ಆ್ಯಪ್ನಗರ

ಮರಳು ಅಕ್ರಮ ತಡೆಯದಿದ್ದರೆ ಜನಾಂದೋಲನ

ಜಿಲ್ಲಾ, ತಾಲೂಕು ಆಡಳಿತ ಮರಳು ದಂಧೆ ಜತೆ ಶಾಮೀಲಾಗಿದ್ದು ರಾಜ್ಯ ಸರಕಾರ ಮರಳು ದಂಧೆಯಿಂದ ಹಣ ವಸೂಲಿ ಮಾಡುತ್ತಿದೆ. ಮರಳು ಕ್ವಾರೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮವನ್ನು ಜಿಲ್ಲಾಡಳಿತ ತಡೆಯದಿದ್ದರೆ ಜನಾಂದೋಲನ ಮೂಲಕ ಕಾನೂನು ಕೈಗೆ ಎತ್ತಿಕೊಳ್ಳಬೇಕಾಗುತ್ತದೆ ಎಂದು ಶಾಸಕ ಆರಗಜ್ಞಾನೇಂದ್ರ ಎಚ್ಚರಿಸಿದರು.

Vijaya Karnataka 12 May 2019, 5:00 am
ತೀರ್ಥಹಳ್ಳಿ: ಜಿಲ್ಲಾ, ತಾಲೂಕು ಆಡಳಿತ ಮರಳು ದಂಧೆ ಜತೆ ಶಾಮೀಲಾಗಿದ್ದು ರಾಜ್ಯ ಸರಕಾರ ಮರಳು ದಂಧೆಯಿಂದ ಹಣ ವಸೂಲಿ ಮಾಡುತ್ತಿದೆ. ಮರಳು ಕ್ವಾರೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮವನ್ನು ಜಿಲ್ಲಾಡಳಿತ ತಡೆಯದಿದ್ದರೆ ಜನಾಂದೋಲನ ಮೂಲಕ ಕಾನೂನು ಕೈಗೆ ಎತ್ತಿಕೊಳ್ಳಬೇಕಾಗುತ್ತದೆ ಎಂದು ಶಾಸಕ ಆರಗಜ್ಞಾನೇಂದ್ರ ಎಚ್ಚರಿಸಿದರು.
Vijaya Karnataka Web araga gnanendra


ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ವಾರೆ ಆರಂಭದಿಂದಲೂ ಇಲ್ಲಿಯವರೆಗೆ ಅಕ್ರಮ ಎಸಗಲಾಗಿದೆ. ಕಾನೂನು, ಷರತ್ತು ನಿಯಮಗಳೆಲ್ಲಾ ಉಲ್ಲಂಘನೆ ಆಗಿದ್ದು ಗುತ್ತಿಗೆದಾರರ ಮರ್ಜಿಯಲ್ಲಿ ಕ್ವಾರೆಯಲ್ಲಿ ಮರಳು ಸಾಗಣೆ ಆಗುತ್ತಿದೆ. ದಿನವೂ ಕ್ವಾರೆ ತೆರೆಯುವುದಿಲ್ಲ. ಗುತ್ತಿಗೆದಾರ ನಿರ್ಧರಿಸಿದ ದಿನ ಕ್ವಾರೆಯಲ್ಲಿ ಮರಳು ವಿತರಣೆ ಆಗುತ್ತದೆ. ಮರಳಿನ ಕೃತಕ ಅಭಾವ ಸೃಷ್ಟಿಸಿ ಕ್ವಾರೆಯಲ್ಲಿ ಅಧಿಕ ದರಕ್ಕೆ ಮರಳು ಮಾರಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಪೂರ್ಣ ಮರಳು ದಂಧೆ ಜತೆ ಶಾಮೀಲಾಗಿದೆ ಎಂದು ಆರೋಪಿಸಿದರು.

ಅನೇಕ ಕ್ವಾರೆಯಲ್ಲಿ ಮರಳು ಮಾರಾಟ ಕುರಿತು ದರಪಟ್ಟಿ ಪ್ರಕಟವಾಗಿಲ್ಲ. ಸ್ಥಳೀಯರಿಗೆ , ಸರಕಾರಿ ಕಾಮಗಾರಿಗಳಿಗೆ ಮರಳು ಸಿಗುತ್ತಿಲ್ಲ. ಸರಕಾರದ ಖಜಾನೆಗೂ ಹಣ ಸಿಗದೆ ಕೆಲವೇ ಜನರಿಗೆ ಹಣ ಸಿಗುತ್ತಿದೆ. ಕ್ವಾರೆಯಿಂದ ಸಾವಿರಾರು ಲಾರಿ ಲೋಡ್‌ ಮರಳು ಸಾಗಣೆ ಆಗಿದೆ. ಕ್ವಾರೆಯಲ್ಲಿ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಜಿಲ್ಲಾ, ತಾಲೂಕು ಮರಳು ಮೇಲುಸ್ತುವಾರಿ ಸಮಿತಿ ಈವರೆಗೂ ಕ್ವಾರೆಗೆ ಭೇಟಿ ಕೊಟ್ಟಿಲ್ಲ. ಮರಳು ದಂಧೆಯಲ್ಲಿ ಎಲ್ಲ ಪಕ್ಷದವರೂ ಇದ್ದು ಪ್ರಾಮಾಣಿಕ ಕ್ವಾರೆ ನಿರ್ವಹಣೆ ಕುರಿತು ತಕರಾರು ಇಲ್ಲ. ಅಕ್ರಮವನ್ನು ಬಂಡವಾಳ ಮಾಡಿಕೊಂಡವರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವುದಾಗಿ ಆರಗ ಹೇಳಿದರು.

ಹೊಸನಗರ ತಾಲೂಕಲ್ಲಿ ನಡೆದ ಅಕ್ರಮ ಮರಳು ವ್ಯವಹಾರಕ್ಕಿಂತ ತೀರ್ಥಹಳ್ಳಿ ತಾಲೂಕಲ್ಲಿ ಅಕ್ರಮ ಹೆಚ್ಚಿದೆ. ಹಳ್ಳ, ಸಣ್ಣಪುಟ್ಟ ಮರಳು ಸಂಗ್ರಹ ಪ್ರದೇಶದಲ್ಲಿ ಸ್ಥಳೀಯರಿಗೆ ಮರಳು ಸಿಗದಿರಲು ಕ್ವಾರೆ ಗುತ್ತಿಗೆದಾರರು ಕಾರಣ. ಅಧಿಕಾರಿಗಳು ಗುತ್ತಿಗೆದಾರರ ಮಾತನ್ನು ಬಹಳ ಕೇಳುತ್ತಾರೆ. ಇಂತವರಿಗೆ ಬುದ್ಧಿ ಕಲಿಸದೆ ಇರಲು ಸಾಧ್ಯವಿಲ್ಲ. ಕ್ವಾರೆಯಲ್ಲಿ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ. ಯಾವುದೇ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗುವುದಿಲ್ಲ. ಮರಳು ಅಕ್ರಮ ತಡೆಯುವ ಅಧಿಕಾರ ಇರುವ ಕಂದಾಯ, ಅರಣ್ಯ, ಪೊಲೀಸ್‌ ಇಲಾಖೆ ಜಾಣಕುರುಡತನ ತೋರುತ್ತಿರುವುದು ಏಕೆ ಎಂದು ಆರಗಜ್ಞಾನೇಂದ್ರ ಪ್ರಶ್ನಿಸಿದರು.

ದಬ್ಬಣಗದ್ದೆಯಲ್ಲಿ 15 ಸಾವಿರ: ದಬ್ಬಣಗದ್ದೆ ಕ್ವಾರೆಗಳಲ್ಲಿನ ಮರಳು ಅಕ್ರಮಕ್ಕೆ ಇಲಾಖೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದೆ. ಕ್ವಾರೆಯಲ್ಲಿ 10 ಟನ್‌ ಮರಳಿಗೆ 15 ಸಾವಿರ ರೂಪಾಯಿ ದರ ವಸೂಲಿ ಮಾಡಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಯಾವುದು ಕಾಣಲ್ಲ. ಎಲ್ಲ ವಿಷಯವನ್ನು ಇಲಾಖೆಗೆ ಹೇಳಬೇಕು. ಇಲಾಖೆ ಸರಕಾರಕ್ಕೆ ಮೋಸ ಮಾಡುತ್ತಿದೆ ಎಂದು ಆರಗ ಆರೋಪಿಸಿದರು.

ಬೇಜಾರು ಮಾಡುವ ಡಿಸಿ: ಮರಳು ಅಕ್ರಮ ಕುರಿತು ಡಿಸಿ ದಯಾನಂದ್‌ ಅವರು ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ನನ್ನ ಮೇಲೂ ಮರಳು ಅಕ್ರಮದ ಕರಿನೆರಳು ಬೀಳುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಎಂದು ಆರಗ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೇಶಜವಳಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥಶೆಟ್ಟಿ, ಬಿಜೆಪಿ ಯುವ ಮುಖಂಡ ಕುರುವಳ್ಳಿ ಪೂರ್ಣೇಶ್‌ ಪೂಜಾರಿ, ಗುತ್ತಿಗೆದಾರ ಎಸಿಸಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.


ಬಂಡೆಯಂತೆ ನಿಂತ ಕಾಂಗ್ರೆಸ್‌ ಮುಖಂಡ

ಹುಣಸವಳ್ಳಿ ಕ್ವಾರೆಯಲ್ಲಿ ಅಧಿಕ ಅಕ್ರಮ ನಡೆಯುತ್ತಿದೆ. ಸ್ಥಳೀಯ ಕಾಂಗ್ರೆಸ್‌ ಮುಖಂಡನೊಬ್ಬ ಅಕ್ರಮ ದಂಧೆ ಪರ ಬಂಡೆಯಂತೆ ನಿಂತಿದ್ದಾನೆ. ಕ್ವಾರೆ ಅಕ್ರಮದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಕ್ವಾರೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಗಣಿ ಇಲಾಖೆ ಅಧಿಕಾರಿಗಳನ್ನು ಹೊಣೆ ಮಾಡುವುದು ಗೊತ್ತಿದೆ.

-ಆರಗಜ್ಞಾನೇಂದ್ರ, ಶಾಸಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ