ಆ್ಯಪ್ನಗರ

ಪ್ರತಿ ತಹಸೀಲ್ದಾರ್‌ ಖಾತೆಗೆ ತಲಾ ರೂ. 50 ಲಕ್ಷ

ನೆರೆ ಪರಿಹಾರ ಕಾರ್ಯಗಳಿಗಾಗಿ ಪ್ರತಿ ತಹಸೀಲ್ದಾರರ ಬ್ಯಾಂಕ್‌ ಖಾತೆಗೆ 50 ಲಕ್ಷ ರೂಪಾಯಿಯನ್ನು ಒಂದೆರಡು ದಿನಗಳಲ್ಲಿ ಜಮಾ ಮಾಡುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು.

Vijaya Karnataka 23 Aug 2019, 5:00 am
ಶಿವಮೊಗ್ಗ: ನೆರೆ ಪರಿಹಾರ ಕಾರ್ಯಗಳಿಗಾಗಿ ಪ್ರತಿ ತಹಸೀಲ್ದಾರರ ಬ್ಯಾಂಕ್‌ ಖಾತೆಗೆ 50 ಲಕ್ಷ ರೂಪಾಯಿಯನ್ನು ಒಂದೆರಡು ದಿನಗಳಲ್ಲಿ ಜಮಾ ಮಾಡುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು.
Vijaya Karnataka Web SMG-2208-2-15-22SMG1


ನಗರದ ಜಿಲ್ಲಾಧಿಕಾರಿ ಕಚೇರಿ ಹೊಸ ಸಭಾಂಗಣದಲ್ಲಿ ಪ್ರವಾಹ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಗುರುವಾರ ಕರೆಯಲಾಗಿದ್ದ 'ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ'ಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಅದಕ್ಕಾಗಿ, ತುರ್ತು ಪರಿಹಾರದ ಹಣ ಬಿಡುಗಡೆ ಮಾಡಬೇಕೆಂದು ಜನಪ್ರತಿನಿಧಿಗಳು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಡಿಸಿ, ಇನ್ನೆರಡು ದಿನಗಳಲ್ಲಿ ತಹಸೀಲ್ದಾರರಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಗೀಡಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾಗೂ ಪೂರ್ಣ ಮತ್ತು ಭಾಗಶಃ ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡುವ ಕಾರ್ಯ ತ್ವರಿತಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು ಎಂದು ತಿಳಿಸಿದರು.

ವರದಿಯಲ್ಲಿನ ಲೋಪಕ್ಕೆ ಗರಂ: 'ನೆರೆಯಿಂದ ಜಿಲ್ಲೆಯಲ್ಲಿ ಆಗಿರುವ ನಷ್ಟದ ಬಗ್ಗೆ ವರದಿ ನೀಡಲಾಗಿದೆ. ಆದರೆ, ತೀರ್ಥಹಳ್ಳಿ ತಾಲೂಕಿನಲ್ಲಿ ನೆರೆ ಹಾವಳಿಯಿಂದ ಹಾನಿಗೆ ಒಳಪಟ್ಟಿರುವ ಮನೆ, ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳ ಬಗ್ಗೆ ಸರಿಯಾದ ಸಮೀಕ್ಷೆ ನಡೆಸಿಲ್ಲ. ತೀರ್ಥಹಳ್ಳಿಯಲ್ಲಿ ಕೆಲವು ಮನೆಗಳು ಸಂಪೂರ್ಣ ಕುಸಿದಿದ್ದರೂ ಅದನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದೆ' ಎಂದು ಶಾಸಕ ಅರಗ ಜ್ಞಾನೇಂದ್ರ ಗರಂ ಆದರು.

ತೀರ್ಥಹಳ್ಳಿಯಲ್ಲಿ ಪ್ರವಾಹದಿಂದ ಯಾವುದೇ ಮನೆಗಳು ಸಂಪೂರ್ಣ ಹಾನಿಗೀಡಾಗಿಲ್ಲ ಎಂದು ಮಾಹಿತಿ ನೀಡಲಾಗಿದೆ. ಆದರೆ, ವಾಸ್ತವವೇ ಬೇರೆ ಇದೆ ಎಂದರು. ಸಭೆಯಲ್ಲಿದ್ದ ತೀರ್ಥಹಳ್ಳಿ ತಹಸೀಲ್ದಾರರಿಗೆ ಈ ಕುರಿತು ಜಿಲ್ಲಾಧಿಕಾರಿ ಮಾಹಿತಿ ಕೇಳಿದರು.

'ಆರ್‌ಐ ನೀಡಿರುವ ಮಾಹಿತಿ ನೀಡಿದ್ದೇನೆ. ಈ ಕುರಿತು ಪರಿಶೀಲಿಸಲಾಗುವುದು' ಎಂದು ತಹಸೀಲ್ದಾರ್‌ ಉತ್ತರಿಸಿದರು. ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎಂಎಲ್‌ಸಿ ಆಯನೂರು ಮಂಜುನಾಥ್‌ ಒತ್ತಾಯಿಸಿದರು.

ಹಾನಿ ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು. ಯಾರಿಗೂ ಅನ್ಯಾಯ ಆಗದಂತೆ ಹಾನಿಗೀಡಾದ ಪ್ರತಿಯೊಬ್ಬರಿಗೂ ಸಮರ್ಪಕ ಪರಿಹಾರ ಸಿಗುವಂತೆ ಖಾತರಿ ಪಡಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಸೂಚನೆ ನೀಡಿದರು.

ನೋಟಿಸ್‌ ಜಾರಿಗೊಳಿಸಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದ ಉಂಟಾಗಿರುವ ಹಾನಿ ಬಗ್ಗೆ ಸಮರ್ಪಕ ಸಮೀಕ್ಷೆ ನಡೆಸಬೇಕು. ಮಾಹಿತಿ ಒದಗಿಸದ ಕಂದಾಯ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಬೇಕು. ತಕ್ಷ ಣ ಮಾಹಿತಿ ಒದಗಿಸಬೇಕೆಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಅತಿವೃಷ್ಟಿ ಬಳಿಕ ಶಾಲಾ ಕಟ್ಟಡಗಳ ಸುರಕ್ಷ ತೆ ಬಗ್ಗೆ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ಒದಗಿಸುವಂತೆ ಸೂಚಿಸಲಾಗಿತ್ತಾದರೂ ಇದುವರೆಗೆ ಪರಿಶೀಲನೆ ನಡೆಸಿಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು. ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಪಂ ಸಿಇಒಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೆರೆ ಪೀಡಿತ 4,573 ಮನೆಗಳನ್ನು ಗುರುತಿಸಲಾಗಿದೆ. ಪರಿಹಾರ ಕೋರಿ ತಹಸೀಲ್ದಾರ್‌ ಅವರಿಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಇನ್ನೂ ಕೆಲವು ಮನೆಗಳ ಸಮೀಕ್ಷೆ ಕಾರ್ಯ ನಡೆಸಬೇಕಾಗಿದೆ ಎಂದು ಆಯುಕ್ತೆ ಚಾರುಲತಾ ಸೋಮಲ್‌ ತಿಳಿಸಿದರು.

ಶಾಸಕರಾದ ಕೆ.ಬಿ.ಅಶೋಕ್‌ ನಾಯ್ಕ್‌, ಎಸ್‌. ರುದ್ರೇಗೌಡ, ಆಯನೂರು ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್‌. ವೈಶಾಲಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

===
ತುರ್ತಾಗಿ 10 ಸಾವಿರವಾದ್ರೂ ಬಿಡುಗಡೆ ಮಾಡಿ
'ಮಲೆನಾಡು ಭಾಗದ ಕೃಷಿ ಜಮೀನಿನಲ್ಲಿ ಪ್ರವಾಹದಿಂದ ಸಾಕಷ್ಟು ಮಣ್ಣು ಮತ್ತು ಮರಳು ಶೇಖರಣೆಯಾಗಿದೆ. ರಸ್ತೆಗಳು ಪೂರ್ಣ ಹಾಳಾಗಿರುವುದರಿಂದ ಅಂತಹ ಕಡೆಗಳಲ್ಲಿ ಯಂತ್ರಗಳನ್ನು ಬಳಸಿ ಮಣ್ಣೆತ್ತಲು ಸಾಧ್ಯವಿಲ್ಲ. ಮರಳು ತೆಗೆಯುವವರೆಗೆ ಉಳುಮೆ ಮಾಡಲು ಸಾಧ್ಯವಿಲ್ಲ,. ಆದ್ದರಿಂದ ತುರ್ತಾಗಿ ಪ್ರತಿ ರೈತರಿಗೆ 10 ಸಾವಿರ ರೂ. ನೆರವು ಒದಗಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಆಗ್ರಹಿಸಿದರು.

'ಕೃಷಿ ಭೂಮಿಯಲ್ಲಿ ಕನಿಷ್ಠ ಮೂರು ಇಂಚಿನಷ್ಟು ಮರಳು ಮತ್ತು ಮಣ್ಣು ತುಂಬಿದ್ದರೆ ಹೆಕ್ಟೆರ್‌ಗೆ 12,200 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಾನಿ ಉಂಟಾದರೆ ಹೆಕ್ಟೆರ್‌ಗೆ 35,500 ರೂ. ಪರಿಹಾರ ನೀಡುವ ಅವಕಾಶವಿದೆ. ಜಿಲ್ಲೆಯಲ್ಲಿ 903 ಹೆಕ್ಟೆರ್‌ ಕೃಷಿ ಭೂಮಿಯಲ್ಲಿ ಮೂರು ಇಂಚಿನಷ್ಟು ಹೂಳು ತುಂಬಿದೆ. ಪರಿಹಾರ ಒದಗಿಸಲಾಗುವುದು' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ ಕುಮಾರ್‌ ತಿಳಿಸಿದರು.

===
ಆ ಫೈಲ್‌ ನನಗೆ ಕಳುಹಿಸಿ...
ಆ.3ರಂದು ಸಾಗರದಲ್ಲಿ ರೈತರೊಬ್ಬರು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು ಅವರಿಗೆ ಪರಿಹಾರ ನೀಡುವ ಬಗ್ಗೆ ಹಾಲಪ್ಪ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸಿ ದರ್ಶನ್‌, ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಹಾಗೂ ಜಿಲ್ಲೆಗೆ ಆ.6ರಿಂದ ಪ್ರವಾಹ ಎದುರಾಗಿರುವುದರಿಂದ ಆಕಸ್ಮಿಕ ಸಾವೆಂದು ಪರಿಗಣಿಸಿದ್ದು, 2 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು. ತಕ್ಷಣ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಶಿವಕುಮಾರ್‌, 'ಸಂಜೆಯೊಳಗೆ ಆ ಫೈಲ್‌ ಅನ್ನು ನನಗೆ ಕಳುಹಿಸಿ' ಎಂದು ನಿರ್ದೇಶನ ನೀಡಿದರು.

===
ಕೇಳಸ್ತಿಲ್ಲ, ಮೈಕ್‌ ತಗೊಂಡ್‌ ಮಾತಾಡಿ...
ನಗರದ ಜಿಲ್ಲಾಧಿಕಾರಿ ಕಚೇರಿಯ ಹೊಸ ಸಭಾಂಗಣ ಸುಸಜ್ಜಿತವಾಗಿದ್ದರೂ ಬಹುತೇಕ ಮೈಕ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ, ಅರ್ಧಂಬರ್ಧ ಕೇಳಿಸುತ್ತಿತ್ತು. ಅದಕ್ಕೆ ಸಿಡಿಮಿಡಿಗೊಂಡ ಶಾಸಕರು, ಮೈಕ್‌ನಲ್ಲಿ ಮಾತಾಡಿ ಏನು ಕೇಳಸ್ತಿಲ್ಲ ಎಂದು ತಾಕೀತು ಮಾಡಿದರು. ಹಾಳಾದ ಮೈಕ್‌ಗಳಲ್ಲಿ ಇತ್ತ ಮಾತನಾಡಲಾಗದೇ ಅತ್ತ ಮೇಲಾಧಿಕಾರಿಗಳಿಗೆ ಖಡಕ್‌ ಆಗಿ ಉತ್ತರಿಸಲೂ ಸಾಧ್ಯವಾಗದೇ ತಹಸೀಲ್ದಾರ್‌ಗಳು ಪೇಚಿಗೆ ಸಿಲುಕಿದ ಸನ್ನಿವೇಶ ನಡೆಯಿತು. ಬಳಿಕ ಎಲ್ಲರನ್ನೂ ಮುಂಭಾಗದಲ್ಲಿ ಕೂರುವಂತೆ ಸೂಚನೆ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ