ಆ್ಯಪ್ನಗರ

ಮಲೆನಾಡಿಗರಿಗೆ ಸಿಗದ ಸೊಪ್ಪಿನಬೆಟ್ಟ; ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾದ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿ!

ಸಾಂಪ್ರಾದಾಯಿಕ ಕೃಷಿ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯಿದೆ ಅನ್ವಯ ಸೊಪ್ಪಿನಬೆಟ್ಟ ಪ್ರದೇಶದ ಮೇಲೆ ರೈತರಿಗೆ ವಿಶೇಷ ಹಕ್ಕಿದೆಯಾದರೂ ಅರಣ್ಯ ಪರಿಸರ ಸಂರಕ್ಷಣೆ ಕುರಿತಂತೆ ಕಾನೂನು ವ್ಯಾಪ್ತಿಯಲ್ಲಿನ ಜಿಜ್ಞಾಸೆ ದೆಸೆಯಿಂದ ದಶಕದಿಂದೀಚೆ ಸೊಪ್ಪಿನಬೆಟ್ಟ ಪ್ರದೇಶ ವಿವಾದಕ್ಕೀಡಾಗಿದೆ.

Vijaya Karnataka Web 3 Mar 2021, 9:54 am

ಹೈಲೈಟ್ಸ್‌:

  • ಸದ್ದಿಲ್ಲದೆ ನಡೆಯುತ್ತಿದೆ ಸೊಪ್ಪಿನಬೆಟ್ಟ ಪ್ರದೇಶವನ್ನು ರೈತರಿಂದ ಕಸಿದುಕೊಳ್ಳುವ ಪ್ರಯತ್ನ
  • ಸೊಪ್ಪಿನಬೆಟ್ಟ ಪ್ರದೇಶದಲ್ಲಿನ ಬೆಟ್ಟದಾರರಿಗೆ ಸೌಲಭ್ಯ ಹೆಚ್ಚಿಸಲು ಕರ್ನಾಟಕ ಅರಣ್ಯ ಕೈಪಿಡಿ ನಿಯಮ ಬದಲು
  • ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾದ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿ!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ
ಶಿವಮೊಗ್ಗ: ಸೊಪ್ಪಿನಬೆಟ್ಟ ಪ್ರದೇಶ ಮೇಲೆ ರೈತರ ವಿಶೇಷ ಹಕ್ಕನ್ನು ಸಮಗ್ರವಾಗಿ ಪ್ರತಿಷ್ಠಾಪಿಸುವ ಕುರಿತಂತೆ ರಾಜ್ಯಸರಕಾರ ಈವರೆಗೂ ಆಸಕ್ತಿ ತೋರಿಸಿಲ್ಲ. ಸಾಂಪ್ರಾದಾಯಿಕ ಕೃಷಿ ನೇಪಥ್ಯಕ್ಕೆ ಸರಿಯುವ ಆತಂಕದ ನಡುವೆ ಸೊಪ್ಪಿನಬೆಟ್ಟ ಪ್ರದೇಶವನ್ನು ರೈತರಿಂದ ಕಸಿದುಕೊಳ್ಳುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ.
ಏತ್ಮನಧ್ಯೆ, ಬೇರೆ ಜಿಲ್ಲೆಗಳ ಸೊಪ್ಪಿನಬೆಟ್ಟ ಪ್ರದೇಶಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಅರಣ್ಯ ಕೈಪಿಡಿ ನಿಯಮವಳಿ ಬದಲಾಗಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿ ಸೊಪ್ಪಿನಬೆಟ್ಟ ಪ್ರದೇಶದಲ್ಲಿನ ಬೆಟ್ಟದಾರರಿಗೆ ಸೌಲಭ್ಯ ಹೆಚ್ಚಿಸಲು ಕರ್ನಾಟಕ ಅರಣ್ಯ ಕೈಪಿಡಿ ನಿಯಮ ಬದಲಾಗಿದೆ.

ಕೈಪಿಡಿ ನಿಯಮ
ಕಂದಾಯ ನಿಯಮಾವಳಿ ಪ್ರಕಾರ ಕೃಷಿಗೆ ಪೂರಕ ಎಂದು ಭಾವಿಸಿ ವಿಶೇಷ ಹಕ್ಕಿನಿಂದ ಸೊಪ್ಪಿನಬೆಟ್ಟ ಪ್ರದೇಶವನ್ನು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸೊಪ್ಪಿನಬೆಟ್ಟ ಪ್ರದೇಶಕ್ಕೆ ಸಂಬಂಧಪಟ್ಟಂತೆ ಸೌಲಭ್ಯ ಹೆಚ್ಚಿಸಲು 2015 ಜುಲೈ 22ರಂದು ಅರಣ್ಯ, ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದ ಅನ್ವಯ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿಗೊಳಿಸಿ 2016ರ ಆಗಸ್ಟ್‌ 6ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಗೊಂಡಿದೆ. ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 79(2)ರಂತೆ ಕುಮ್ಕಿ, ಕಾನು, ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮಾಬಾನೆ ಪ್ರದೇಶ ರೈತರ ವಿಶೇಷ ಹಕ್ಕಿಗೆ ಒಳಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೊಪ್ಪಿನಬೆಟ್ಟ ಪ್ರದೇಶದ ಸರಳ ನಿರ್ವಹಣೆ ಉದ್ದೇಶದಲ್ಲಿ ಕರ್ನಾಟಕ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿ ಆಗಿದೆ. ಜಿಲ್ಲೆಯ ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಬೆಟ್ಟದಾರರಿಗೆ ಶೇ.75, ಸರಕಾರಕ್ಕೆ ಶೇ.25. ಈ ತೀರ್ಮಾನವನ್ನು ಕಾನೂನು ಇಲಾಖೆ ಒಪ್ಪದಿದ್ದರೆ ಬೆಟ್ಟದಾರರಿಗೆ ಶೇ.50, ಬೆಟ್ಟದಾರರ ಸಮೂಹಕ್ಕೆ ಶೇ.25, ಸರಕಾರಕ್ಕೆ ಶೇ.25ರಷ್ಟು ಸೌಕರ‍್ಯ ಹಕ್ಕು ನೀಡಬೇಕು ಎಂದು ಸರಕಾರ ಆದೇಶಿಸಿದೆ.
ನಗರ ಹಸರೀಕರಣ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ: ನಿವೃತ್ತ ಆರ್‌ಎಫ್‌ಒ ಸೇರಿ ಮೂವರ ಬಂಧನ
ತಿದ್ದುಪಡಿ ಜಾರಿ
ಕರ್ನಾಟಕ ಅರಣ್ಯ ಕೈಪಿಡಿ 1976ರ ಕಂಡಿಕೆ 131ಎಫ್‌ 7 ನಿಯಮ ತಿದ್ದುಪಡಿಗೆ ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಸಲ್ಲಿಸಿದ ಪ್ರಸ್ತಾವನೆ ಆಧರಿಸಿ ಸೊಪ್ಟಿನಬೆಟ್ಟ ಪ್ರದೇಶದ ಸೌಲಭ್ಯ ಹೆಚ್ಚಿಸಿ ಆದೇಶಿಸಿದೆ. ತಿದ್ದುಪಡಿ ಕರಡನ್ನು ಸಂಸದೀಯ ವ್ಯವಹಾರ, ಶಾಸನ ರಚನಾ ಇಲಾಖೆಯೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದೆ. ಅರಣ್ಯ ಕಾಯಿದೆ ಮತ್ತು ನಿಯಮಗಳು, ಅರಣ್ಯಸಂರಕ್ಷಣೆ ಕಾಯಿದೆ, ನಿಯಮಕ್ಕೆ ವ್ಯತಿರಿಕ್ತವಾಗದಂತೆ ಎಚ್ಚರ ವಹಿಸಿ ಕರ್ನಾಟಕ ಅರಣ್ಯ ಕೈಪಿಡಿ 1976ರ ನಿಯಮ 131(ಎಫ್‌)ಗೆ ಸಂಬಂಧಿಸಿದಂತೆ ತಿದ್ದುಪಡಿ ನಿಯಮವನ್ನು ಸರಕಾರ ಜಾರಿಗೊಳಿಸಿದೆ. ಕೃಷಿಗೆ ಪೂರಕವಾದ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿನ ಬಗರ್‌ಹುಕುಂ ಸಾಗುವಳಿ ಮಂಜೂರಾತಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕರ್ನಾಟಕ ಅರಣ್ಯಕೈಪಿಡಿ ನಿಯಮ ತಿದ್ದುಪಡಿ ವಿವಾದಿತ ತೀರ್ಮಾನವಾದರೂ ಅಚ್ಚರಿ ಇಲ್ಲ.
ಎಲ್ಲೋ ಕಡಿದ ಮರಗಳಿಗೆ ಇನ್ನೆಲ್ಲೋ ಜಾಗ..! ಅಚ್ಚರಿ ಮೂಡಿಸಿದ ಅರಣ್ಯ ಇಲಾಖೆ ನೀತಿ

ಮಲೆನಾಡು ಭಾಗದಲ್ಲಿ
ಚರ್ಚೆಗೆ ನಾಂದಿ..!
ಅರಣ್ಯ ಸಂರಕ್ಷಣೆ ನಿಯಮ ಕಠಿಣವಾಗುತ್ತಿರುವ ಹೊತ್ತಲ್ಲಿ ಉತ್ತರ ಕನ್ನಡ ಜಿಲ್ಲೆಯ ಬೆಟ್ಟದಾರರಿಗೆ ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಸೌಲಭ್ಯ ಹೆಚ್ಚಿಸುವ ಸಂಬಂಧ ಅರಣ್ಯ ಕೈಪಿಡಿ ನಿಯಮ ತಿದ್ದುಪಡಿಗೊಳಿಸಿರುವ ಅಂಶ ಸಹಜವಾಗಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೊಸ ಚರ್ಚೆಗೆ ನಾಂದಿ ಆಗುವ ಸಾಧ್ಯತೆ ಇದೆ. 4 ವರ್ಷದ ಹಿಂದೆ ಸೊಪ್ಟಿನ ಬೆಟ್ಟ ಪ್ರದೇಶದಲ್ಲಿ ಬೆಟ್ಟದಾರರಿಗೆ ವಿಶೇಷ ಸೌಲಭ್ಯ ಒದಗಿಸುವ ಸಂಬಂಧ ಸರಕಾರ ರೂಪಿಸಿರುವ ನಿಯಮ ಇನ್ನು ಗೌಪ್ಯವಾಗಿ ಇದ್ದಂತಿದೆ.

ಕಂದಾಯ ಕಾಯಿದೆ ಅನ್ವಯ ರೈತರ ವಿಶೇಷ ಹಕ್ಕಿನ ಸೊಪ್ಪಿನಬೆಟ್ಟ ಪ್ರದೇಶವನ್ನು ಅರಣ್ಯ ಸಂರಕ್ಷಣೆ ನಿಯಮವಳಿಯಿಂದ ದೂರ ಇಡಬೇಕು. ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಸೌಕರ‍್ಯ ಮಾತ್ರ ನೀಡುವುದಲ್ಲ, ಈ ಪ್ರದೇಶದಲ್ಲಿ ಭೂ ಮಂಜೂರಾತಿಗೆ ಸರಕಾರ ಆದೇಶ ಹೊರಡಿಸದಿದ್ದರೆ ಜನಾಂದೋಲನ ಮಾಡಲಾಗುತ್ತದೆ.
ರಮೇಶ್‌ ಹೆಗ್ಡೆ, ಪ್ರಧಾನ ಕಾರ‍್ಯದರ್ಶಿ, ಶಿವಮೊಗ್ಗ ಜಿಲ್ಲಾಕಾಂಗ್ರೆಸ್‌ ಘಟಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ