ಆ್ಯಪ್ನಗರ

ಮೋದಿ ಪ್ರಧಾನ ಸೇವಕ, ಅಪೂರ್ವ ಮಾಣಿಕ್ಯ

ಬಹಳ ಅಪರೂಪಕ್ಕೆ ಸಿಗುವ ನರೇಂದ್ರ ಮೋದಿ ಎಂಬ ಅಪೂರ್ವ ಮಾಣಿಕ್ಯವನ್ನು ದೇಶದ ರಕ್ಷಣೆಗಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Vijaya Karnataka 16 Apr 2019, 5:00 am
ಶಿವಮೊಗ್ಗ : ಬಹಳ ಅಪರೂಪಕ್ಕೆ ಸಿಗುವ ನರೇಂದ್ರ ಮೋದಿ ಎಂಬ ಅಪೂರ್ವ ಮಾಣಿಕ್ಯವನ್ನು ದೇಶದ ರಕ್ಷಣೆಗಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.
Vijaya Karnataka Web SMG-1504-2-15-15SMG1


ನಗರದ ಎನ್‌ಇಎಸ್‌ ಮೈದಾನದಲ್ಲಿ ಸೋಮವಾರ ಬಿಜೆಪಿ ಮಹಿಳಾ ಸಮಾವೇಶ ಮತ್ತು ಸಾರ್ವಜನಿಕ ಸಭೆಯಲ್ಲಿ ಶಿವಮೊಗ್ಗ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರವಾಗಿ ಮತ ಯಾಚಿಸಿ ಮಾತನಾಡಿದರು.

ಮೋದಿ ಅವರು ಪ್ರಧಾನಿಯಾದಾಗ ನಾನು ಪ್ರಧಾನಿಯಲ್ಲ ಪ್ರಧಾನ ಸೇವಕ ಎಂದಿದ್ದಾರೆ. ಅಂತಹ ಸೇವಕ ಮತ್ತು ಮಾಣಿಕ್ಯ ದೇಶದ ರಾಜಕೀಯದಲ್ಲಿ ಮತ್ತೆ ಸಿಗುವುದಿಲ್ಲ. ಸಿಕ್ಕಿರುವುದನ್ನು ನಾವು ಉಳಿಸಿಕೊಳ್ಳಬೇಕಿದೆ. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ದೇಶದ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದರು. ಆ ಸಮಯದಲ್ಲಿ ದೇಶದ ಚುಕ್ಕಾಣಿ ಹಿಡಿದ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದು ಅಲ್ಲದೆ, ವಿಶ್ವಮಟ್ಟದಲ್ಲಿ ದೇಶಕ್ಕೆ ಗೌರವ ತಂದುಕೊಡುವ ಕೆಲಸ ಮಾಡಿದರು ಎಂದರು.

ಮೋದಿ ಅವರು ಕೇವಲ ದೇಶದ ಗೌರವವನ್ನಲ್ಲದೆ ದೇಶದೊಳಗಿನ ಮಹಿಳೆಯರ ಗೌರವವನ್ನೂ ಕಾಪಾಡಿದ್ದಾರೆ. ಸ್ವಚ್ಛ ಭಾರತ್‌ ಯೋಜನೆಯಡಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿ ಶೌಚಕ್ಕಾಗಿ ಬಯಲನ್ನು ಆಶ್ರಯಿಸಿದ್ದ ಮಹಿಳೆಯರ ಮುಜುಗರವನ್ನು ತಪ್ಪಿಸಿದರು. 2020ರೊಳಗೆ ಸರ್ವರಿಗೂ ಸೂರು ಮತ್ತು 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹಾಕಿಕೊಂಡಿದ್ದಾರೆ. 2047ರ ಶತಮಾನೋತ್ಸವ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಅಭಿವೃದ್ಧಿಶೀಲ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಿಸುವುದು ಅವರ ಗುರಿ. ಅವರ ದೂರ ದೃಷ್ಟಿ ಯೋಜನೆಗಳನ್ನು ಪ್ರಕಟಿಸುವುದಕ್ಕಷ್ಟೇ ಸೀಮಿತವಾಗದೆ ಸಮರ್ಥವಾಗಿ ಜಾರಿಗೊಳಿಸುತ್ತಾ ಬಂದಿದ್ದಾರೆ ಎಂದರು.

1971ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಗರೀಭಿ ಹಠಾವೊ ಘೋಷಣೆಯಡಿ ಜನತೆಯ ಬಡತನ ನಿವಾರಿಸುತ್ತೇವೆ ಎಂದಿದ್ದರು. ಅವರ ಬಳಿಕ ರಾಜೀವ್‌ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ಅವರೂ ಅದನ್ನೇ ಹೇಳಿದರು. ಈ ಬಾರಿ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆಯಲ್ಲೂ ಅದನ್ನೇ ಪ್ರಸ್ತಾಪ ಮಾಡಲಾಗಿದೆ. ಇವರಿಗೆ ಬಡವರು ಮತ್ತು ಬಡತನ ಚುನಾವಣೆಯಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಕಳೆದ ಐದು ವರ್ಷದಲ್ಲಿ ಮೋದಿ ಅವರು ಬಡವರಿಗೆ ಭಿಕ್ಷೆ ಬದಲು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಮುದ್ರಾ ಯೋಜನೆಯನ್ನು ಜಾರಗೊಳಿಸಿದ್ದಾರೆ ಎಂದರು.

2008ರಲ್ಲಿ ಉಗ್ರವಾದಿಗಳ ವಿಷಯದಲ್ಲಿ ಅಂದಿನ ಯುಪಿಎ ಸರಕಾರ ಸಮರ್ಥವಾದ ರಾಜಕೀಯ ಇಚ್ಛಾಶಕ್ತಿ ಮೆರೆದಿದ್ದಲ್ಲಿ ದೇಶದೊಳಗೆ ಪುಲ್ವಾಮಾದಂತಹ ಘಟನೆಗಳು ನಡೆಯುತ್ತಿರಲಿಲ್ಲ. ವಿಧ್ವಂಸಕ ಕೃತ್ಯಗಳನ್ನು ನೋಡಬೇಕಾಗಿರಲಿಲ್ಲ. ಪುಲ್ವಾಮಾ ಘಟನೆ ಬಳಿಕ ಮೋದಿ ಅವರು ಪಾಕಿಸ್ತಾನದ ವಿರುದ್ಧ ದಿಟ್ಟ ಕ್ರಮ ಕೈಗೊಂಡರು. ಉಗ್ರವಾದಿಗಳನ್ನು ಬೆಳೆಸಿ ಭಾರತಕ್ಕೆ ಕಳಿಸುತ್ತಿದ್ದ ಪಾಕಿಸ್ತಾನ ಈಗ ಮೋದಿ ಅವರು ತೆಗೆದುಕೊಂಡ ಕ್ರಮಗಳಿಂದಾಗಿ ಬೆಚ್ಚಿಬಿದ್ದಿದೆ ಎಂದರು.

ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಮತ್ತೊಮ್ಮೆ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿ ಅವರಿಗೆ ತಾಯಿ ಇದ್ದಾರೆ. ಆದರೆ, ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗದ ಎಲ್ಲ ಮಹಿಳೆಯರು ತಾಯಿಯರಾಗಿ ಆಶೀರ್ವದಿಸಿ ಗೆಲುವು ತಂದುಕೊಡಬೇಕೆಂದು ಮನವಿ ಮಾಡಿದರು.

ಸಮಾವೇಶದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಶಾಸಕರಾದ ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅಶೋಕ ನಾಯ್ಕ್‌, ಆಯನೂರು ಮಂಜುನಾಥ್‌, ಎಸ್‌.ರುದ್ರೇಗೌಡ, ತೇಜಸ್ವಿನಿಗೌಡ, ಮಾಜಿ ಶಾಸಕರಾದ ಕೆ.ಜಿ.ಕೃಷ್ಣಮೂರ್ತಿ, ಆರ್‌.ಕೆ.ಸಿದ್ದರಾಮಣ್ಣ, ಭಾರತಿ ಶೆಟ್ಟಿ, ವೀರಣ್ಣ, ಮಹಾನಗರ ಪಾಲಿಕೆ ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ, ಡಿ.ಎಸ್‌.ಅರುಣ್‌, ಸಿ.ಮಂಜುಳಾ ಮತ್ತಿತರರು ಹಾಜರಿದ್ದರು.

----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ