ಆ್ಯಪ್ನಗರ

ಸೈನಿಕನ ಇನ್ನೊಂದು ಹೆಸರೆ ಶಿಸ್ತು,ದೇಶಾಭಿಮಾನ

ತಾಯ್ನಾಡಿನ ಸಂರಕ್ಷಣೆಗಾಗಿ ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಅವರಲ್ಲಿ ಕೆಲವರ ಬದುಕು, ಸಾಹಸ ಕಥೆಗಳು ಇತಿಹಾಸ ಸೇರಿವೆ ಎಂದು ಸೇನಾ ಪದಕ ಪುರಸ್ಕೃತ ಕ್ಯಾ.ನವೀನ್‌ ನಾಗಪ್ಪ ಹೇಳಿದರು.

Vijaya Karnataka 12 Aug 2018, 5:00 am
ಶಿವಮೊಗ್ಗ : ತಾಯ್ನಾಡಿನ ಸಂರಕ್ಷಣೆಗಾಗಿ ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಅವರಲ್ಲಿ ಕೆಲವರ ಬದುಕು, ಸಾಹಸ ಕಥೆಗಳು ಇತಿಹಾಸ ಸೇರಿವೆ ಎಂದು ಸೇನಾ ಪದಕ ಪುರಸ್ಕೃತ ಕ್ಯಾ.ನವೀನ್‌ ನಾಗಪ್ಪ ಹೇಳಿದರು.
Vijaya Karnataka Web SMR-11SMG2


ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಮಲ್ನಾಡ್‌ ಓಪನ್‌ ಗ್ರೂಪ್‌ ಆಯೋಜಿಸಿದ್ದ 'ನವೀನ ನುಡಿಗಳು' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಡೀ ಜಗತ್ತಿನ ಗಮನ ಸೆಳೆದಿದ್ದ ಕಾರ್ಗಿಲ್‌ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದೆ ಎಂಬ ಘೋಷಣೆ ಕೇಳಿ ಇಂದಿಗೆ 19 ವರ್ಷವಾಗಿದೆ. ಆ ಯುದ್ಧದಲ್ಲಿ ಪಾಕ್‌ ಸೈನಿಕರನ್ನು ಸದೆ ಬಡಿದು ಭಾರತದ ಧ್ವಜ ಹಾರಿಸಿದ್ದೆ ರೋಚಕ ಮತ್ತು ಹೆಮ್ಮೆಯ ವಿಷಯ ಎಂದರು.

ಭಾರತೀಯ ಸೇನೆಗೆ ಸೇರ್ಪಡೆಯಾಗಬೇಕೆಂಬ ಬಯಕೆ ತಮ್ಮಲ್ಲಿತ್ತು. ಹೀಗಾಗಿ, ಎಂಜಿನಿಯರಿಂಗ್‌ ಪದವಿ ಪಡೆದಿದ್ದರೂ ದೇಶ ಸೇವೆಗೆಂದು ಸೈನ್ಯಕ್ಕೆ ಸೇರಿದೆ. ತರಬೇತಿ ಪಡೆದು 6 ತಿಂಗಳಲ್ಲಿ ಕಾರ್ಗಿಲ್‌ ಯುದ್ಧ ಪ್ರಾರಂಭವಾಯಿತು. ಅದರಲ್ಲಿ ಪಾಲ್ಗೊಳ್ಳುವ ಸದಾವಕಾಶ ತಮಗೆ ದೊರಕಿತು ಎಂದರು.

ಪ್ರತಿ ವರ್ಷ ಹಿಮಪಾತವಾಗುವ ಸಂದರ್ಭ ಎರಡೂ ರಾಷ್ಟ್ರಗಳ ಸೈನಿಕರು ಹಿಮ ಪ್ರದೇಶದಿಂದ ಮರಳುವುದು ಹಿಂದಿನಿಂದ ಪಾಲಿಸಿಕೊಂಡು ಬಂದ ಪದ್ಧತಿ. ಆದರೆ, 1999ರಲ್ಲಿ ಪಾಕಿಸ್ತಾನ ಈ ಒಪ್ಪಂದವನ್ನು ಉಲ್ಲಂಘಿಸಿ ಕಾರ್ಗಿಲ್‌ ಬೆಟ್ಟ ಶ್ರೇಣಿಯಲ್ಲಿ ಬೀಡುಬಿಟ್ಟಿತ್ತು. ನಮ್ಮ ಪ್ರದೇಶವನ್ನು ಹಿಡಿತಕ್ಕೆ ಪಡೆದುಕೊಂಡಿತು. ಇದನ್ನು ಗ್ರಹಿಸಿದ ಭಾರತೀಯ ಸೇನೆ ಭಾರತದ ಭೂ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯಲು ಅನಿವಾರ್ಯವಾಗಿ ಯುದ್ಧ ಪ್ರಾರಂಭಿಸಬೇಕಾಯಿತು ಎಂದರು.

ಆ ಸಂದರ್ಭ ತಾವು ಜಮ್ಮು ಮತ್ತು ಕಾಶ್ಮೀರದ 13ನೇ ಬೆಟಾಲಿಯನ್‌ ತಂಡದಲ್ಲಿದ್ದೆ. ತಾವು ಕೂಡ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ಯುದ್ಧದ ಸಂದರ್ಭ ಅನೇಕ ರೋಚಕ ಘಟನೆಗಳು ನಡೆದವು. ಪಾಕಿಸ್ತಾನಿ ಸೈನಿಕರನ್ನು ಬಗ್ಗುಬಡಿದು ಭಾರತೀಯ ಸೇನೆ ಮುನ್ನುಗ್ಗಿದ್ದು ನಿಜಕ್ಕೂ ಹೆಮ್ಮೆ ತರಿಸುತ್ತದೆ.

ಇದೇ ರೀತಿ ಬೆಟ್ಟ ಪ್ರದೇಶವೊಂದರಲ್ಲಿ ಹೋರಾಡುವಾಗ ಪಾಕಿ ಸೈನಿಕರು ಎಸೆದ ಗ್ರಾನೆಡ್‌ ಸ್ಫೋಟಗೊಂಡು ತಮ್ಮ ಎರಡು ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿತು. ಸರಿಸುಮಾರು 21 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ತಮಗೆ ಏನೇ ಸಂಕಷ್ಟಗಳು ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಶತ್ರುಗಳೊಂದಿಗೆ ಹೋರಾಡಿ ಕಾರ್ಗಿಲ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾದೆವು ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌ ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಎಚ್‌.ಡಿ.ರಮೇಶ್‌ ಶಾಸ್ತ್ರಿ, ಗುರುರಾಜ್‌ ಎಸ್‌.ಗಿರಿಮಾಜಿ, ಉಮೇಶ್‌ ಶಾಸ್ತ್ರಿ, ಶಕುಂತಲಾ ಚಂದ್ರಶೇಖರ್‌ ಮತ್ತಿತರರು ಹಾಜರಿದ್ದರು.


ಸೈನಿಕನಾಗುವುದೇ ಒಂದು ಹೆಮ್ಮೆಯ ವಿಚಾರ. ಸೈನಿಕರೆಂದರೆ ಶಿಸ್ತು ಮತ್ತು ದೇಶಾಭಿಮಾನ. 1998ರಲ್ಲಿ ಪೋಕ್ರಾನ್‌ ಅಣು ಪರೀಕ್ಷೆ ಬಳಿಕ ಪ್ರಪಂಚದ ಎಲ್ಲ ದೇಶಗಳು ಭಾರತದ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತ್ತು. ಪಾಕಿಸ್ತಾನ ಕೂಡ ಯುದ್ಧದ ಸಿದ್ಧತೆ ನಡೆಸುತ್ತಿದ್ದ ಸಂದಿಗ್ನ ಪರಿಸ್ಥಿತಿ ಅದು. ಮೈತ್ರಿಯ ನಗೆ ಬೀರಿಚೂರಿ ಹಾಕುವ ಕಾರ್ಯಕ್ಕೆ ಮುಂದಾಗಿತ್ತು. ತನ್ನ ಪಡೆಯನ್ನು ಸಿಯಾಚಿನ್‌ ಮತ್ತು ಕಾರ್ಗಿಲ್‌ ಪ್ರದೇಶಗಳಲ್ಲಿ ಶೇಖರಣೆ ಮಾಡುತ್ತ ದೋಸ್ತಿಯ ನಾಟಕವಾಡುತ್ತಿತ್ತು. ಈ ಸಂದರ್ಭ ನಮ್ಮ ಸೇನೆ ಅಪ್ರತಿಮ ಸಾಹಸ ಮೆರೆದು ಪಾಕ್‌ನ್ನು ಬಗ್ಗುಬಡೆಯಿತು. ಯುದ್ಧದ ಸಂದರ್ಭ ತಮಗೆ ಸಹಾಯಕರಾಗಿದ್ದ ಶಾಮ್‌ಸಿಂಗ್‌ ಹಾಗೂ ಕ್ಯಾ.ವಿಕ್ರಮ್‌ ಬಾತ್ರಾ ವೀರ ಮರಣ ಹೊಂದಿದರು ಎಂದು ಹಳೆಯ ನೆನಪನ್ನು ಬಿಚ್ಚಿಡುವಾಗ ಅವರ ಕಣ್ಣುಗಳು ಒದ್ದೆಯಾದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ