ಆ್ಯಪ್ನಗರ

‘ಗ್ರಾಮೀಣರ ಏಳಿಗೆ ಸೇವಾ ಸಹಕಾರ ಸಂಘದ ಆದ್ಯತೆ’

ಸ್ಥಳೀಯ ಸಂಪನ್ಮೂಲ ಕ್ರೋಢಿಕರಿಸಿಕೊಂಡು ಗ್ರಾಮೀಣರ ಏಳಿಗೆ ಕಾಪಾಡುವುದು ಸೇವಾ ಸಹಕಾರ ಸಂಘಗಳ ಪ್ರಥಮ ಆದ್ಯತೆಯಾಗಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka 12 Feb 2018, 5:00 am

ಸಾಗರ: ಸ್ಥಳೀಯ ಸಂಪನ್ಮೂಲ ಕ್ರೋಢಿಕರಿಸಿಕೊಂಡು ಗ್ರಾಮೀಣರ ಏಳಿಗೆ ಕಾಪಾಡುವುದು ಸೇವಾ ಸಹಕಾರ ಸಂಘಗಳ ಪ್ರಥಮ ಆದ್ಯತೆಯಾಗಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ ಭಾನುವಾರ ಭೀಮನಕೋಣೆಯ ಸೇವಾ ಸಹಕಾರ ಸಂಘದ ಅಡಕೆ ಉಗ್ರಾಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ಭೀಮನಕೋಣೆಯ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃಷಿಕರು ಒಂದು ಸಮುದಾಯವಾಗಿ ತಾವು ಅಭಿವೃದ್ಧಿಗೊಳ್ಳುವುದರ ಜತೆಗೆ ಇತರರನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಮನಸ್ಥಿತಿ ಇರುವವರು. ಕೃಷಿಯಲ್ಲಿನ ಸಮಸ್ಯೆಗಳ ಕಾರಣದಿಂದಾಗಿ ಉಪಬೆಳೆಗಳು, ಹೈನುಗಾರಿಕೆ ಮುಂತಾದ ಉಪಕಸುಬುಗಳಲ್ಲಿ ಸಹ ಹಿಂಜರಿಕೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡ ಸಹಕಾರಿ ವ್ಯವಸ್ಥೆ ಬಲಪಡಿಸುವುದರ ಪರವಿದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಆತಿಥೇಯ ಸಂಘದ ಅಧ್ಯಕ್ಷ ಕೆ.ಕೆ.ರಾಜೇಶ್‌ ಮಾತನಾಡಿ, ಸಹಕಾರಿ ಆಂದೋಲನಕ್ಕೆ ಹೊಸ ಆಯಾಮ ಕೊಡವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ತಾಲೂಕಿನ ಸೇವಾ ಸಹಕಾರ ಸಂಘ ಎಪಿಎಂಸಿಯಲ್ಲಿ ಅಡಕೆ ದಲ್ಲಾಳಿ ಮಂಡಿ ನಿರ್ವಹಿಸುವ ವಿಶಿಷ್ಟ ಕೆಲಸ ಮಾಡುತ್ತಿದೆ. ಇದೇ ರೀತಿ ಬೇರೆ ಬೇರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೃಷಿ ಪೂರಕ ಸಹಕಾರಿ ಚಟುವಟಿಕೆ ನಡೆಸಿದ್ದಾರೆ. ಈ ಆಂದೋಲನ ಸರಕಾರದ ಸಾಲ ಮನ್ನಾ ಮೊದಲಾದ ಹೆಜ್ಜೆಗಳಿಂದ ಇನ್ನಷ್ಟು ಬಲಗೊಂಡಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಹೊಳಿಯಪ್ಪ, ಭಾರತೀಯ ಜೀವವಿಮಾ ನಿಗಮದ ಶಿವಮೊಗ್ಗದ ಹಿರಿಯ ವಿಭಾಗಾಧಿಕಾರಿ ಜಿ.ಎ.ರಾಮಕೃಷ್ಣ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕ ವಿ.ಸಿ.ಶಿವಪ್ಪ, ಡಿಸಿಸಿ ಶಿವಮೊಗ್ಗ ನಿರ್ದೇಶಕ ಎಚ್‌.ಕೆ.ವೆಂಕಟೇಶ್‌ ಇತರರು ಇದ್ದರು.

ತ್ರಿವೇಣಿ ರಾಘವೇಂದ್ರ ಪ್ರಾರ್ಥಿಸಿ, ಬಿ.ಎಚ್‌.ರಾಘವೇಂದ್ರ ಸ್ವಾಗತಿಸಿದರು. ಸಂಸ್ಥೆಯ ಸಿಇಒ ಕೆ.ಎಸ್‌.ಪ್ರಭಾಕರ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ವೈ.ಕೆ.ದ್ಯಾವಪ್ಪ ವಂದಿಸಿ, ಜಿ.ಎಚ್‌.ವೆಂಕಟರಾಮು ನಿರೂಪಿಸಿದರು.

Vijaya Karnataka Web priority of rural development co operative society
‘ಗ್ರಾಮೀಣರ ಏಳಿಗೆ ಸೇವಾ ಸಹಕಾರ ಸಂಘದ ಆದ್ಯತೆ’


ಅಡಕೆ ವಿಚಾರದಲ್ಲಿ ಮಲೆನಾಡಿನ ರೈತರಿಗೆ ಅನ್ಯಾಯಗಳಾಗುತ್ತಲೇ ಇವೆ. ಚಾಲಿಗೆ ಕೆಂಪು ಬಣ್ಣ ಹಾಕಿ ಮಾರುವ ದಂಧೆ ತಡೆಯಲು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಿರುವುದರಿಂದ ಉತ್ತಮ ಬೆಲೆ ಪಡೆಯಲಾಗುತ್ತಿಲ್ಲ. ಈ ಸಂಬಂಧ ಸಹಕಾರಿ ವ್ಯವಸ್ಥೆಯ ಪ್ರಮುಖರು ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಬಿ.ಎಚ್‌.ಮಲ್ಲಿಕಾರ್ಜುನ ಹಕ್ರೆ, ತಾಲೂಕು ಪಂಚಾಯಿತಿ ಅಧ್ಯಕ್ಷ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ