ಅವರಿಗೆ ತಾಕತ್ತಿದ್ದರೆ ಹೊಸ ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಸವಾಲ್‌ ಹಾಕಿದರು.
Vijaya Karnataka Web SMR-22SRBP2


ಪಟ್ಟಣದ ಬಂಗಾರಧಾಮದಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಬೆಂಬಲಿಸಿದ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರಿಗೆ ಗುರುವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಪಕ್ಷದ ಶಾಸಕನಾಗಿದ್ದಾಗಲೂ ಅತ್ಯಧಿಕ ಅನುದಾನ ತಂದು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಅಭಿವೃದ್ಧಿ ಪಡಿಸಿದ ನನ್ನ ತಾಲೂಕಿನ ಜನ ಕೈಬಿಟ್ಟಿದ್ದು ನೋವಿನ ಸಂಗತಿ ಎಂದರು.

ನಾಯಕರ ಅಣತಿಯಂತೆ ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ, ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಭರವಸೆ ಇದೆ. ತಾಲೂಕಿಗೆ ನಾನು ಒಂದೆರಡು ಬಾರಿ ಮಾತ್ರ ಭೇಟಿ ನೀಡಿದ್ದು, ಇನ್ನು ಮೂರು ದಿನ ಸಮಯವಕಾಶ ಸಿಕ್ಕಿದ್ದರೆ ಗೆಲುವು ನನ್ನದಾಗುತ್ತಿತ್ತು ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿ, ಆಕಸ್ಮಿಕ ಚುನಾವಣೆ ಎದುರಾಗಿದ್ದರಿಂದ ತಯಾರಿ ಹಾಗೂ ಸಂಘಟನೆಯಲ್ಲಿ ಹಿಂದುಳಿದು ಸೋಲುಂಟಾಯಿತು. ಬಿಜೆಪಿಯು ಕ್ಷೇತ್ರದ 7 ಶಾಸಕರ ಬೆಂಬಲ ಹಾಗೂ ದೀರ್ಘ ಸಮಯ ಬಳಸಿಕೊಳ್ಳುವುದರ ಜತೆಗೆ ಹಸಿ ಸುಳ್ಳಿನ ರಾಜಕಾರಣ ಮಾಡಿ ಗೆದ್ದಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತಿ.ನಾ.ಶ್ರೀನಿವಾಸ ಮಾತನಾಡಿ, ಯಡಿಯೂರಪ್ಪ ಅವರು ರಾಜ್ಯಯಲ್ಲಿ ಬಿಜೆಪಿ ಕಟ್ಟದೆ ಮಗನನ್ನು ಗೆಲ್ಲಿಸುವಲ್ಲಿ ತೊಡಗಿದರು. ಇಲ್ಲಿನ ಶಾಸಕರ ಆದಿಯಾಗಿ ಜಿಲ್ಲೆಯ ಬಿಜೆಪಿ ಶಾಸಕರಿಂದ ಜನ ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಯವರು ಬಗರ್‌ ಹುಕುಂ ಸಾಗುವಳಿದಾರರಿಗೆ ಮೋಸ ಮಾಡಿದ್ದಾರೆ. ರೈತರ ವಿರೋಧಿ ಬಿಜೆಪಿ ವಿರುದ್ಧ ಜನರು ಎಚ್ಚರವಾಗಬೇಕು ಎಂದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌, ಕಾಂಗ್ರೆಸ್‌ ಮುಖಂಡ ರಾಜು ಎಂ.ತಲ್ಲೂರು, ಸೊರಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಶಿವಾನಂದಪ್ಪ, ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಚೌಟಿ ಚಂದ್ರಶೇಖರ್‌ ಪಾಟೀಲ್‌, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಎಚ್‌.ಗಣಪತಿ, ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಕೆ.ಪಿ.ರುದ್ರಗೌಡ, ವಕ್ತಾರ ಎಂ.ಡಿ.ಶೇಖರ್‌, ಎಪಿಎಂಸಿ ಅಧ್ಯಕ್ಷ ಕೆ.ಅಜ್ಜಪ್ಪ, ಜಿ.ಪಂ. ಸದಸ್ಯರಾದ ಶಿವಲಿಂಗಗೌಡ, ತಾರ ಶಿವಾನಂದಪ್ಪ, ರಾಜೇಶ್ವರಿ ಗಣಪತಿ, ಪ.ಪಂ. ಅಧ್ಯಕ್ಷೆ ಬೀಬೀ ಜುಲೇಖಾ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ