ಆ್ಯಪ್ನಗರ

ನಾಳೆ ಕುವೆಂಪು ವಿವಿ 29ನೇ ಘಟಿಕೋತ್ಸವ

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ 29ನೇ ವಾರ್ಷಿಕ ಘಟಿಕೋತ್ಸವ ಫೆ...

Vijaya Karnataka 14 Feb 2019, 5:00 am
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 29ನೇ ವಾರ್ಷಿಕ ಘಟಿಕೋತ್ಸವ ಫೆ.15ರಂದು ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.
Vijaya Karnataka Web kuvempu university 29th convocation tomorrow
ನಾಳೆ ಕುವೆಂಪು ವಿವಿ 29ನೇ ಘಟಿಕೋತ್ಸವ


ಈ ಬಾರಿಯ ಘಟಿಕೋತ್ಸವಕ್ಕೆ 16,466 ಮಹಿಳೆಯರು ಮತ್ತು 10,981 ಪುರುಷರು ಸೇರಿದಂತೆ 27,447 ಅಭ್ಯರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. 150 ಪುರುಷರು ಮತ್ತು 55 ಮಹಿಳೆಯರು ಸೇರಿ 205 ಅಭ್ಯರ್ಥಿಗಳು ಪಿಎಚ್‌ಡಿ ಪದವಿಗೆ ಅರ್ಹರಾಗಿದ್ದಾರೆ ಎಂದು ಕುಲಪತಿ ಪ್ರೊ.ಜೋಗನ್‌ ಶಂಕರ್‌ ತಿಳಿಸಿದರು.

ಪ್ರೆಸ್‌ಟ್ರಸ್ಟ್‌ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ 112 ಸ್ವರ್ಣಪದಕಗಳಿದ್ದು ಅವುಗಳನ್ನು 15 ಪುರುಷರು ಮತ್ತು 49 ಮಹಿಳೆಯರು ಸೇರಿ 64 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜು ಎಂಎ ಕನ್ನಡ ವಿಭಾಗದ ಕೆ.ಎ.ನೇತ್ರಾವತಿ ಅತಿಹೆಚ್ಚು 7 ಸ್ವರ್ಣ ಮತ್ತು 1 ನಗದು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಶಂಕರಘಟ್ಟದ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗ ಎನ್‌.ಅಲಿ ಅಹಮ್ಮದ್‌ 5 ಸ್ವಣ ಪದಕ, ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗದ ಎಚ್‌.ವಿ.ಅನುಷಾ 4 ಸ್ವರ್ಣ ಮತ್ತು 1 ನಗದು ಬಹುಮಾನ ಪಡೆದಿದ್ದಾರೆ ಎಂದರು.

ಎಂಎ ಸಮಾಜಶಾಸ್ತ್ರ ವಿಭಾಗದ ವಿಮೋಚನಾ, ಎಂಬಿಎ ವಿಭಾಗದ ಟಿ.ಪ್ರಿಯಾಂಕ, ಎಂಎಸ್ಸಿ ಪರಿಸರ ವಿಜ್ಞಾನದ ಸಿ.ಚೈತ್ರಾ, ಬಿ.ಕಾಂನ ಆದಿತ್ಯ ಎಸ್‌.ನಾಯ್ಕ್‌ ತಲಾ 4 ಸ್ವಣ ಪದಕ, ಎಂಎಸ್ಸಿ ಗಣಿತಶಾಸ್ತ್ರ ವಿಭಾಗದ ಆರ್‌.ವಿಮಲಾ 3 ಸ್ವಣ, 2 ನಗದು ಬಹುಮಾನ, ಎಂ.ಎ ಉರ್ದು ವಿಭಾಗದ ಅಮ್ರೀನ್‌ ಬಾನು 3ಸ್ವರ್ಣ ಮತ್ತು 1 ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ ಎಂದರು.

ಭಾಷೆ ವಿಷಯದಲ್ಲಿ ಕನ್ನಡ, ವಿಜ್ಞಾನ ನಿಕಾಯದಲ್ಲಿ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ಕೆಲ ವಿಷಯಗಳಿಗೆ ಹೆಚ್ಚಿನ ಚಿನ್ನದ ಪದಕಗಳಿವೆ. ಆದರೆ, ಕೆಲವೊಂದು ವಿಷಯಗಳಿಗೆ ಚಿನ್ನದ ಪದಕ ಅಥವಾ ನಗದು ಬಹುಮಾನ ಇಲ್ಲ. ದಾನಿಗಳು 1 ಲಕ್ಷ ರೂ. ಠೇವಣಿ ಇಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಒಂದು ಕಾಲದಲ್ಲಿ ವಿದ್ಯಾರ್ಥಿನಿಯರು ಶಾಲೆಗಳಿಗೆ ಬರುವುದು ಕಡಿಮೆಯಾಗಿತ್ತು. ಆದರೆ, ಈಗ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ವಿದ್ಯಾರ್ಥಿಗಳು ಬರುವುದು ಬಹಳ ಕಡಿಮೆಯಾಗಿದೆ. ಕುವೆಂಪು ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಶೇ.80ರಷ್ಟಿದ್ದರೆ, ವಿದ್ಯಾರ್ಥಿಗಳ ಸಂಖ್ಯೆ ಕೇವಲ ಶೇ.20ರಷ್ಟಿದೆ. ಏಕೆ ಹೀಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಎಚ್‌.ಎಸ್‌.ಭೋಜ್ಯಾನಾಯ್ಕ್‌, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜಾನಾಯಕ್‌, ಹಣಕಾಸು ಅಧಿಕಾರಿ ಪ್ರೊ.ಹಿರೇಮಣಿ ನಾಯ್ಕ್‌ ಹಾಜರಿದ್ದರು.

--------------

ಕೋಡಿಮಠದ ಶ್ರೀಗೆ ಗೌಡಾ

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 29ನೇ ಘಟಿಕೋತ್ಸವದ ಗೌರವ ಡಾಕ್ಟರೇಟ್‌ ಪ್ರದಾನ ಮಾಡುತ್ತಿದೆ.

ಗೌರವ ಡಾಕ್ಟರೇಟ್‌ಗೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ನಿಂದ 12 ಅರ್ಹರನ್ನು ಕುಲಾಧಿಪತಿಯೂ ಆದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಶಿಫಾರಸು ಮಾಡಲಾಗಿತ್ತು. ಕುಲಾಧಿಪತಿಗಳು ಕೋಡಿಮಠದ ಶ್ರೀಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ. ಸ್ವಾಮೀಜಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಜೋಗನ್‌ ಶಂಕರ್‌ ತಿಳಿಸಿದರು. ಬೆಂಗಳೂರಿನ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‌ ನಿರ್ದೇಶಕ ಡಾ. ಎಸ್‌.ಸಿ.ಶರ್ಮಾ ಘಟಿಕೋತ್ಸವ ಭಾಷಣ ಮಾಡುವರು. ಆದರೆ, ಈ ಬಾರಿ ರಾಜ್ಯಪಾಲರು ಘಟಿಕೋತ್ಸವಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಉನ್ನತ ಶಿಕ್ಷಣ ಸಚಿವರ ಜಿ.ಟಿ.ದೇವೇಗೌಡ ಅವರೂ ತಮ್ಮ ಹಾಜರಿ ಬಗ್ಗೆ ಖಚಿತಪಡಿಸಿಲ್ಲ ಎಂದರು.

-----------


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ