ಆ್ಯಪ್ನಗರ

ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ, ಬೆಳಗಿನ ಜಾವ ರಸ್ತೆ ನಡುವೆ ವಾಹನದಲ್ಲಿ ಹೆರಿಗೆ

ಸಾಮಾಜಿಕ ಸುಧಾರಣೆಯ ಅನೇಕ ಹೋರಾಟಗಳಿಗೆ ಮುನ್ನುಡಿ ಬರೆದ ತಾಲೂಕಿನಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಸರಕಾರ ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Vijaya Karnataka Web 20 Jul 2020, 6:50 pm
ತೀರ್ಥಹಳ್ಳಿ (ಶಿವಮೊಗ್ಗ): ಖಾಸಗಿ ಆಸ್ಪತ್ರೆ ವೈದ್ಯರು ಹೆರಿಗೆ ಚಿಕಿತ್ಸೆ ನೀಡಲು ಒಪ್ಪದ ಕಾರಣ ನಡುರಸ್ತೆಯಲ್ಲಿ ಒಮ್ನಿ ವಾಹನದೊಳಗೆ ಹೆರಿಗೆ ಆದ ಘಟನೆ ಪಟ್ಟಣದಲ್ಲಿ ಸೋಮವಾರ ಬೆಳಗಿನ ಜಾವ 3.30 ರ ವೇಳೆಗೆ ನಡೆದಿದೆ.
Vijaya Karnataka Web ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ
ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ


ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮಹಿಳೆ, ಮಗು ಪಟ್ಟಣದ ಸರಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ. ಕೋಣಂದೂರು ಸಮೀಪದ ಕಂಕಳ್ಳಿ ಗ್ರಾಮದ ಮಹಿಳೆ ರಾತ್ರಿ ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದಾಗ ಅವರ ಪತಿ, ಕುಟುಂಬದವರು ತೀರ್ಥಹಳ್ಳಿ ಪಟ್ಟಣಕ್ಕೆ ವಾಹನದಲ್ಲಿ ಕರೆ ತಂದಿದ್ದರು.
ಸರಕಾರಿ ಜೆಸಿ ಆಸ್ಪತ್ರೆ ಹೆರಿಗೆ ವಿಭಾಗ ಕೊರೊನಾ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿದೆ. ಮಹಿಳಾ ತಜ್ಞವೈದ್ಯೆ ಡಾ.ಸುಮಾ ಕ್ವಾರೆಂಟೈನ್‌ನಲ್ಲಿದ್ದಾರೆ ಎಂದು ತಪ್ಪು ಗ್ರಹಿಕೆಯಿಂದ ಹೆರಿಗೆಗಾಗಿ ಮಹಿಳೆಯನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದುರು. ಆದರೆ, ಖಾಸಗಿ ಆಸ್ಪತ್ರೆಗಳ ವೈದ್ಯರು ಮಹಿಳೆಗೆ ಹೆರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು.

ಗರ್ಭಿಣಿ ಆಗಿದ್ದಾಗ ಸಲಹೆ ನೀಡಿದ್ದ ವೈದ್ಯರು ಯಾರು ಎಂಬ ಪ್ರಶ್ನೆ ಕೇಳಿ ಮಹಿಳೆಗೆ ಕೋವಿಡ್ ಪರೀಕ್ಷೆ ಆಗಬೇಕು, ಆಸ್ಪತ್ರೆಯಲ್ಲಿ ಪಿಪಿಟಿ ಕಿಟ್ ಇಲ್ಲ ಎಂಬ ಕಾರಣ ಮುಂದೊಡ್ಡಿ ಖಾಸಗಿ ಆಸ್ಪತ್ರೆಗಳ ವೈದ್ಯರು ಹೆರಿಗೆ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದರು.

ಕಂಗಾಲಾದ ಕುಟುಂಬದವರು ದಿಕ್ಕು ತೋಚದೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸಾಗುವಾಗ ಮಹಿಳೆಗೆ ಪಟ್ಟಣದ ಗಾಂಧಿಚೌಕದ ಬಳಿ ವಾಹನದಲ್ಲಿ ಹೆರಿಗೆ ಆಗಿದೆ. ಈ ಸಂದರ್ಭ ಗಾಬರಿಗೊಂಡ ಕುಟುಂಬದವರು ತಕ್ಷಣ ಸರಕಾರಿ ಜೆಸಿ ಆಸ್ಪತ್ರೆ ಮಹಿಳಾ ವೈದ್ಯೆ ಡಾ.ಸುಮಾ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಜಾಗೃತಗೊಂಡ ಡಾ.ಸುಮಾ ನಾನು ಕ್ವಾರೆಂಟೈನ್‌ನಲ್ಲಿ ಇಲ್ಲ, ಜೆಸಿ ಆಸ್ಪತ್ರೆಗೆ ಕರೆ ತನ್ನಿ, ಚಿಕಿತ್ಸೆ ನೀಡುತ್ತೇನೆ ಎಂದು ಉತ್ತರಿಸಿದ್ದು, ನಂತರ ಆಸ್ಪತ್ರೆಗೆ ತಲುಪಿದ್ದಾರೆ.
ಕೊರೊನಾ ಆತಂಕದ ನಡುವೆ ನಡುರಸ್ತೆಯಲ್ಲಿ ವಾಹನದಲ್ಲಿ ಹೆರಿಗೆ ಆದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ಖಾಸಗಿ ಆಸ್ಪತ್ರೆಗಳ ವೈದ್ಯರ ಚಿಕಿತ್ಸೆ ನಿರಾಕರಿಸುವ ಧೋರಣೆ ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಸುಧಾರಣೆಯ ಅನೇಕ ಹೋರಾಟಗಳಿಗೆ ಮುನ್ನುಡಿ ಬರೆದ ತಾಲೂಕಿನಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಸರಕಾರ ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ