ಆ್ಯಪ್ನಗರ

ಆರೋಗ್ಯ ಇಲಾಖೆ ಸಿಬ್ಬಂದಿ ಸೇವೆ ಅನನ್ಯ

ಒತ್ತಡದ ನಡುವೆಯೂ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳ ಸೇವೆ ಅನನ್ಯ ಎಂದು ಜಿಲ್ಲಾ ಸರ್ಜನ್‌ ಡಾ. ರಘುನಂದನ್‌ ಹೇಳಿದರು.

Vijaya Karnataka 2 Jun 2019, 5:00 am
ಶಿವಮೊಗ್ಗ: ಒತ್ತಡದ ನಡುವೆಯೂ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳ ಸೇವೆ ಅನನ್ಯ ಎಂದು ಜಿಲ್ಲಾ ಸರ್ಜನ್‌ ಡಾ. ರಘುನಂದನ್‌ ಹೇಳಿದರು.
Vijaya Karnataka Web SMR-1GANESH2


ನಗರದ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ಉದಯಕುಮಾರ್‌ ಶೆಟ್ಟಿ, ವೆಂಕಟೇಶಮೂರ್ತಿ ಹಾಗೂ ಸರಸಮ್ಮ ಅವರನ್ನು ಗೌರವಿಸಿ ಅವರು ಮಾತನಾಡಿದರು.

ಕಳೆದ 37 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಸೀನಿಯರ್‌ ಫಾರ್ಮಾಸಿಸ್ಟ್‌ ಉದಯಕುಮಾರ್‌ ಶೆಟ್ಟಿ ಜನರ ಪ್ರೀತಿ, ವಿಶ್ವಾಸ ಕಳಿಸಿದ್ದಾರೆ. ಸೇವಾ ಅವಧಿಯಲ್ಲಿ ಯಾವುದಕ್ಕೂ ಬೇಸರ ಪಟ್ಟುಕೊಳ್ಳದೆ ತಾಳ್ಮೆ ಹಾಗೂ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ್ದಾರೆ. ಅವರ ಸೇವೆ ಅನನ್ಯವಾದುದು ಎಂದರು.

ಡೆಂಟಲ್‌ ಮೆಕಾನಿಕ್‌ ಆಗಿ ಸೇವೆ ಸಲ್ಲಿಸಿ ವಯೋ ನಿವೃತ್ತರಾಗಿರುವ ವೆಂಕಟೇಶಮೂರ್ತಿ ಅವರ ಕೊರತೆ ಎದ್ದು ಕಾಣುತ್ತದೆ. ರಾಜ್ಯದಲ್ಲಿ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇಬ್ಬರು ಮಾತ್ರ. ಅವರಲ್ಲಿ ಇದೀಗ ಒಬ್ಬರು ವಯೋ ನಿವೃತ್ತರಾಗಿದ್ದಾರೆ. ಈ ಸ್ಥಾನ ತುಂಬುವುದು ಕಷ್ಟ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಸರಕಾರಿ ಇಲಾಖೆಯಲ್ಲಿ ವಯೋನಿವೃತ್ತಿ ಸಹಜ. ಸರಕಾರಿ ಖಾಲಿ ಹುದ್ದೆ ಶೀಘ್ರ ಭರ್ತಿ ಮಾಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಆರೋಗ್ಯ ಇಲಾಖೆಯಲ್ಲಿನ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕರಿಗೆ ತಕ್ಕಂತೆ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದರು.

ಫಾರ್ಮಸಿಸ್ಟ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ರಭಾಕರ್‌ ಮಾತನಾಡಿ, ಆರೋಗ್ಯ ಇಲಾಖೆ ಹಿರಿಯ ಸಿಬ್ಬಂದಿಗಳು ವಯೋ ನಿವೃತ್ತರಾಗಿದ್ದಾರೆ. ಇವರೆಲ್ಲರ ಸೇವೆ ಆದರ್ಶವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉದಯಕುಮಾರ್‌ ಶೆಟ್ಟಿ, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅತಿ ಹೆಚ್ಚು ವರ್ಷಕಾಲ ಸೇವೆ ಸಲ್ಲಿಸಿದ ತೃಪ್ತಿ ತಮಗಿದೆ. ನಿವೃತ್ತಿ ನಂತರ ಸೇವೆ ಸಲ್ಲಿಸಬೇಕೆಂಬ ಅಪೇಕ್ಷೆ ತಮ್ಮದಾಗಿದೆ. ಸಾಮಾಜಿಕ ಸೇವೆ ಮುಂದುವರಿಸುವುದಾಗಿ ತಿಳಿಸಿದರು.

ಸಿಮ್ಸ್‌ ನಿರ್ದೇಶಕ ಡಾ. ಲೇಪಾಕ್ಷಿ ಮಾತನಾಡಿದರು. ಡಾ. ಶಿವಯೋಗಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್‌. ಷಡಾಕ್ಷ ರಿ, ಶಾಂತರಾಜ್‌, ಪ್ರಭಾಕರ್‌, ವಾಸುದೇವ, ಚಂದ್ರಮತಿ ಹೆಗ್ಗಡೆ ಮತ್ತಿತರರು ಇದ್ದರು.

-=======================
ಆರೋಗ್ಯ ಇಲಾಖೆ ಸದಾ ಸಾರ್ವಜನಿಕರ ಸಂಪರ್ಕದಲ್ಲಿ ಇರುವಂತಹ ಇಲಾಖೆ. ಇಲ್ಲಿ ಸೇವೆ ಸಲ್ಲಿಸಿರುವವರು ತಾಳ್ಮೆ ಹೊಂದಿರಬೇಕು. ರೋಗಿಗಳಿಗೆ ಸೇವೆ ಮಾಡುವ ಮನೋಭಾವ ಅಳವಡಿಸಿಕೊಳ್ಳಬೇಕು.
-ಡಾ. ರಘುನಂದನ್‌, ಜಿಲ್ಲಾ ಸರ್ಜನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ