ಆ್ಯಪ್ನಗರ

17ಕ್ಕೆ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.17ರಂದು ಬೆಳಗ್ಗೆ 11ಕ್ಕೆ ನಗರದ ಲಗನ ಮಂದಿರದಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಹೇಳಿದರು.

Vijaya Karnataka 16 Mar 2019, 5:00 am
ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.17ರಂದು ಬೆಳಗ್ಗೆ 11ಕ್ಕೆ ನಗರದ ಲಗನ ಮಂದಿರದಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಹೇಳಿದರು.
Vijaya Karnataka Web manjunath gowda rm


ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ಪಕ್ಷ ದ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಹಾಗೂ ಚುನಾವಣೆಗೆ ಪೂರ್ವ ತಯಾರಿ ದೃಷ್ಟಿಯಿಂದ ಈ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಪಕ್ಷ ದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ, ವೈಎಸ್‌ವಿ ದತ್ತ ಮತ್ತಿತರ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಭ್ಯರ್ಥಿ ಆಯ್ಕೆಯಲ್ಲಿ ಜಿಲ್ಲೆಯ ಮಟ್ಟಿಗೆ ಯಾವುದೇ ಗೊಂದಲವಿಲ್ಲ. ಜೆಡಿಎಸ್‌ , ಕಾಂಗ್ರೆಸ್‌ ಮುಖಂಡರು ಚರ್ಚೆ ನಡೆಸಿ ಸರ್ವಸಮ್ಮತವಾಗಿ ಮಧು ಬಂಗಾರಪ್ಪ ಅವರನ್ನು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಬಾರಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಳೆದ ಉಪಚುನಾವಣೆಯಲ್ಲಿ ಸಮಯ ಕಡಿಮೆ ಇದ್ದುದ್ದರಿಂದ ನಮ್ಮ ಅಭ್ಯರ್ಥಿಗೆ ಸೋಲಾಗಿದೆ. ಈ ಚುನಾವಣೆಗೆ ತುಂಬಾ ಟೈಮ್‌ ಇದೆ. ಕಳೆದ ಚುನಾವಣೆಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡು ಪಕ್ಷಗಳು ಜತೆಗೂಡಿ ಪ್ರಚಾರ ನಡೆಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಮಧು ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಬಾರಿ ಉತ್ತಮ ಬಜೆಟ್‌ ಮಂಡಿಸಿದ್ದಾರೆ. ಇದು ನಮ್ಮ ಗೆಲುವಿಗೆ ಪೂರಕವಾಗಲಿದೆ. ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಗೆ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಜಿಲ್ಲೆಯ ಏತ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ವರ್ಷದಿಂದ ನನೆಗುದಿಗೆ ಬಿದ್ದಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೂ ಚಿಂತನೆ ನಡೆಸಿದ್ದಾರೆ. ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಸಂಸದರಾಗಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಭದ್ರಾವತಿ ಕಾರ್ಖಾನೆ ಪುನಶ್ಚೇತನ ಗೊಳಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಇದು ಕೇವಲ ಚುನಾವಣಾ ಪ್ರಚಾರಕ್ಕಾಗಿ ಅಷ್ಟೇ. ಗಣಿ ಭೂಮಿ ಮಂಜೂರು ಮಾಡಿದ್ದು ರಾಜ್ಯ ಸರಕಾರ. ಇದನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳಲು ಕೇಂದ್ರ ಸರಕಾರಕ್ಕೆ ಎರಡು ವರ್ಷ ಬೇಕಾಯಿತು. ಬಿಜೆಪಿಗೆ ಇಷ್ಟು ವರ್ಷ ವಿಐಎಸ್‌ಎಲ್‌ ಕಾರ್ಖಾನೆ ಬೇಡವಾಗಿತ್ತು. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಕಾರ್ಖಾನೆ ಉಳಿವಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಡಿಸಿಸಿ ಬ್ಯಾಂಕ್‌ ಚುನಾವಣೆ ದಿನಾಂಕ ನಿಗದಿ ಮಾಡಿರುವುದು ಚುನಾವಣೆ ಆಯೋಗ. ಚುನಾವಣೆಯನ್ನು ಇಂದೇ ಬೇಕಾದರೆ ನಡೆಸಲಿ ಅಥವಾ ಆರು ತಿಂಗಳು ಬಿಟ್ಟು ನಡೆಸಲಿ. ಇಲ್ಲ ಎರಡು ವರ್ಷ ಈಗೆ ಮುಂದುವರಿಯಲಿ, ಇದಕ್ಕೆ ತಮ್ಮ ಅಭ್ಯಂತರವಿಲ್ಲ. ಜನರಿಗೆ ಇಷ್ಟವಾದವರನ್ನು ಆಯ್ಕೆ ಮಾಡುತ್ತಾರೆ. ಬಿಜೆಪಿಯವರು ಬೇಕಾದರೆ ಚುನಾವಣೆ ಮುಂದಕ್ಕೆ ಹಾಕಿಸಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌, ಪ್ರಮುಖರಾದ ರಾಮಕೃಷ್ಣ, ವಿದ್ಯಾಧರ್‌, ತ್ಯಾಗರಾಜ, ನಾಗರಾಜ ಕಂಕಾರಿ, ಜಿ.ಡಿ. ಮಂಜುನಾಥ್‌, ಎಚ್‌. ಪಾಲಾಕ್ಷಿ ಮತ್ತಿತರರು ಇದ್ದರು.

===========================
ರೈಲು ಬಿಟ್ಟಿದ್ದೆ ಸಾಧನೆ
ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ, ಸಂಸದರಾಗಿ ಬಹುಕಾಲ ಅಧಿಕಾರದಲ್ಲಿ ಇದ್ದರೂ ಜಿಲ್ಲೆಗೆ ಎಫ್‌ಎಂ ರೇಡಿಯೊ ತರಲು ಸಾಧ್ಯವಾಗಿಲ್ಲ. ಕಳೆದ ಐದು ವರ್ಷದಿಂದ ಕೇಂದ್ರದಲ್ಲಿ ತಮ್ಮದೇ ಸರಕಾರ ಇದ್ದರೂ ಜಿಲ್ಲೆಗೆ ಯಾವುದೇ ಯೋಜನೆ ಮಂಜೂರು ಮಾಡಿಸಲು ಇವರಿಂದ ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣ ಮಾಡ್ತೀವಿ, ಶಿವಮೊಗ್ಗವನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ಮಾಡುತ್ತೇನೆ ಎಂದು ರೈಲು ಬಿಟ್ಟಿದ್ದೇ ಬಿಜೆಪಿ ಅವರ ಸಾಧನೆ.
-ಡಾ.ಆರ್‌.ಎಂ. ಮಂಜುನಾಥಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ