ಆ್ಯಪ್ನಗರ

ಮಂಗನ ಜ್ವರ ಏರುವ ಹೊತ್ತಿಗೆ ಟಿಎಚ್‌ಒ ವರ್ಗಾವಣೆ

ಬೇಸಿಗೆಯಲ್ಲಿ ಮಂಗನ ಕಾಯಿಲೆ ಜ್ವರ ಹೆಚ್ಚಾಗುವ ಎಲ್ಲ ಲಕ್ಷಣ ತಾಲೂಕಿನಲ್ಲಿ ಕಂಡು ಬಂದಿರುವ ಬೆನ್ನಲ್ಲೆ ಸರಕಾರ ಜನರಿಗೆ ಬರೆ ಎಳೆದಿದೆ. ಮಂಗನ ಕಾಯಿಲೆ ಜ್ವರ ನಿಯಂತ್ರಣ ಜವಾಬ್ದಾರಿ ನಿರ್ವಹಣೆಯಲ್ಲಿ ಹೆಚ್ಚಿನ ಅನುಭವ ಹೊಂದಿರುವ ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ಅವರನ್ನು ಸರಕಾರ ದಿಢೀರನೆ ವರ್ಗಾಹಿಸಿದೆ.

Vijaya Karnataka 15 Feb 2019, 5:00 am
ತೀರ್ಥಹಳ್ಳಿ :ಬೇಸಿಗೆಯಲ್ಲಿ ಮಂಗನ ಕಾಯಿಲೆ ಜ್ವರ ಹೆಚ್ಚಾಗುವ ಎಲ್ಲ ಲಕ್ಷಣ ತಾಲೂಕಿನಲ್ಲಿ ಕಂಡು ಬಂದಿರುವ ಬೆನ್ನಲ್ಲೆ ಸರಕಾರ ಜನರಿಗೆ ಬರೆ ಎಳೆದಿದೆ. ಮಂಗನ ಕಾಯಿಲೆ ಜ್ವರ ನಿಯಂತ್ರಣ ಜವಾಬ್ದಾರಿ ನಿರ್ವಹಣೆಯಲ್ಲಿ ಹೆಚ್ಚಿನ ಅನುಭವ ಹೊಂದಿರುವ ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ಅವರನ್ನು ಸರಕಾರ ದಿಢೀರನೆ ವರ್ಗಾಹಿಸಿದೆ.
Vijaya Karnataka Web SMR-14TTH3


ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರ ನಿಯಂತ್ರಣ ವಿಭಾಗಕ್ಕೆ ಡಾ.ಕಿರಣ್‌ ಅವರನ್ನು ವರ್ಗಾಹಿಸಿ ಸರಕಾರ 2019 ಫೆಬ್ರವರಿ 05ರಂದು ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತರು ಆದೇಶ ಪ್ರಕಟಿಸಿದ್ದು ತಕ್ಷಣ ವರ್ಗಾವಣೆ ಸ್ಥಳದಲ್ಲಿ ಸೇವೆ ಆರಂಭಿಸುವಂತೆ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರ ಉಲ್ಬಣಗೊಂಡ ಹೊತ್ತಲ್ಲಿ ನಿಯಂತ್ರಣ ಕ್ರಮಕ್ಕಾಗಿ ಡಾ.ಕಿರಣ್‌ ಅವರನ್ನು ನಿಯೋಜಿಸಲಾಗಿತ್ತು. ತೀರ್ಥಹಳ್ಳಿಯ ವಿವಿಧ ಭಾಗದಲ್ಲಿ ಮಂಗನ ಕಾಯಿಲೆ ಜ್ವರ ಉಲ್ಬಣವಾಗುವ ಆತಂಕವಿರುವ ಸಂದರ್ಭದಲ್ಲಿ ಡಾ.ಕಿರಣ್‌ ಅವರನ್ನು ತಾಲೂಕು ವೈದ್ಯಾಧಿಕಾರಿ ಹುದ್ದೆಯಿಂದ ವರ್ಗಾಹಿಸಿರುವ ಸರಕಾರದ ನಿರ್ಧಾರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರದಲ್ಲಿ ಪ್ರಭಾವಿಯಾಗಿರುವ ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರ ಕೈವಾಡ ವರ್ಗಾವಣೆ ಹಿಂದಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಮಂಗನ ಕಾಯಿಲೆ ಜ್ವರ ತಾಲೂಕಿನಲ್ಲಿ ಈ ವರ್ಷ ಈಗಾಗಲೇ ಏಳೆಂಟು ಗ್ರಾಮಗಳಲ್ಲಿ ಪತ್ತೆ ಆಗಿದ್ದು 50ಕ್ಕೂ ಹೆಚ್ಚು ರೋಗಗ್ರಸ್ತ ಮಂಗಗಳು ಮೃತಪಟ್ಟಿವೆ. ಕಳೆದ ಏಳೆಂಟು ವರ್ಷಗಳಿಂದ ಮಂಗನ ಕಾಯಿಲೆ ಜ್ವರ ನಿಯಂತ್ರಣ ಚಟುವಟಿಕೆಯಲ್ಲಿ ಚುರುಕಾಗಿ ಕಾರ‍್ಯನಿರ್ವಹಿಸುತ್ತಿದ್ದ ಡಾ.ಕಿರಣ್‌ ಅವರನ್ನು ವರ್ಗಾಯಿಸಲಾಗಿದೆ. ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರ 3 ದಶಕದಿಂದ ಕಾಡುತ್ತಿದೆ. ಈ ವರ್ಷವೂ ಅನೇಕ ಕ್ರಮಗಳಲ್ಲಿ ಕಂಡು ಬಂದಿದೆ. ಬೇಸಿಗೆ ಹೆಚ್ಚಾಗುತ್ತಿದ್ದು ಜ್ವರ ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ.

ಸಿಬ್ಬಂದಿ ಕೊರತೆ ಸಂಕಷ್ಟ :
ಮಂಗನ ಕಾಯಿಲೆ ಜ್ವರ ಕಳೆದ 30 ವರ್ಷದಿಂದ ತಾಲೂಕಿನ ವಿವಿಧ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಈ ವರೆಗೆ 50ಕ್ಕೂ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಹಿಂದೆ ಶೆಟ್ಟಿಗಳಕೊಪ್ಪ, ಲಕ್ಕುಂದ, ದೊಡ್ಡಿನಮನೆ, ದಿಂಡ, ಹುರುಳಿ, ಕೈಮರ, ಮಹಿಷಿ, ದಬ್ಬಣಗದ್ದೆ ಭಾಗದಲ್ಲಿ ಹೆಚ್ಚಾಗಿ ಕಂಡುಬಂದ ಈ ರೋಗ ಇತ್ತೀಚಿನ ವರ್ಷದಲ್ಲಿ ಕನ್ನಂಗಿ, ಮಂಡಗದ್ದೆ, ಸಿಂಧುವಾಡಿ, ಹಣಗೆರೆ, ಕೋಣಂದೂರು, ಹಾದಿಗಲ್ಲು, ದೇಮ್ಲಾಪುರ, ತ್ರಿಯಂಬಕಪುರ, ಮಳಲಿಮಕ್ಕಿ, ಜೋಗಿಕೊಪ್ಪ, ಅರಳಿಕೊಪ್ಪ, ಹಾರೋಗೊಳಿಗೆ, ಆಗುಂಬೆ ಸೇರಿದಂತೆ ಅನೇಕ ಗ್ರಾಮದಲ್ಲಿದೆ. 20 ಸಾವಿರಕ್ಕೂ ಹೆಚ್ಚು ಚುಚ್ಚುಮದ್ದು ಲಸಿಕೆ ನೀಡಲಾಗಿದೆ. ಈ ನಡುವೆ ಸಿಬ್ಬಂದಿ ಕೊರತೆ ಮಂಗನ ಕಾಯಿಲೆ ಜ್ವರ ನಿಯಂತ್ರಣ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಅನೇಕ ಗ್ರಾಮದಲ್ಲಿರುವ ಎಎನ್‌ಎಂ ವಸತಿ ಕಟ್ಟಡ ಮೂಲ ಸೌಕರ‍್ಯ ಇಲ್ಲದೆ ನರಳುತ್ತಿವೆ. ಎಎನ್‌ಎಂ ಸಿಬ್ಬಂದಿಗಳು ವಸತಿ ನಿಲಯದಲ್ಲಿದ್ದು ಚಿಕಿತ್ಸೆ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟಕರವಾಗಿದೆ. ಈ ಹೊತ್ತಿನಲ್ಲಿಯೇ ಮಂಗನ ಕಾಯಿಲೆ ಪೀಡಿತ ಪ್ರದೇಶದಿಂದ ಡಾ.ಕಿರಣ್‌ ವರ್ಗಾವಣೆಗೊಂಡಿರುವುದು ತಾಲೂಕಿನ ಜನತೆಗೆ ಆದ ದ್ರೋಹ ಎಂದೇ ಜನರು ಭಾವಿಸಿದ್ದಾರೆ.

-----
ಬರೋಬ್ಬರಿ ಹುದ್ದೆ ಖಾಲಿ..!
ಜೆಸಿ ಆಸ್ಪತ್ರೆ ಹೊರತಾಗಿ ತಾಲೂಕಿನ ಗ್ರಾಮಾಂತರ ಪ್ರದೇಶದ 16 ಆಸ್ಪತ್ರೆಗಳಲ್ಲಿ ವಿವಿಧ 42 ಹುದ್ದೆ ಖಾಲಿ ಇವೆ. 4 ವೈದ್ಯರು, 1 ಸ್ಪಾಪ್‌ ನರ್ಸ್‌, 2 ಹಿರಿಯ ಆರೋಗ್ಯ ಸಹಾಯಕ (ಪುರುಷ), 2(ಮಹಿಳಾ), 1 ಕ್ಷೇತ್ರ ಆರೋಗ್ಯ ಶಿಕ್ಷಕ, 3 ಫಾರ್ಮಾಸಿಸ್ಟ್‌, 17 ಕಿರಿಯ ಆರೋಗ್ಯ ಸಹಾಯಕ(ಪುರುಷ), 1(ಮಹಿಳಾ), 1ಪ್ರಯೋಗ ಶಾಲಾ ತಂತ್ರಜ್ಞ, 1 ಕ್ಷ ಕಿರಣ ತಂತ್ರಜ್ಞ, 2 ವಾಹನ ಚಾಲಕ, ಡಿ ದರ್ಜೆ 45 ಹುದ್ದೆ ಖಾಲಿ ಇವೆ. ರೋಗ ಪೀಡಿತ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ವೈದ್ಯ, ವೈದ್ಯೇತರ ಸಿಬ್ಬಂದಿ ಹುದ್ದೆ ಖಾಲಿ ಕಾರಣ ಆರೋಗ್ಯ ಇಲಾಖೆ ಸೇವೆ ಹಳ್ಳ ಸೇರಿದಂತಿದೆ.

-----
ಮಂಗನ ಕಾಯಿಲೆ ಜ್ವರ ಪೀಡಿತ ಪ್ರದೇಶವಾದ ತಾಲೂಕಿನಿಂದ ವೈದ್ಯಾಧಿಕಾರಿ ಡಾ.ಕಿರಣ್‌ ಅವರನ್ನು ವರ್ಗಾಯಿಸಿರುವ ಸರಕಾರದ ಆದೇಶ ಜನ ವಿರೋಧಿಯಾಗಿದೆ. ತೀರ್ಥಹಳ್ಳಿ ಭಾಗದಲ್ಲಿ ಮಂಗನ ಕಾಯಿಲೆ ಜ್ವರ ಹರಡುತ್ತಿದ್ದು ಡಾ.ಕಿರಣ್‌ ಅವರ ಸೇವೆ ತಾಲೂಕಿಗೆ ಅಗತ್ಯವಾಗಿತ್ತು. ರಾಜಕೀಯ ಪಿತೂರಿಯ ಕೈವಾಡದಿಂದ ಕಿರಣ್‌ ಅವರ ವರ್ಗಾವಣೆ ಆಗಿದೆ. ಸರಕಾರ ತೀರ್ಥಹಳ್ಳಿ ಜನರನ್ನು ನಿರ್ಲಕ್ಷ್ಯವಾಗಿ ಕಂಡಿರುವ ಸರಕಾರ ವರ್ಗಾವಣೆ ಆದೇಶ ಹಿಂದಕ್ಕೆ ಪಡೆಯದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.
- ಚಂದವಳ್ಳಿ ಸೋಮಶೇಖರ್‌, ಅಧ್ಯಕ್ಷರು, ತೀರ್ಥಹಳ್ಳಿ ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ