ಆ್ಯಪ್ನಗರ

ಹಳ್ಳಿಗಳಲ್ಲೂ ಜನಸಂಪರ್ಕ ಸಭೆ : ಎಸ್‌ಪಿ

ಜನರ ಅಹವಾಲು ಹತ್ತಿರದಿಂದ ಆಲಿಸುವ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಹಳ್ಳಿಗೆ ವಿಸ್ತರಿಸುವ ಚಿಂತನೆ ಇದೆ. ಕೇಂದ್ರ ಕಚೇರಿಯಲ್ಲಿ ಕಾರ‍್ಯನಿರ್ವಹಿಸುವಾಗ ಕೆಲವೊಂದು ಗಂಭೀರ ಸಮಸ್ಯೆಗಳ ಮಾಹಿತಿ ತಿಳಿಯುವುದಿಲ್ಲ. ಜನಸಂಪರ್ಕ ಸಭೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅಶ್ವಿನಿ ಹೇಳಿದರು.

Vijaya Karnataka 23 Jun 2019, 5:00 am
ತೀರ್ಥಹಳ್ಳಿ: ಜನರ ಅಹವಾಲು ಹತ್ತಿರದಿಂದ ಆಲಿಸುವ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಹಳ್ಳಿಗೆ ವಿಸ್ತರಿಸುವ ಚಿಂತನೆ ಇದೆ. ಕೇಂದ್ರ ಕಚೇರಿಯಲ್ಲಿ ಕಾರ‍್ಯನಿರ್ವಹಿಸುವಾಗ ಕೆಲವೊಂದು ಗಂಭೀರ ಸಮಸ್ಯೆಗಳ ಮಾಹಿತಿ ತಿಳಿಯುವುದಿಲ್ಲ. ಜನಸಂಪರ್ಕ ಸಭೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅಶ್ವಿನಿ ಹೇಳಿದರು.
Vijaya Karnataka Web SMR-22TTH2


ಪಟ್ಟಣದ ಮಾಧವ ಮಂಗಲ ಸಭಾಭವನದಲ್ಲಿ ಶನಿವಾರ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸಿ ಅವರು ಮಾತನಾಡಿದರು.

ಕೆಲಸ ಮಾಡಿಯೂ ಬೈಯಿಸಿಕೊಳ್ಳುವ ಪೊಲೀಸ್‌ ಇಲಾಖೆಗೆ ಜನರ ಸಹಕಾರ ಮುಖ್ಯ. ಬಹಳಷ್ಟು ಸಂದರ್ಭ ಪೊಲೀಸರು ಒತ್ತಡದಿಂದ ಕೆಲಸ ಮಾಡುತ್ತಾರೆ. ಪೊಲೀಸ್‌ ಇಲಾಖೆ ಒಂದೇ ಜನರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಎಸ್ಪಿ ಎದುರು ವೃದ್ಧೆಯ ಅಳಲು : ಗಂಡನ ಅಣ್ಣನ ಮಕ್ಕಳು ತನ್ನನ್ನು ಸ್ವಂತ ಮನೆಯಿಂದ ಹೊರ ಹಾಕಿದ್ದಾರೆ. ಈಗ ಬಾಡಿಗೆ ಮನೆಯಲ್ಲಿ ವಾಸ ಇರುವ ನನಗೆ ನ್ಯಾಯ ಕೊಡಿ ಎಂದು ಡಾ. ಅಶ್ವಿನಿ ಅವರ ಬಳಿ ವಯೋವೃದ್ಧೆ ಪಟ್ಟಣದ ಬಾಳೇಬೈಲು ಸುಗುಣಬಾಯಿ ಅಲವತ್ತುಕೊಂಡರು. ಮನೆ ವಶಕ್ಕೆ ಪಡೆಯಬೇಕು ಎಂದು ಮಹಿಳಾ ಆಯೋಗ ಸೂಚನೆ ನೀಡಿದ್ದರೂ ಪೊಲೀಸ್‌ ಇಲಾಖೆ ಸಹಕರಿಸುತ್ತಿಲ್ಲ ಎಂದರು. ಸ್ಥಳ ಪರಿಶೀಲಿಸಿ ಕಾನೂನು ಅನ್ವಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಾ. ಅಶ್ವಿನಿ ಭರವಸೆ ನೀಡಿದರು.

ಮರಳು ಪೊಲೀಸ್‌ ಇಲಾಖೆಗೆ ಸಂಬಂಧಿಸಿದಲ್ಲ : ಸರಕಾರದ ವಸತಿ ಫಲಾನುಭವಿಗಳಿಗೆ ಮರಳು ಸಿಗುತ್ತಿಲ್ಲ. ಬಡವರಿಗೆ ಮರಳು ಒದಗಿಸಲು ಕ್ರಮ ಕೈಗೊಳ್ಳಿ ಎಂದು ಆರಗ ಗ್ರಾ.ಪಂ. ಅಧ್ಯಕ್ಷ ಜಗದೀಶ್‌ ಆಗ್ರಹಿಸಿದರು. ಅಕ್ರಮ ಮರಳು, ಕಲ್ಲು ಗಣಿಗಾರಿಕೆ, ಆಗುಂಬೆ ಠಾಣೆಯಲ್ಲಿ ಪೊಲೀಸ್‌ ಕಾರ‍್ಯನಿರ್ವಹಣೆ ದೋಷದ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಮನವಿ ಮಾಡಿದರು. ಮರಳು ಪೂರೈಸುವ ನಿರ್ಧಾರವನ್ನು ಪೊಲೀಸ್‌ ಇಲಾಖೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಯಮ ಪಾಲಿಸುವುದು ಮಾತ್ರ ಇಲಾಖೆ ಕೆಲಸ. ಮರಳು ಪೂರೈಕೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಮನವಿ ಸಲ್ಲಿಸಿ. ಆಗುಂಬೆ ಠಾಣೆ ಸುಧಾರಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಾ. ಅಶ್ವಿನಿ ಉತ್ತರಿಸಿದರು.

ಹಣಗೆರೆ, ಕೋಣಂದೂರಲ್ಲಿ ಠಾಣೆ ಸ್ಥಾಪಿಸಿ : ಅಧಿಕ ಭಕ್ತರು ಆಗಮಿಸುವ ಹಣಗೆರೆಯಲ್ಲಿ ಉಪಠಾಣೆ ಸ್ಥಾಪಿಸಿ ಎಂದು ಜಿ.ಪಂ. ಸದಸ್ಯ ಕಾಸರವಳ್ಳಿ ಶ್ರೀನಿವಾಸ್‌ ಗಮನಕ್ಕೆ ತಂದರು. ಕೋಣಂದೂರು ಪಟ್ಟಣವಾಗಿ ಬೆಳೆಯುತ್ತಿದ್ದು ಠಾಣೆ ಅಗತ್ಯವಿದೆ ಎಂದು ಅಲ್ಲಿನ ಗ್ರಾ.ಪಂ. ಸದಸ್ಯ ಕೋಣಂದೂರು ಮೋಹನ್‌ಶೆಟ್ಟಿ ಆಗ್ರಹಿಸಿದರು. ಠಾಣೆ ಸ್ಥಾಪನೆಗೆ ಸರಕಾರಕ್ಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಅಶ್ವಿನಿ ಹೇಳಿದರು.

ಅಕ್ರಮ ಮದ್ಯ ಮಾರಾಟದ ಮಾಹಿತಿ ಕೊಡಿ : ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಕಾಸರವಳ್ಳಿ ಶ್ರೀನಿವಾಸ್‌ ಆಗ್ರಹಿಸಿದರು. ಈ ಕುರಿತು ಜನರಿಗೆ ಇರುವ ಮಾಹಿತಿ ನೀಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಹಿತಿಯನ್ನು ನೇರವಾಗಿ ತನಗೆ ನೀಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಡಾ. ಅಶ್ವಿನಿ ಭರವಸೆ ನೀಡಿದರು.

ಡಿವೈಎಸ್ಪಿ ರವಿಕುಮಾರ್‌, ಸಿಪಿಐ ಸುರೇಶ್‌ ಇದ್ದರು. ತಾ.ಪಂ.ಸದಸ್ಯೆ ಗೀತಾಶೆಟ್ಟಿ, ಪ.ಪಂ. ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ರೋಟರಿ ಶ್ರೀಧರ್‌, ಡಿ.ಎಸ್‌. ವಿಶ್ವನಾಥಶೆಟ್ಟಿ, ವೆಂಕಟೇಶ ಆಚಾರ್‌, ಜಫರುಲ್ಲಾ, ನಿತಿನ್‌ಕಾಮತ್‌, ಜೆ.ಆರ್‌. ಸತ್ಯನಾರಾಯಣ್‌, ಡಾನ್‌ರಾಮಣ್ಣ, ಅರಳಸುರುಳಿ ನಾಗರಾಜ್‌ ಮತ್ತಿತರರು ಸಮಸ್ಯೆಗಳ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ