ಆ್ಯಪ್ನಗರ

ಸಹ್ಯಾದ್ರಿ ಶ್ರೇಣಿ ಸಂರಕ್ಷಣೆ ನಮ್ಮ ಹೊಣೆ

ಸುಮಾರು 630 ಕೋಟಿ ವರ್ಷಗಳ ಹಿಂದೆ ಜನ್ಮ ತಳೆದಿರುವ ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಉತ್ಸವ ಮೈಲಿಗಲ್ಲಾಗಲಿ ಎಂದು ಸಾಹಿತಿ ಡಾ.ನಾ.ಡಿಸೋಜಾ ಹೇಳಿದರು.

Vijaya Karnataka 25 Jan 2019, 5:00 am
ಶಿವಮೊಗ್ಗ : ಸುಮಾರು 630 ಕೋಟಿ ವರ್ಷಗಳ ಹಿಂದೆ ಜನ್ಮ ತಳೆದಿರುವ ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಉತ್ಸವ ಮೈಲಿಗಲ್ಲಾಗಲಿ ಎಂದು ಸಾಹಿತಿ ಡಾ.ನಾ.ಡಿಸೋಜಾ ಹೇಳಿದರು.
Vijaya Karnataka Web SMG-2401-2-15-SMG UTSAVA (1)


ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಹಳೆಯ ಜೈಲು ಆವರಣದ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹ್ಯಾದ್ರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸಹ್ಯಾದ್ರಿ ಪರ್ವತ ಶ್ರೇಣಿ ದೇಶದ ನಾನಾ ರಾಜ್ಯಗಳಲ್ಲಿ ಚಾಚಿಕೊಂಡಿದೆ. ಆದರೆ, ಶಿವಮೊಗ್ಗ ಜಿಲ್ಲೆಗೆ ಇದರ ಕೊಡುಗೆ ಅಪಾರವಾಗಿದ್ದು, ಅಪರೂಪದ ಸಸ್ಯರಾಶಿ, ಜೀವವೈವಿಧ್ಯಗಳನ್ನು ಹೊಂದಿದೆ. ನಿಸರ್ಗದಲ್ಲಿ ಸಮತೋಲನವನ್ನೂ ಕಾಪಾಡುವ ಕೆಲಸ ಮಾಡುತ್ತಿದೆ. ಇದನ್ನು ರಕ್ಷಿಸುವ ಬಹುದೊಡ್ಡ ಹೊಣೆ ನಮ್ಮ ಮೇಲಿದೆ ಎಂದು ತಿಳಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಾನಪದ, ಸಾಂಸ್ಕೃತಿಕ ಮತ್ತು ಪಾರಂಪರಿಕವಾಗಿ ಶ್ರೀಮಂತವಾಗಿದೆ. ಇವುಗಳನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಪ್ರಯತ್ನದ ಭಾಗವಾಗಿ ಈ ಉತ್ಸವ ಹಮ್ಮಿಕೊಳ್ಳಲಾಗಿದೆ. ಯುವಪೀಳಿಗೆ ಇಲ್ಲಿ ಅರಿತುಕೊಂಡ ಜನಪದ ಕಲೆಯ ಪ್ರಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸಬೇಕು. ನಾಳಿನ ಪ್ರಜೆಗಳಾದ ಯುವಜನತೆ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.

* ಪ್ರಾಣಿ ಸಂಗ್ರಹಾಲಯ ಬಗ್ಗೆ ಚಿಂತನೆ:

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಾನಾ ಪ್ರಾಣಿ ಪ್ರಭೇದಗಳನ್ನು ಹೊಂದಿರುವ ಮತ್ತು ನೈಸರ್ಗಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯಲ್ಲಿ ಪ್ರಾಣಿ ಸಂಗ್ರಹಾಲಯ ವಿನ್ಯಾಸಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ಅಂದಾಜು 40-50 ಕೋಟಿ ರೂ. ಖರ್ಚಾಗಲಿದೆ. ಜತೆಗೆ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಮೂಲಕ ಆಕರ್ಷಣೆಯ ಕೇಂದ್ರವಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಶರವಾತಿ ಮುಳುಗಡೆ ಪ್ರದೇಶವಾದ ಕಳಸವಳ್ಳಿ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಯಾವುದೇ ಸಂಪರ್ಕಗಳಿಲ್ಲ. ಹೀಗಾಗಿ, ಸೇತುವೆ ಕಾಮಗಾರಿ ಟೆಂಡರ್‌ ಹಂತದಲ್ಲಿದ್ದು, ತ್ವರಿತಗತಿಯಲ್ಲಿ ಕೆಲಸ ಆರಂಭಿಸಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ಶಿಸ್ತಿನ ಕಂದಾಯ ಕಲಿಸಿಕೊಟ್ಟ ಶಿವಪ್ಪ ನಾಯಕ, ಗೆರಿಲ್ಲಾ ಯುದ್ಧ ತೋರಿಸಿಕೊಟ್ಟ, ಎರಡು ಜ್ಞಾನಪೀಠ ಪಡೆದ ದೇಶದ ಏಕೈಕ ಜಿಲ್ಲೆ, ನಾಟ್ಯರಾಣಿ ಶಾಂತಲೆ ಜನ್ಮತಳೆದ ನೆಲೆಬೀಡು ಸೇರಿದಂತೆ ಸಮಾಜವಾದ ಸಮತಾವಾದ, ರಾಷ್ಟ್ರೀಯವಾದ ಪ್ರತಿಪಾದಿಸಿದ ನಾಡು ಶಿವಮೊಗ್ಗ. ಇಂತಹ ಭೂಮಿಯಲ್ಲಿ ಹುಟ್ಟಿದ್ದೇ ಪುಣ್ಯ ಎಂದು ಹೇಳಿದರು.

70 ಜನ ಕಲಾವಿದರು ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌ ಮಾತನಾಡಿದರು. ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್‌.ಕುಮಾರ್‌, ಎಸ್‌ಪಿ ಅಭಿನವ್‌ ಖರೆ, ಅಪರ ಜಿಲ್ಲಾಧಿಕಾರಿ ಅನುರಾಧಾ, ಲಕ್ಷ್ಮಿದೇವಿ, ಎಚ್‌.ಸಿ.ಯೋಗೀಶ್‌, ರಮೇಶ್‌, ಎಚ್‌.ಕೆ.ಮಹಾಂತೇಶ್‌, ಹನುಮನಾಯ್ಕ್‌, ಚನ್ನಬಸಪ್ಪ, ಟಿ.ವಿ.ಪ್ರಕಾಶ್‌, ಎಚ್‌.ವಿ. ದರ್ಶನ್‌, ಮಂಗಳಾ ನಾಯ್ಕ್‌ ಇತರರಿದ್ದರು.

============

ದೇಶದಲ್ಲಿ ಸಂಸ್ಕೃತಿಗೆ ಒತ್ತು ನೀಡಿ ಇಂತಹ ಉತ್ಸವಗಳನ್ನು ಕರ್ನಾಟಕದಲ್ಲಿ ಮಾತ್ರ ಆಯೋಜಿಸಲಾಗುತ್ತದೆ ಎಂದು ಈ ಹಿಂದೆ ಕೇರಳದಿಂದ ಅಧ್ಯಯನ ಮಾಡಲು ಬಂದಿದ್ದ ತಂಡವೊಂದು ತಿಳಿಸಿತ್ತು. ಸರಕಾರಗಳು ಸಂಸ್ಕೃತಿ ಮತ್ತು ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ ಎಂಬುದಕ್ಕೆ ಇದು ದೊಡ್ಡ ಸಾಕ್ಷಿಯಾಗಿದೆ. ಕಲಾವಿದರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಾಕಷ್ಟು ಬೆಂಬಲ ನೀಡಿದ್ದಾರೆ.

- ಕೆ.ಎ.ದಯಾನಂದ್‌, ಜಿಲ್ಲಾಧಿಕಾರಿ

==============


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ