ಆ್ಯಪ್ನಗರ

ಶಿವಮೊಗ್ಗದ ಹುಣಸೋಡಿನಲ್ಲಿ ಡೈನಾಮೈಟ್‌ ಸ್ಫೋಟ; ಸ್ಥಳದಲ್ಲೇ 6ಕ್ಕೂ ಹೆಚ್ಚು ಕಾರ್ಮಿಕರ ಸಾವು

ಶಿವಮೊಗ್ಗದ ಹುಣಸೋಡು ಬಳಿ ಭಾರೀ ಅನಾಹುತ ಸಂಭವಿಸಿದ್ದು, ಡೈನಾಮೈಟ್‌ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ವಿದ್ಯುತ್‌ ಕೈ ಕೊಟ್ಟಿರುವುದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.

Vijaya Karnataka Web 22 Jan 2021, 12:23 am
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ರೈಲ್ವೆ ಕ್ರಷರ್‌ನಲ್ಲಿ ಡೈನಾಮೈಟ್‌ ದಾಸ್ತಾನು ಮಾಡಿದ್ದ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 15 ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದೇ ಸ್ಫೋಟದಿಂದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲೇ ಭೂಮಿ ನಡುಗಿದ ಅನುಭವವಾಗಿದೆ.
Vijaya Karnataka Web blast
ಸಾಂದರ್ಭಿಕ ಚಿತ್ರ


ಗುರುವಾರ ತಡರಾತ್ರಿ ಶಿವಮೊಗ್ಗ ತಾಲೂಕು ಅಗಸವಳ್ಳಿ ಸಮೀಪದ ಹುಣಸೋಡು ಕಲ್ಲು ಗಣಿಗಾರಿಯಲ್ಲಿ ಅಕ್ರಮವಾಗಿ ಒಂದು ಲಾರಿ ಡೈನಾಮೈಟ್‍ಗಳನ್ನು ದಾಸ್ತಾನು ಮಾಡಿದ್ದು, ಅದು ಸ್ಫೋಟಗೊಂಡ ಪರಿಣಾಮ ಇಷ್ಟೊಂದು ದೊಡ್ಡ ಅನಾಹುತವಾಗಿದೆ. ಮೃತಪಟ್ಟ ಕಾರ್ಮಿಕರನ್ನು ಬಿಹಾರ ಮೂಲದವರೆಂದು ಗುರುತಿಸಲಾಗಿದೆ.

ದಾಸ್ತಾನು ಮಾಡಿದ್ದ ಲಾರಿ ಛಿದ್ರವಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೇಹಗಳು ಸಹ ಛೀದ್ರವಾಗಿವೆ. ಪ್ರಾಥಮಿಕ ಮಾಹಿತಿ ಪ್ರಕಾರ 6 ಜನರ ಶವ ಪತ್ತೆಯಾಗಿದ್ದು, ಒಂದೂವರೆಗ ಕಿಮೀವರೆಗೆ ಧೂಳು ಆವರಿಸಿದ್ದು, ಸ್ಫೋಟದ ತೀವ್ರತೆಗೆ ವಿದ್ಯುತ್ ಸಂಪೂರ್ಣ ಸ್ಥಗಿತವಾಗಿದೆ. ರಾತ್ರಿಯಾಗಿರುವುದರಿಂದ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಶಿವಮೊಗ್ಗದಲ್ಲಿ ಮಧ್ಯರಾತ್ರಿ ಭೂಕಂಪದ ಅನುಭವ: ಬೆಚ್ಚಿ ಬೀದಿಗೆ ಬಂದ ಜನ!
ಸ್ಫೋಟ ಸಂಭವಿಸಿರುವ ಜಾಗಕ್ಕೆ ಡಿಸಿ, ಎಸ್‍ಪಿ ಭೇಟಿ ನೀಡಿದ್ದು, ಇದುವರೆಗೆ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನೆಯ ಸಂಪೂರ್ಣ ಮಾಹಿತಿ ಸಿಕ್ಕಿದ ಬಳಿಕ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು.
ಬಿವೈ ರಾಘವೇಂದ್ರ, ಸಂಸದರು
ಆರಂಭದಲ್ಲಿ ಭೂಮಿ ಕಂಪಿಸಿದ್ದಕ್ಕೆ ಜನ ಗಾಬರಿಯಾಗಿದ್ದರು. ನಂತರ, ಮಾಹಿತಿ ಲಭ್ಯವಾಗಿದ್ದು ಭಾರೀ ಸ್ಫೋಟಕ್ಕೆ ಇದೇ ಕಾರಣ ಇರಬಹುದು ಎನ್ನಲಾಗಿದೆ. ಆದರೆ, ಇದುವರೆಗೆ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿಲ್ಲ. ಘಟನಾ ಸ್ಥಳಕ್ಕೆ ಎಸ್‍ಪಿ ಕೆ.ಎಂ.ಶಾಂತರಾಜು, ಡಿಸಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ