ಆ್ಯಪ್ನಗರ

ಕೃಷಿ ಉಪಕರಣಗಳ ಮೇಲಿನ ಸಬ್ಸಿಡಿ ಹೆಚ್ಚಳ

ಕೃಷಿ ಉಪಕರಣಗಳ ಮೇಲೆ ಸಾಮಾನ್ಯ ವರ್ಗದ ರೈತರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಶೇ.50ರಿಂದ ಶೇ.75ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು.

Vijaya Karnataka 14 Dec 2022, 4:43 pm
ಶಿವಮೊಗ್ಗ : ಕೃಷಿ ಉಪಕರಣಗಳ ಮೇಲೆ ಸಾಮಾನ್ಯ ವರ್ಗದ ರೈತರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಶೇ.50ರಿಂದ ಶೇ.75ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು.
Vijaya Karnataka Web SMG-0903-2-15-9SMG4


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಟಾರ್ಪಾಲಿನ್‌ ಸೇರಿದಂತೆ ಕೃಷಿ ಉಪಕರಣಗಳ ಮೇಲಿನ ಸಬ್ಸಿಡಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಶೇ.90ರಷ್ಟಿದೆ. ಸಾಮಾನ್ಯ ವರ್ಗದವರಿಗೆ ನೀಡಲಾಗುವ ಸಬ್ಸಿಡಿಯನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಹೊಳೆಹೊನ್ನೂರು ಗ್ರಾ.ಪಂ.ಅಧ್ಯಕ್ಷೆ ಮಮತಾ ಅವರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಕೇವಲ ಟಾರ್ಪಾಲಿನ್‌ ಅಲ್ಲದೆ ವಿವಿಧ ಯೋಜನೆಗಳಡಿಯ ಎಲ್ಲ ಕೃಷಿ ಉಪಕರಣಗಳ ಮೇಲೆ ನೀಡಲಾಗುವ ಸಬ್ಸಿಡಿಯನ್ನು ಸಾಮಾನ್ಯ ವರ್ಗದವರಿಗೆ ಶೇ.50ರಿಂದ ಶೇ.75ಕ್ಕೆ ಹೆಚ್ಚಳ ಮಾಡಲಾಗುವುದು. ಇದು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಲಿದ್ದು ಇದಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದರು.

ಕೃಷಿ ಹೊಂಡ ಕಾಮಗಾರಿ ಪೂರ್ಣಗೊಳಿಸಿ: ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 1092 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ನೀಡಲಾಗಿದೆ. ಅದರಲ್ಲಿ 686 ಕೃಷಿ ಹೊಂಡಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, 546 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಕೃಷಿ ಹೊಂಡಗಳನ್ನು ಆದಷ್ಟು ಬೇಗನೆ ನಿರ್ಮಿಸುವಂತೆ ಸಚಿವರು ಸೂಚನೆ ನೀಡಿದರು. ಕೃಷಿ ಭಾಗ್ಯ ಯೋಜನೆಯಡಿ 3.65 ಕೋಟಿ ರೂ. ಬಿಡುಗಡೆಯಾಗಿದ್ದು, 3.08ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‌ ಕುಮಾರ್‌ ತಿಳಿಸಿದರು.

ಇಸ್ರೇಲ್‌ ಮಾದರಿ ಕೃಷಿ: ಯಾಂತ್ರೀಕೃತ ನಾಟಿ ಸೇರಿದಂತೆ ಭತ್ತದ ಯಾಂತ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಡಿಮೆ ನೀರು ಬಳಸಿಕೊಂಡು ವೈಜ್ಞಾನಿಕ ಕೃಷಿ ಚಟುವಟಿಕೆ ನಡೆಸುವ ಇಸ್ರೇಲ್‌ ಮಾದರಿ ಕೃಷಿಯ ಪ್ರಾತ್ಯಕ್ಷಿಕೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು. ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು. ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಶೂನ್ಯ ಬಂಡವಾಳ ಕೃಷಿ ಉತ್ತೇಜಿಸಲು ನೆರವು ನೀಡಲಾಗುತ್ತಿದೆ. ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕೆಂದು ಸಚಿವರು ಸೂಚಿಸಿದರು.

ಕೃಷಿ ಯಂತ್ರಧಾರೆ: ಜಿಲ್ಲೆಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ 274 ಗ್ರಾಮಗಳ ವ್ಯಾಪ್ತಿಯಲ್ಲಿ 7ಕೃಷಿ ಯಂತ್ರಧಾರೆ ಕೇಂದ್ರ, ಜಾನ್‌ ಡೀರ್‌ ಸಂಸ್ಥೆ ಸಹಯೋಗದಲ್ಲಿ 107 ಕೇಂದ್ರಗಳ ವ್ಯಾಪ್ತಿಯಲ್ಲಿ 3 ಹಾಗೂ ವರ್ಷಾ ಅಸೋಸಿಯೇಟ್ಸ್‌ ಚಿತ್ರದುರ್ಗ ಸಹಯೋಗದಲ್ಲಿ 18 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಜಿ.ಪಂ.ಸಿಇಒ ಕೆ.ಶಿವರಾಮೇಗೌಡ, ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

----------------------

ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು.

ಶಿವಮೊಗ್ಗ ತಾಲೂಕು ಚಾಮೇನಹಳ್ಳಿ ಗ್ರಾಮದಲ್ಲಿ ಕೃಷಿ ಹೊಂಡವನ್ನು ವೀಕ್ಷಿಸಿದ ಬಳಿಕ ಅವರು ರೈತರೊಂದಿಗೆ ಮಾತನಾಡಿದರು.

ಕೃಷಿ ಹೊಂಡ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.80ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಸೂಕ್ಷ ್ಮ ನೀರಾವರಿ ಮೂಲಕ ಕೃಷಿಯಲ್ಲಿ ನೀರಿನ ಬಳಕೆ ಕಡಿಮೆ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಇದೇ ರೀತಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುವಂತಾಗಲು ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.

------------------------


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ