ಆ್ಯಪ್ನಗರ

ದೌರ್ಜನ್ಯ ತಡೆಗೆ ಕಾನೂನು ಅರಿವು ಅಗತ್ಯ

ಕಾನೂನುಗಳ ಬಗ್ಗೆ ಅರಿವಿದ್ದಾಗ ಮಾತ್ರ ಮಹಿಳೆ, ಮಕ್ಕಳು, ದುರ್ಬಲರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎಚ್‌. ಸತೀಶ್‌ ಹೇಳಿದರು.

Vijaya Karnataka 25 Jul 2019, 5:00 am
ಶಿವಮೊಗ್ಗ: ಕಾನೂನುಗಳ ಬಗ್ಗೆ ಅರಿವಿದ್ದಾಗ ಮಾತ್ರ ಮಹಿಳೆ, ಮಕ್ಕಳು, ದುರ್ಬಲರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎಚ್‌. ಸತೀಶ್‌ ಹೇಳಿದರು.
Vijaya Karnataka Web SMR-24ganesh7


ನಗರದ ಆಲ್ಕೋಳದ ಚೈತನ್ಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಪೋಕ್ಸೋ ಕಾಯಿದೆ ಮತ್ತು ಸಂತ್ರಸ್ತರ ಪರಿಹಾರ ಯೋಜನೆಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಣೆ, ದೌರ್ಜನ್ಯಗಳ ವಿರುದ್ಧ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆದರೆ, ಬಹಳಷ್ಟು ಮಂದಿಗೆ ಕಾನೂನು ಬಗ್ಗೆ ಅರಿವಿನ ಕೊರತೆ ಇರುವುದರಿಂದ ಶೋಷಣೆಗೊಳಗಾಗುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಕಾನೂನು ಅರಿತುಕೊಂಡು ಸುತ್ತಮುತ್ತಲಿನಲ್ಲಿ ಶೋಷಣೆಗೆ ಒಳಗಾಗುತ್ತಿರುವವರನ್ನು ರಕ್ಷಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಬೇಕು ಎಂದರು.

ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅನೇಕ ಸಂಘ, ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ನಿರ್ದಿಷ್ಟವಾದ ಯೋಜನೆ ಮುಖ್ಯವೆನಿಸುತ್ತದೆ. ಭ್ರೂಣಹತ್ಯೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹದಂತಹ ಪಿಡುಗನ್ನು ತಡೆಗಟ್ಟಲು ಹೆಣ್ಣು ಮಕ್ಕಳ ಶಿಕ್ಷ ಣಕ್ಕೆ ಒತ್ತು ನೀಡಬೇಕು ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್‌.ಸರಸ್ವತಿ ಮಾತನಾಡಿ, ಜನರಿಗೆ ಕಾನೂನು ಸಾಕ್ಷರತೆ ಮೂಡಿಸುವ ಸಲುವಾಗಿ ಕಾನೂನು ಕಮ್ಮಟ ಕಾರ್ಯಕ್ರಮದಡಿ ವಿವಿಧ ಕಾಯಿದೆ ಹಾಗೂ ಪರಿಹಾರ ಯೋಜನೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಕಾನೂನು ಅರಿತು ದೌರ್ಜನ್ಯಗಳ ವಿರುದ್ಧ ಹೋರಾಡುವ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ ಮಾತನಾಡಿದರು. ಎನ್‌ಎಂಎಸ್‌ಎಸ್‌ ಸಂಸ್ಥೆ ನಿರ್ದೇಶಕ ಕ್ಲಿಪರ್ಡ್‌ ರೋಷನ್‌ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಪಿ.ಸಿ.ಕವಿತ, ಎಚ್‌.ಎಂ.ರೇಣುಕಮ್ಮ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ