ಆ್ಯಪ್ನಗರ

ಬತ್ತಿದ ಬಾವಿಯಲ್ಲಿ ನೀರು ಬರಿಸಿದ ಕಲ್ಲೂರು ಯುವಕರು

ಮಳೆಯಿಲ್ಲದೆ ಸಂಪೂರ್ಣವಾಗಿ ತಳಕಾಣುತ್ತಿದ್ದ ಸುಮಾರು 50 ಅಡಿ ಅಳದ ಪುರಾತನ ಕಾಲದ ಬಾವಿಯೊಂದರಲ್ಲಿ ಯುವಕರು ಸಂಘಟಿತರಾಗಿ ಭಾನುವಾರ ಹೂಳು ತೆಗೆಯುವ ಮೂಲಕ ನೀರು ತರಿಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Vijaya Karnataka 3 Jun 2019, 5:00 am
ರಿಪ್ಪನ್‌ಪೇಟೆ : ಮಳೆಯಿಲ್ಲದೆ ಸಂಪೂರ್ಣವಾಗಿ ತಳಕಾಣುತ್ತಿದ್ದ ಸುಮಾರು 50 ಅಡಿ ಅಳದ ಪುರಾತನ ಕಾಲದ ಬಾವಿಯೊಂದರಲ್ಲಿ ಯುವಕರು ಸಂಘಟಿತರಾಗಿ ಭಾನುವಾರ ಹೂಳು ತೆಗೆಯುವ ಮೂಲಕ ನೀರು ತರಿಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Vijaya Karnataka Web SMR-2RPT1


ಕಲ್ಲೂರಿನಲ್ಲಿ ಶಾಂತವೇರಿ ಗೋಪಾಲಗೌಡ ಅಧ್ಯಯನ ಕೆಂದ್ರದ ಸಮುದಾಯ ಭವನದ ಬಳಿಯಲ್ಲಿ ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ತೆರೆದ ಬಾವಿಯಲ್ಲಿ ಬೇಸಿಗೆಗೆ ಅಂತರ್ಜಲ ಕುಸಿದಿದ್ದು ಬಾವಿ ತಳಕಾಣುವಂತಾಗಿತ್ತು.

ಕಲ್ಲೂರು ಗ್ರಾಮದ ಯುವಕರಾದ ಮಾಲತೇಶ, ಉಮಾಪತಿ, ಶ್ರೀನಾಥ, ಶ್ಯಾಮ್‌, ಶ್ರೀಚೇತನ, ಕೆ.ಸಿ.ವಿಶ್ವನಾಥ ತಂಡದವರು ಮುಂಜಾನೆ ಪವರ್‌ಟಿಲ್ಲರ್‌ ಮತ್ತು ಬಕೆಟ್‌, ಗುದ್ದಲಿ ಹಗ್ಗ ಹಿಡಿದು ತಳಕಾಣುತ್ತಿದ್ದ ಬಾವಿಬಳಿ ತೆರಳಿ ಹೂಳು ಸ್ವಚ್ಛತೆಗೆ ಸಿದ್ಧರಾದರು. ಮಾಲತೇಶ್‌ ಮತ್ತು ವಿಶ್ವನಾಥ ಬಾವಿಗೆ ಇಳಿದು ಕೆಲ ಸಮಯದಲ್ಲಿಯೇ ಬಾವಿಯಲ್ಲಿನ ಹೂಳು ತೆಗೆದು ಮೇಲಕ್ಕೆ ಹಾಕಿದರು. ಬಾವಿಯ ಕೆಸರು ಹೊರ ತಗೆಯುತ್ತಿದ್ದಂತೆ ನೀರು ಬಾವಿಯಲ್ಲಿ ಕಾಣಿಸತೊಡಗಿದ್ದು ಕೆಲ ಹೊತ್ತಿನಲ್ಲಿ ಸುಮಾರು ಎರಡುವರೆ ಅಡಿಯಷ್ಟು ನೀರು ತುಂಬಲಾರಂಭಿಸಿತು. ನೆರೆದಿದ್ದ ಗ್ರಾಮಸ್ಥರಲ್ಲಿ ಯುವಕರ ಕಾರ್ಯ ಹರ್ಷ ಉಂಟು ಮಾಡಿದೆ.

ಯುವಕರ ಮಾದರಿ ಹೆಜ್ಜೆ
ಮಲೆನಾಡು ಭಾಗದಲ್ಲಿ ಕಳೆದ ಎಂಟು ಒಂಬತ್ತು ತಿಂಗಳಿಂದ ಮಳೆಯಾಗದೆ ಕೆರೆ ಕಟ್ಟೆಗಳಲ್ಲಿ ನೀರು ಒಣಗಿಹೊಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ಪರಿತಪಿಸುವಂತಹ ಈ ದಿನಗಳಲ್ಲಿ ಕಲ್ಲೂರು ಯುವಕರು ಬಾವಿ ಸ್ವಚ್ಛಗೊಳಿಸುವ ಮೂಲಕ ನೀರು ಒಸರುವಂತೆ ಮಾಡಿ ಮಾದರಿ ಹೆಜ್ಜೆ ಇರಿಸಿದ್ದಾರೆ. ಇದೇ ರೀತಿ ಈ ಭಾಗದ ಬಹಳಷ್ಟು ಗ್ರಾಮಗಳಲ್ಲಿ ಜಲ ಬತ್ತಿರುವ ಬಾವಿಗಳಿದ್ದು, ಸ್ಥಳೀಯ ಯುವಕರು ಹೂಳು ತೆಗೆದರೆ ನೀರು ಪಡೆಯಲು ಸಹಕಾರಿಯಾಗುತ್ತದೆ ಎಂದು ಶಾಂತವೇರಿ ಗೋಪಾಲಗೌಡ ಆಧ್ಯಯನ ಟ್ರಸ್ಟಿ ಕಲ್ಲೂರು ಮೇಘರಾಜ್‌, ಕಲ್ಲೂರು ಈರಪ್ಪ, ಕೆ.ಎಸ್‌.ಲೋಕಪ್ಪಗೌಡ ತಿಳಿಸಿದ್ದಾರೆ. ಬಾವಿ ಹೂಳು ತೆಗೆದ ಯುವಕರನ್ನು ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ