ಆ್ಯಪ್ನಗರ

ತಂಬಾಕು ದೂರ ಮಾಡಿದರೆ ಆರೋಗ್ಯ

ರಸ್ತೆ ಅಪಘಾತದಲ್ಲಿ ಸಾಯುವವರಿಗಿಂತ ಶೇ.75ರಷ್ಟು ಮಂದಿ ತಂಬಾಕು ಸೇವನೆಯಿಂದ ಮರಣ ಹೊಂದುತ್ತಿದ್ದಾರೆ ಎಂದು ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಧರ್ಮಶ್ರೀ ಬೇಸರ ವ್ಯಕ್ತಪಡಿಸಿದರು.

Vijaya Karnataka 25 Jun 2019, 5:00 am
ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ಸಾಯುವವರಿಗಿಂತ ಶೇ.75ರಷ್ಟು ಮಂದಿ ತಂಬಾಕು ಸೇವನೆಯಿಂದ ಮರಣ ಹೊಂದುತ್ತಿದ್ದಾರೆ ಎಂದು ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಧರ್ಮಶ್ರೀ ಬೇಸರ ವ್ಯಕ್ತಪಡಿಸಿದರು.
Vijaya Karnataka Web SMR-24GANESH7


ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು ಹಾಗೂ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ಸಹಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಧೂಮಪಾನ ಮಾಡುವಾಗ ಸುಮಾರು 600 ರಿಂದ 690 ಡಿಗ್ರಿ ಉಷ್ಣಾಂಶ ನಮ್ಮ ದೇಹದೊಳಗೆ ಸೇರುತ್ತದೆ. ಇದರಿಂದ ದೇಹದಲ್ಲಿ ನಾನಾ ರೀತಿಯ ರಾಸಾಯನಿಕ ಅಂಶಗಳು ಪ್ರವೇಶವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ದೇಶದಲ್ಲಿ ಶೇ.75ರಷ್ಟು ಯುವಜನತೆಯೇ ತಂಬಾಕು ಮತ್ತು ಧೂಮಪಾನದ ಚಟಕ್ಕೆ ದಾಸರಾಗುತ್ತಿದ್ದು ದೇಶದ ಭವಿಷ್ಯ ಅಪಾಯದಲ್ಲಿದೆ ಎಂದರು.

ತಂಬಾಕು ಹಾಗೂ ಸಿಗರೇಟ್‌ ಸೇವನೆಯಿಂದ ಕ್ಯಾನ್ಸರ್‌, ಹೃದಯ ಹಾಗೂ ಶ್ವಾಸ ಸಂಬಂಧಿ ಮಾರಣಾಂತಿಕ ಕಾಯಿಲೆಗಳು ಬರುತ್ತದೆ. ಧೂಮಸಹಿತ ತಂಬಾಕುಗಳಲ್ಲಿ 7 ಸಾವಿರ ರಾಸಾಯನಿಕ ವಸ್ತುಗಳಿದ್ದು, ಇದರಲ್ಲಿ ಶೇ. 69ರಷ್ಟು ಕ್ಯಾನ್ಸರ್‌ ಕಾರಕ ವಸ್ತುಗಳಿವೆ. ಧೂಮ ರಹಿತ ಜಗಿಯುವ ತಂಬಾಕು ಉತ್ಪನ್ನಗಳಲ್ಲಿ 3 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳಿದ್ದು ಅದರಲ್ಲಿ ಶೇ.28ರಷ್ಟು ಕ್ಯಾನ್ಸರ್‌ ಕಾರಕ ವಸ್ತುಗಳಿವೆ ಎಂದರು.

ಯುವ ಜನರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾಗಿರುವ ಅವಶ್ಯಕತೆ ಇದೆ. ದೇಶದ ಭವಿಷ್ಯ ಸುಂದರವಾಗಿರಬೇಕಾದರೆ ಮಕ್ಕಳನ್ನು ಒಳ್ಳೆಯ ಹಾದಿಯಲ್ಲಿ ನಡೆಯುವಂತೆ ಮಾಡಬೇಕಾಗಿರುವುದು ಶಿಕ್ಷ ಕರು ಮತ್ತು ಪೋಷಕರ ಜವಾಬ್ದಾರಿ ಎಂದರು.

ಇಂದು ವಿಶ್ವದಲ್ಲಿ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ವಿಶ್ವಾದ್ಯಂತ 60ಲಕ್ಷ ಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಮೃತಪಡುತ್ತಿದ್ದು, ಅದರಲ್ಲಿ ಯುವಜನರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಧೂಮಪಾನದಿಂದ ಹೊರ ಬರುವ ಕಾರ್ಬನ್‌ ಮೊನಾಕ್ಸೈಡ್‌ ಎಂಬ ವಿಷಕಾರಿ ಅನಿಲ ನಮ್ಮ ದೇಹದ ಅಂಗಗಳನ್ನು ಹಂತ-ಹಂತವಾಗಿ ನಾಶಮಾಡುತ್ತಾಬರುತ್ತದೆ. ಶ್ವಾಸಕೋಶ, ಹೃದಯ, ಮೂತ್ರಪಿಂಡ, ಮಿದುಳು ಹೀಗೆ ದೇಹದ ಎಲ್ಲ ಅಂಗಗಳು ಹಾನಿಗೊಳ್ಳಲಿವೆ ಎಂದರು.

ಇದೇ ಸಂದರ್ಭ ಕಾರ್ಬನ್‌ ಮೊನಾಕ್ಸೈಡ್‌ ಡಿಟೆಕ್ಟರ್‌ನ ಪ್ರಾಯೋಗಿಕ ಮಾದರಿಯನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಪ್ರದರ್ಶಿಸಲಾಯಿತು.

ಡಾ. ಸಚಿನ್‌ ಸಿಹ್ನ, ಸುಬ್ಬಯ್ಯ ದಂತ ಮಹಾವಿದ್ಯಾಲಯ ಉಪನ್ಯಾಸಕ ಡಾ. ಚೇತನ್‌ ಜಗದೀಶ್‌, ಡಾ. ಮಂಜುನಾಥ್‌, ಡಾ. ಜುರೇಜ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್‌. ನವೀನ್‌, ಆಡಳಿತಾಧಿಕಾರಿ ಎಂ.ಆರ್‌. ರಾಜೇಂದ್ರ, ಕಾರ್ಮಿಕ ಕಲ್ಯಾಣಾಧಿಕಾರಿ ಬಂಗಾರಪ್ಪ, ನಿಲ್ದಾಣಾಧಿಕಾರಿ ಸಿದ್ದೇಶ್‌, ಸಹಾಯಕ ಟ್ರಾಫಿಕ್‌ ಅಧಿಕಾರಿ ಅಂಬಿಕಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ