ಆ್ಯಪ್ನಗರ

ಮೂವರು ಯುವಕರಿಂದ ಜೈನ ಸನ್ಯಾಸತ್ವ ಸ್ವೀಕಾರ

ನಗರದ ಬಿಇ ಪದವೀಧರ, ಜೈನ ಸಮಾಜದ ಜಿನೇಶ್‌ ಕುಮಾರ್‌ ಜೈನ್‌, ವಿಜಯಪುರದ ಹಸ್ತಿಮಲ್‌ ಹಾಗೂ ಆಂಧ್ರ ಪ್ರದೇಶದ ಭರತ್‌ಕುಮಾರ್‌ ಅವರು 15 ಸಂತರು ಹಾಗೂ 5 ಸಾದ್ವಿಯರು ಸೇರಿದಂತೆ ಸಾವಿರಾರು ಜನರ ಸಮ್ಮುಖದಲ್ಲಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದರು.

Vijaya Karnataka 14 Dec 2018, 5:00 am
ಭದ್ರಾವತಿ: ನಗರದ ಬಿಇ ಪದವೀಧರ, ಜೈನ ಸಮಾಜದ ಜಿನೇಶ್‌ ಕುಮಾರ್‌ ಜೈನ್‌, ವಿಜಯಪುರದ ಹಸ್ತಿಮಲ್‌ ಹಾಗೂ ಆಂಧ್ರ ಪ್ರದೇಶದ ಭರತ್‌ಕುಮಾರ್‌ ಅವರು 15 ಸಂತರು ಹಾಗೂ 5 ಸಾದ್ವಿಯರು ಸೇರಿದಂತೆ ಸಾವಿರಾರು ಜನರ ಸಮ್ಮುಖದಲ್ಲಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದರು.
Vijaya Karnataka Web SMR-13BDVT6


ಕನಕ ಮಂಟಪ ಮೈದಾನದಲ್ಲಿ ಜೈನ ಸಮುದಾಯ ಆಯೋಜಿಸಿದ್ದ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮದ ಅಂತಿಮ ದಿನವಾದ ಬುಧವಾರ ಸಂಜೆ, ಜೈನ ಮುನಿಗಳಾದ ಶ್ರೀ ವಿಜಯ್‌ ಅಭಯಚಂದ್ರ ಸೂರಿಶ್ವರ್‌ ಜಿ ಹಾಗೂ ಹೀರ್‌ ಚಂದ್ರ ಸೂರಿಶ್ವರ್‌ ಜೀ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ನಗರದ ಭೂತನಗುಡಿಯ ದಿನೇಶ್‌ ಜೈನ್‌ ಹಾಗೂ ರಾಜುಲ್‌ ದೇವಿ ಅವರ ಪುತ್ರ ಜಿನೇಶ್‌ ಕುಮಾರ್‌ ಜೈನ್‌ ಅವರನ್ನು ಗುರುಗಳು 'ಖೀಮಾ ವಿಜಯ್‌ ಜೀ ಮಹಾರಾಜ್‌ ಸಾಹೇಬ್‌' ಎಂದು ನಾಮಕರಣ ಮಾಡಿದರೆ, ಭರತ್‌ ಕುಮಾರ್‌ ಅವರನ್ನು 'ಭೂವನ್‌ ತಿಲಕ್‌ ವಿಜಯ್‌ ಜೀ ಮಹಾರಾಜ್‌ ಸಾಹೇಬ್‌' ಎಂದು, ಹಸ್ತಿಮಲ್‌ ಅವರನ್ನು 'ಹರ್ಷ್‌ ವಿಜಯ್‌ ಜೀ ಮಹಾರಾಜ್‌ ಸಾಹೇಬ್‌' ಎಂದು ನಾಮಕರಣ ಮಾಡಿದರು.

ಈ ಸಂದರ್ಭ ಮಾತನಾಡಿದ ಹೀರ್‌ ಚಂದ್ರ ಸೂರಿಶ್ವರ್‌ ಜೀ, ಇಲ್ಲಿನ ಜೈನ ಸಮುದಾಯದವರು ಒಗ್ಗಟ್ಟಿನಿಂದ ಕೂಡಿರುವುದಕ್ಕೆ 3 ದಿನ ನಡೆದ ಕಾರ್ಯಕ್ರಮವೇ ಸಾಕ್ಷಿ. ಸಮುದಾಯದಲ್ಲಿರುವ ಒಳಪಂಗಡಗಳೆಲ್ಲವನ್ನೂ ವಿಶ್ವಾಸದಿಂದ ಕಾಣುವ ನಿಮ್ಮೆಲ್ಲರ ಗುಣದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು.

ಮೂರು ದಿನ ನಡೆದ ಸನ್ಯಾಸ ದೀಕ್ಷಾ ಕಾರ್ಯಕ್ರಮಕ್ಕೆ ರಾಜಸ್ಥಾನ್‌ ಸೇರಿದಂತೆ ರಾಜ್ಯದ ದಾವಣಗೆರೆ, ಬಿಜಾಪುರ, ಹಾವೇರಿ, ಚಳ್ಳಕೆರೆ, ಶಿವಮೊಗ್ಗ ಜಿಲ್ಲೆಗಳ ಸಮಾಜದ ಮುಖಂಡರು, ಬಂಧುಗಳು, ಸಾರ್ವಜನಿಕರು ಆಗಮಿಸಿದ್ದರು. ಕಾರ್ಯಕ್ರಮದ ನಂತರ ದೀಕ್ಷೆ ಸ್ವೀಕರಿಸಿದ ದೀಕ್ಷಾರ್ಥಿಗಳು, ಮುನಿಗಳು, ಸಾಧ್ವಿಗಳು ಹಾಗೂ ಸಂತರೊಂದಿಗೆ ಬೀರೂರಿನಲ್ಲಿ ನಡೆಯುವ ಕಾರ್ಯಕ್ರಮದತ್ತ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ