ಆ್ಯಪ್ನಗರ

ಅನ್ನದಾತರ ಕಂಗೆಡಿಸಿದೆ ಭೂಸರ್ವೆ

ಸಾಗುವಳಿ ಭೂ ಪ್ರದೇಶದ ಸರ್ವೆಗೆ ಸರಕಾರ ರೈತಸ್ನೇಹಿ ನಿಯಮ ಜಾರಿಗೊಳಿಸಿದರೂ ಭೂ ಸರ್ವೆ ರೈತರನ್ನು ಭೂತದಂತೆ ಕಾಡುತ್ತಿದ್ದು ನಿದ್ದೆಗೆಡಿಸಿದೆ. ಅಧಿಕ ಖರ್ಚಿನ ಜತೆಗೆ ಅನೇಕ ಸಮಸ್ಯೆ ಭಾದಿಸುತ್ತಿದ್ದು, ಸರಕಾರದ ಪೋಡಿಮುಕ್ತ ಅಭಿಯಾನ ರೈತರ ಕೈ ಹಿಡಿದಿಲ್ಲ.

Vijaya Karnataka 23 Feb 2020, 5:00 am
ರಾಘವೇಂದ್ರ ಮೇಗರವಳ್ಳಿ ,
Vijaya Karnataka Web land survey trouble to farmers
ಅನ್ನದಾತರ ಕಂಗೆಡಿಸಿದೆ ಭೂಸರ್ವೆ

ತೀರ್ಥಹಳ್ಳಿ: ಸಾಗುವಳಿ ಭೂ ಪ್ರದೇಶದ ಸರ್ವೆಗೆ ಸರಕಾರ ರೈತಸ್ನೇಹಿ ನಿಯಮ ಜಾರಿಗೊಳಿಸಿದರೂ ಭೂ ಸರ್ವೆ ರೈತರನ್ನು ಭೂತದಂತೆ ಕಾಡುತ್ತಿದ್ದು ನಿದ್ದೆಗೆಡಿಸಿದೆ. ಅಧಿಕ ಖರ್ಚಿನ ಜತೆಗೆ ಅನೇಕ ಸಮಸ್ಯೆ ಭಾದಿಸುತ್ತಿದ್ದು, ಸರಕಾರದ ಪೋಡಿಮುಕ್ತ ಅಭಿಯಾನ ರೈತರ ಕೈ ಹಿಡಿದಿಲ್ಲ.

ಭೂ ಸುಧಾರಣೆ ಕಾಯಿದೆ ಅನ್ವಯ ಗೇಣಿಹಕ್ಕಿನಡಿ ಜಮೀನು ಪಡೆದ ಸಾವಿರಾರು ರೈತರ ಸಾಗುವಳಿ ಜಮೀನು ಸರ್ವೆ ಇನ್ನು ಅಂತಿಮಗೊಂಡಿಲ್ಲ. ಭೂ ಸುಧಾರಣೆ ಕಾಯಿದೆಯಡಿ ಸಾಗುವಳಿ ಜಮೀನು ಹಕ್ಕು ಪಡೆದ ಸಾವಿರಾರು ರೈತರ ಬಳಿ ಇಂದಿಗೂ ಸಮರ್ಪಕ ಭೂ ದಾಖಲೆ ಇಲ್ಲ!

ವಿಸ್ತೀರ್ಣ ಸಾಗುವಳಿ ಅನುಭವದಂತೆ ಭೂ ನ್ಯಾಯಮಂಡಳಿ ರೈತರಿಗೆ ಗೇಣಿ ಪ್ರದೇಶದ ಭೂ ಹಕ್ಕು ನೀಡಿದೆ. ಭೂ ಸುಧಾರಣೆ ಕಾಯಿದೆ ತಿದ್ದುಪಡಿಯ ಸುದೀರ್ಘ 42 ವರ್ಷ ನಂತರವೂ ಸಾವಿರಾರು ರೈತರಿಗೆ ಸಾಗುವಳಿ ಅನುಭವದಂತೆ ಸಮರ್ಪಕ ಕಂದಾಯ ದಾಖಲೆ ದೊರೆತಿಲ್ಲ.

ಗೇಣಿ ಪ್ರದೇಶದ ಭೂ ಹಕ್ಕಿಗಾಗಿ ಫಾರಂ-7, ಫಾರಂ-7(ಎ)ಅಡಿ ಅರ್ಜಿಸಲ್ಲಿಸಿದ ಸಾವಿರಾರು ಪ್ರಕರಣಗಳು ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಭೂ ನ್ಯಾಯ ಮಂಡಳಿಯಲ್ಲಿಇತ್ಯರ್ಥಕ್ಕೆ ಬಾಕಿ ಉಳಿದಿದೆ. ಇತ್ಯರ್ಥ ಆಗದ, ಇತ್ಯರ್ಥ ಆದ ಪ್ರಕರಣಗಳ ವ್ಯಾಪ್ತಿಗೆ ಸೇರಿದ ರೈತರ ಪಾಲಿಗೆ ಸರ್ವೆ ಪೋಡಿ ಮುಕ್ತ ಅಭಿಯಾನ ನೆರವಿಗೆ ಬಂದಿಲ್ಲ.

ದುಬಾರಿ ಶುಲ್ಕ :

ಕಂದಾಯ ದಾಖಲೆಗಳ ದುರಸ್ತಿಯ ಭೂ ಸರ್ವೆಗೆ ಸರಕಾರ ದುಬಾರಿ ಶುಲ್ಕ ಪಡೆಯುತ್ತಿದ್ದು, ಸಣ್ಣ ಹಿಡುವಳಿ ರೈತರ ಜೇಬಿಗೆ ಭರ್ಜರಿ ಕತ್ತರಿ ಹಾಕಿದೆ. ವಿವಿಧ ಸರ್ವೆನಂಬರ್‌ ವ್ಯಾಪ್ತಿಯಲ್ಲಿರೈತರು ಸಾಗುವಳಿ ಜಮೀನು ಹೊಂದಿದ್ದು ಪ್ರತಿಸರ್ವೆ ನಂಬರ್‌ನ ಸರ್ವೆಗೆ ದುಬಾರಿ ಶುಲ್ಕ ಪಾವತಿಸಬೇಕಿದೆ. ಏಕವ್ಯಕ್ತಿ ಪೋಡಿ ಸರ್ವೆಗೆ ಅರ್ಜಿ ಶುಲ್ಕ ವಿಭಾಗಿಸಿರುವ ಸರಕಾರ ವಿವಿಧ ಸರ್ವೆ ನಂಬರ್‌ ವ್ಯಾಪ್ತಿ ಜಮೀನು ಸರ್ವೆಗೆ ಅರ್ಜಿ ಸಲ್ಲಿಸುವಾಗ 1200 ರೂ. ಪಾವತಿಸಿ ನಂತರದ ಸರ್ವೆ ನಂಬರ್‌ ಪ್ರದೇಶಕ್ಕೆ ಕ್ರಮವಾಗಿ 100 ರೂ. ಪಾವತಿಸಲು ಅವಕಾಶ ನೀಡಿದೆ. ರೈತನ ಸಾಗುವಳಿ ಹಕ್ಕು ವ್ಯಾಪ್ತಿಗೆ ಸೇರಿದ 1ಸರ್ವೆ ನಂಬರ್‌ನ ಜಮೀನು ವಿಸ್ತೀರ್ಣ ಸರ್ವೆಗೆ 1200ರೂ. ಪಾವತಿಸ ಬೇಕಿದೆ. ಪಟ್ಟಣ, ಗ್ರಾಮಾಂತರ ಪ್ರದೇಶಕ್ಕೆ ಪ್ರತ್ಯೇಕ ಶುಲ್ಕ ನಿಗದಿಸಲಾಗಿದ್ದು ರೈತರಿಗೆ ಹೊರೆ ಆದಂತಿದೆ. ಸರ್ವೆ ದಾಖಲೆ ಕ್ರಮ ಬದ್ಧಕ್ಕೆ ಸರಕಾರ ಸುಧಾರಿತ ಜಿಪಿಎಸ್‌ಯಂತ್ರ ಬಳಕೆಯ ಪಕ್ಕಾಪೋಡಿ ಅಭಿಯಾನ ಆರಂಭಿಸಿದ್ದರೂ ಸರ್ವೆ ಕೆಲಸ ಮಾತ್ರ ಮಂಕಾಗಿದೆ. ಅನೇಕ ಸಂದರ್ಭ ಚೈನ್‌ಸರ್ವೆ ಮಾಡಲಾಗುತ್ತಿದೆ.

ಪೋಡಿಗೆ ಗ್ರಹಚಾರ:

ಭೂ ಸುಧಾರಣೆ (ಎಲ್‌ಆರ್‌ಎಫ್‌), ತತ್ಕಾಲ್‌ ಪೋಡಿಯಡಿ ಸಲ್ಲಿಕೆ ಅರ್ಜಿಗಳಿಗೂ ಮುಕ್ತಿ ಸಿಗುತ್ತಿಲ್ಲ. ಸರ್ವೆಯರ್‌ ಸಿಬ್ಬಂದಿ ಪ್ರತಿ ತಿಂಗಳು 30 ಕಡತ ವಿಲೇವಾರಿ ಮಾಡುವಂತೆ ಸರಕಾರದ ಕಡ್ಡಾಯ ಆದೇಶ ಇದೆ. ಖಾಸಗಿ ಸರ್ವೆಯರ್‌ ನೇಮಕಕ್ಕೆ ಅವಕಾಶ ನೀಡಿದೆ. ಭೂ ಸುಧಾರಣೆ, ದರಖಾಸ್ತು, ಬಗರ್‌ಹುಕುಂ ಭೂ ಸಾಗುವಳಿ ಸಕ್ರಮ, ಸ್ವಂತ ಹಿಡುವಳಿ, ಕ್ರಯ, ವಿಭಾಗಕ್ಕೆ ಸಂಬಂಧಿಸಿದ ಸರ್ವೆಗೆ ಸರಕಾರ ರೈತರಿಗೆ ಉಪಯುಕ್ತ ನಿಯಮ ರೂಪಿಸಿದೆ. ಪಕ್ಕಾಪೋಡಿ ಅಭಿಯಾನ ಕಾರ‍್ಯಕ್ರಮದಡಿ ಭೂ ಸಾಗುವಳಿ ಪ್ರದೇಶಕ್ಕೆ ಕ್ರಮಬದ್ಧ ದಾಖಲೆಯ ಹಕ್ಕು ರೂಢಿಸಲು ಕ್ರಮ ಕೈಗೊಂಡಿದೆ.

ಭೂಮಾಪನ ಇಲಾಖೆ ಆಯುಕ್ತರು 2016 ಜೂನ್‌ 13ರಂದು ಪತ್ರ ಬರೆದ ನಂತರವೂ ಚುರುಕಾಗದೆ ಭೂ ಸರ್ವೆಯ ಪಕ್ಕಾಪೋಡಿ ಅಭಿಯಾನಕ್ಕೆ ಗ್ರಹಚಾರ ಹಿಡಿದಂತಿದೆ.


ಸರ್ವೆಗೆ ಸಾವಿರಾರು ರೂ. ವಸೂಲಿ!

ಭೂ ಸರ್ವೆಗೆ ಅಧಿಕೃತವಾಗಿ ರೈತರ ಜೇಬಿಗೆ ಸಾವಿರಾರು ರೂ. ಕತ್ತರಿ ಬೀಳುತ್ತಿರುವ ಬೆನ್ನಲ್ಲೆಭೂಮಾಪನ ಇಲಾಖೆಯಲ್ಲಿಸರ್ವೆಗೆ ಗುಂಟೆ, ಎಕರೆವಾರು ಬೇನಾಮಿ ಹಣದ ವಸೂಲಿ ದೂರು ಹೆಚ್ಚಾಗಿದೆ. 1ಎಕರೆಗೆ 3 ಸಾವಿರ, ಗುಂಟೆಗೆ 1500 ರೂ. ನಿಗದಿ ಆದಂತಿದ್ದು ಪರೋಕ್ಷವಾಗಿ ಇಕ್ಕಟ್ಟಿಗೆ ಸಿಕ್ಕಂತಾಗಿದೆ ಎಂಬುದು ರೈತರ ಅಳಲಾಗಿದೆ.


ಭೂ ಸರ್ವೆಗೆ ಸಂಬಂಧಪಟ್ಟಂತೆ ಪೋಡಿಮುಕ್ತ ಅಭಿಯಾನ ರೈತರಿಗೆ ಈವರೆಗೆ ಪ್ರಯೋಜನವಾಗಿಲ್ಲ. ಭೂ ಸುಧಾರಣೆ ಕಾಯಿದೆಯಡಿ ಜಮೀನು ಪಡೆದ ರೈತರಿಗೆ ಸಮರ್ಪಕವಾದ ಕಂದಾಯ ದಾಖಲೆ ಪಡೆಯುವುದಕ್ಕೆ ಸಾಧ್ಯವಾಗಿಲ್ಲ. ಸರ್ವೆಗೆ ದುಬಾರಿ ಶುಲ್ಕ ನಿಗದಿ ಆಗಿದ್ದು, ರೈತರಿಗೆ ಹೊರೆ ಆಗಿದೆ.

- ನಾಗರಾಜಶೆಟ್ಟಿ, ಅಧ್ಯಕ್ಷರು ಟಿಎಪಿಸಿಎಂಎಸ್‌, ತೀರ್ಥಹಳ್ಳಿ


ಕಡತದ ವಿಲೇವಾರಿ ಅಗತ್ಯ ಗಮನಿಸಿ ಪೋಡಿಮುಕ್ತ ಅಭಿಯಾನ ಅನುಷ್ಠಾನ ಮಾಡಲಾಗುತ್ತಿದೆ. ಗೇಣಿ ಹಕ್ಕಿನ ಜಮೀನು ಪ್ರದೇಶದ ಮೇಲ್ಮನವಿಯ ಇತ್ಯರ್ಥ ಪ್ರಕರಣಗಳ ಸರ್ವೆಗೆ ಆದ್ಯತೆ ನೀಡಲಾಗಿದೆ.

- ನಾರಾಯಣಸ್ವಾಮಿ, ಉಪನಿರ್ದೇಶಕರು, ಮೋಜಣಿ ಇಲಾಖೆ ಶಿವಮೊಗ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ