ಆ್ಯಪ್ನಗರ

ಖಾಸಗಿ ಹೋಟೆಲ್‌ನಲ್ಲಿ ಆಡಳಿತ ಪ್ರಜಾಪ್ರಭುತ್ವಕ್ಕೆ ಅವಮಾನ

ವಿಧಾನಸೌಧದಲ್ಲಿ ಕೆಲಸ ಮಾಡಬೇಕಾದ ಮುಖ್ಯಮಂತ್ರಿ ಖಾಸಗಿ ಹೋಟೆಲ್‌ನಲ್ಲಿ ಆರು ತಿಂಗಳಿಂದ ರೂಂ ಮಾಡಿಕೊಂಡು ಆಡಳಿತ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

Vijaya Karnataka 23 Nov 2018, 5:00 am
ಶಿಕಾರಿಪುರ : ವಿಧಾನಸೌಧದಲ್ಲಿ ಕೆಲಸ ಮಾಡಬೇಕಾದ ಮುಖ್ಯಮಂತ್ರಿ ಖಾಸಗಿ ಹೋಟೆಲ್‌ನಲ್ಲಿ ಆರು ತಿಂಗಳಿಂದ ರೂಂ ಮಾಡಿಕೊಂಡು ಆಡಳಿತ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
Vijaya Karnataka Web SMR-22SKP1


ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಮತದಾರರಿಗೆ ಅಭಿನಂದನೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನಸೌಧದಲ್ಲಿ ಕುಳಿತು ರಾಜ್ಯದ 6.5 ಕೋಟಿ ಜನರ ಕೆಲಸ ಮಾಡಬೇಕಿದ್ದ ಮುಖ್ಯಮಂತ್ರಿಗೆ ಈ ಕುರಿತು ಕೇಳಿದರೆ ನನಗೂ ಖಾಸಗಿ ಜೀವನ ಇದೆ ಎನ್ನುವ ಉತ್ತರ ನೀಡುತ್ತಿದ್ದಾರೆ. ಹೋಟೆಲ್‌ ಕೊಠಡಿಗೆ ಅಧಿಕಾರಿಗಳನ್ನು ಕರೆಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಬರಗಾಲ ಪೀಡಿತ ಪ್ರದೇಶಕ್ಕೆ ಈವರೆಗೂ ಒಬ್ಬ ಮಂತ್ರಿ, ಅಧಿಕಾರಿ ತೆರಳಿ ಬಡವರ ಕಷ್ಟ ವಿಚಾರಿಸುವ ಕೆಲಸ ಮಾಡಿಲ್ಲ. ಉತ್ತರ ಕರ್ನಾಟಕದ ಜನ ಈ ಕುರಿತು ಕೇಳಿದರೆ ನೀವು ವೋಟು ಕೊಟ್ಟವರಿಗೆ ಕೇಳಿರಿ ಎಂದು ಮಾತನ್ನಾಡುವ ಬೇಜವಾಬ್ದಾರಿ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿರುವುದು ದುರಂತ ಎಂದರು.

ಸರಕಾರದಿಂದ ಹಗಲು ದರೋಡೆ ನಡೆಯುತ್ತಿದೆ, ಖಾಸಗಿ ಜೀವನ ಬೇಕಿರುವ ನೀವು ರಾಜ್ಯದ ಮುಖ್ಯಮಂತ್ರಿ ಯಾಕೆ ಆಗಿದ್ದೀರಿ ಎಂದು ಪ್ರಶ್ನಿಸಿದ ಅವರು, ಕಬ್ಬಿನ ಬಾಕಿಗಾಗಿ ಪ್ರತಿಭಟನೆ ಮಾಡುತ್ತಿದ್ದ ರೈತ ಮಹಿಳೆಗೆ ಅವಾಚ್ಯ ಶಬ್ದ ಬಳಸಿರುವುದಕ್ಕೆ ನಾಚಿಗೆಯಾಗಬೇಕು. ಲೋಕಸಭೆ ಚುನಾವಣೆ ಗೆದ್ದಿದ್ದೇವೆ ಎನ್ನುವ ಭ್ರಮೆಯಲ್ಲಿ ಸಮ್ಮಿಶ್ರ ಸರಕಾರವಿದೆ. ರೈತರ ಸಾಲಮನ್ನಾ ಮಾಡುವ ಯಾವುದೆ ಲಿಖಿತ ಆದೇಶ ಈವರೆಗೂ ಬ್ಯಾಂಕ್‌ಗೆ ನೀಡಿಲ್ಲ, ದಿನಕ್ಕೊಂದು ನಿಯಮದ ಮೂಲಕ ರೈತವಿರೋಧ ನೀತಿ ಅನುಸರಿಸಲಾಗುತ್ತಿದೆ. ಅದರ ವಿರುದ್ಧ ಬೆಳಗಾವಿ ಅಧಿವೇಶನದ ವೇಳೆ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಲೋಕಸಭೆ ಚುನಾವಣೆ ಅನಿರೀಕ್ಷಿತ ಆದರೂ ದಸರಾ, ದೀಪಾವಳಿ ಹಬ್ಬ ಬಿಟ್ಟು ಕಾರ‍್ಯಕರ್ತರು ಚುನಾವಣೆ ಕೆಲಸ ಮಾಡುವ ಮೂಲಕ ನನ್ನ ಗೆಲುವಿಗೆ ಕಾರಣರಾಗಿದ್ದಾರೆ. ಎಲ್ಲ ತಾಲೂಕಿನಲ್ಲೂ ಮತದಾರರಿಗೆ ಅಭಿನಂದನೆ ಸಲ್ಲಿಸಿ ನಂತರ ದೆಹಲಿಗೆ ತೆರಳಿ ಪ್ರಮಾಣವಚನ ಸ್ವೀಕರಿಸುವ ನಿಶ್ಚಯ ಮಾಡಿದ್ದೇನೆ. ಇನ್ನುಳಿದಿರುವ ನಾಲ್ಕು ತಿಂಗಳಲ್ಲಿ ದೆಹಲಿಯಲ್ಲೆ ಇದ್ದು ರೈಲ್ವೆ ಯೋಜನೆ, ಭದ್ರಾವತಿ ಕೈಗಾರಿಕೆ ಪುನಶ್ಚೇತನ ಸೇರಿ ಜಿಲ್ಲೆಯ ಎಲ್ಲ ಪ್ರಮುಖ ಕೆಲಸಕ್ಕೆ ಚಾಲನೆ ನೀಡುವುದಕ್ಕೆ ಶ್ರಮಿಸುತ್ತೇನೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೊಳಗಿ ರೇವಣಪ್ಪ ಮಾತನಾಡಿ, ಲೋಕಸಭೆ ಚುನಾವಣೆ ವೇಳೆಗೆ ಪ್ರತಿ ಬೂತ್‌ನಲ್ಲಿ ಇನ್ನಷ್ಟು ಹೆಚ್ಚು ಮತದಾರರನ್ನು ಸೆಳೆಯುವುದಕ್ಕೆ ಈಗಿನಿಂದಲೆ ಕೆಲಸ ಆರಂಭಿಸಬೇಕು. ನಮ್ಮಿಂದ ದೂರವಿರುವ ಜನರನ್ನು ಹತ್ತಿರಕ್ಕೆ ಕರೆಯಬೇಕು, ಎಲ್ಲಿ ನಮಗೆ ಹಿನ್ನಡೆಯಾಗಿದೆ ಅಲ್ಲಿನ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಎಂಐಡಿಬಿ ಮಾಜಿ ಅಧ್ಯಕ್ಷ ಪದ್ಮನಾಭಭಟ್‌, ಮುಖಂಡರಾದ ಕೆ.ಎಸ್‌.ಗುರುಮೂರ್ತಿ, ಹಿರೇಕೇರೂರು ಮಾಜಿ ಶಾಸಕ ಯು.ಬಿ.ಬಣಕಾರ್‌, ಸುಬ್ರಹ್ಮಣ್ಯ ಕೌಲಿ, ರಾಮನಾಯ್ಕ, ದಾನಿ ರುದ್ರಪ್ಪ, ಕೆ.ಹಾಲಪ್ಪ, ರೇಣುಕಾ ಹನುಮಂತಪ್ಪ, ಅರುಂಧತಿ ರಾಜೇಶ್‌, ಅಕ್ಷ ತಾ, ಬಿ.ಸುರೇಶ್‌ನಾಯ್ಕ, ಮಮತಾ ಸಾಲಿ, ಪದ್ಮಾ ಗಜೇಂದ್ರ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ