ಆ್ಯಪ್ನಗರ

ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

ಕುವೆಂಪು ವಿವಿಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ರದ್ದುಪಡಿಸಬೇಕು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎನ್‌ಎಸ್‌ಯುಐ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು

Vijaya Karnataka 13 Mar 2018, 5:00 am

ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ರದ್ದುಪಡಿಸಬೇಕು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎನ್‌ಎಸ್‌ಯುಐ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಯಾವುದೇ ಮಾನದಂಡವಿಲ್ಲದೇ ಪರೀಕ್ಷಾ ಶುಲ್ಕ ಹೆಚ್ಚಳ ಮಾಡುತ್ತಿದ್ದು, ಪ್ರತಿ ವರ್ಷ ಶೇ.10ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಜತೆಗೆ ಅಂಕಪಟ್ಟಿ ಶುಲ್ಕ, ಘಟಿಕೋತ್ಸವ ಶುಲ್ಕ, ಬ್ಲೂ ಬುಕ್‌, ಪಿಪಿಸಿ ಎಂದು ನಾನಾ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಹೊರೆಯಾಗುವ ರೀತಿ ಶುಲ್ಕಗಳನ್ನು ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಕೇವಲ 250 ರೂ.ಗಳಷ್ಟೇ ಘಟಿಕೋತ್ಸವ ಶುಲ್ಕ ಪಡೆಯಲಾಗುತ್ತಿತ್ತು. ಆದರೆ ಈಗ ಪ್ರತಿ ವರ್ಷ ಶೇ.10ರಷ್ಟು ಹೆಚ್ಚಳ ಮಾಡಿಕೊಂಡು ಬಂದು 630 ರೂ. ವಸೂಲು ಮಾಡಲಾಗುತ್ತಿದೆ. ಅದೇ ರೀತಿ ಅಂಕಪಟ್ಟಿಗೆ 180 ರೂ. ವಸೂಲು ಮಾಡಲಾಗುತ್ತಿದೆ. ಪದವಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕೇವಲ 2500ರಿಂದ 3000 ರೂ.ಗಳ ಶುಲ್ಕ ಪಾವತಿಸಿದ್ದರೆ, ಪರೀಕ್ಷಾ ಶುಲ್ಕವೇ 1650ಕ್ಕೂ ಹೆಚ್ಚಾಗಿರುತ್ತದೆ. ಹೀಗಾಗಿ ಹೆಚ್ಚಳ ಶುಲ್ಕದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನು ವಿವಿಯಲ್ಲಿ ಸರಕಾರದ ನಿಯಮಾವಳಿಯಂತೆ ಯಾವುದೇ ಕೆಲಸಕ್ಕೆ ಸಂದಾಯ ಮಾಡಬೇಕಾದ ಹಣವನ್ನು ನಗದು ರೂಪದಲ್ಲಿ ಪಾವತಿಸುವಂತಿಲ್ಲ. ಆದರೆ 2014-15ನೇ ಸಾಲಿನಲ್ಲಿ ಸುಮಾರು 7 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ. ಇದನ್ನು ಸಹ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ 2016ರಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿ, ಈ ಬಗ್ಗೆ ವಿವರಣೆ ಕೇಳಿ ವಿವಿಯ ಹಣಕಾಸು ಅಧಿಕಾರಿಗೆ ನೋಟಿಸ್‌ ಜಾರಿ ಮಾಡಿದೆ ಎಂದರು.

ಇದೇ ರೀತಿ ವಿವಿಯ ಪ್ರತಿ ಹಂತದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲ ಹಂತದಲ್ಲೂ ಕೆಟಿಪಿಪಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಮತ್ತಷ್ಟು ಅಕ್ರಮ ನಡೆಸಲಾಗುತ್ತಿದೆ. ಇದರಿಂದಾಗಿ ವಿವಿಯ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸಾರ್ವಜನಿಕರಲ್ಲೂ ನಂಬಿಕೆ ಮರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಉನ್ನತ ಶಿಕ್ಷ ಣ ಸಚಿವರು ಕುವೆಂಪು ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕಡೆ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ ಕುವೆಂಪು ವಿವಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕಾಸ್‌ ನಾಡಿಗ್‌, ಜಿಲ್ಲಾಧ್ಯಕ್ಷ ಎಚ್‌.ಎಸ್‌.ಬಾಲಾಜಿ, ವಿಜಯ್‌, ಧನಂಜಯ್‌, ಅಜಯ್‌, ರವಿಕುಮಾರ್‌, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ