ಆ್ಯಪ್ನಗರ

ಮರ ‘ನೀಲಕಂಠ’ನ ಸ್ವರೂಪ

ಪುರಾಣದ ಕಥೆಯೊಂದರಲ್ಲಿ ಪ್ರಸ್ತಾಪಿಸಿರುವಂತೆ ಸಮುದ್ರ ಮಂಥನದ ವೇಳೆ ಹೊರಬಂದ ವಿಷ ಪ್ರಾಶನ ಮಾಡಿ ಜಗತ್ತನ್ನು ಉಳಿಸಿದ 'ನೀಲಕಂಠ'ನಂತೆಯೇ 'ಮರ'ಗಳು ನಮ್ಮ ಪಾಲಿಗೆ 'ಶಿವ' ಸ್ವರೂಪದ್ದಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ. ನಟರಾಜನ್‌ ವಿಶ್ಲೇಷಿಸಿದರು.

Vijaya Karnataka 6 Jun 2018, 5:00 am
ಶಿವಮೊಗ್ಗ : ಪುರಾಣದ ಕಥೆಯೊಂದರಲ್ಲಿ ಪ್ರಸ್ತಾಪಿಸಿರುವಂತೆ ಸಮುದ್ರ ಮಂಥನದ ವೇಳೆ ಹೊರಬಂದ ವಿಷ ಪ್ರಾಶನ ಮಾಡಿ ಜಗತ್ತನ್ನು ಉಳಿಸಿದ 'ನೀಲಕಂಠ'ನಂತೆಯೇ 'ಮರ'ಗಳು ನಮ್ಮ ಪಾಲಿಗೆ 'ಶಿವ' ಸ್ವರೂಪದ್ದಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ. ನಟರಾಜನ್‌ ವಿಶ್ಲೇಷಿಸಿದರು.
Vijaya Karnataka Web tree is the form of nilakanta
ಮರ ‘ನೀಲಕಂಠ’ನ ಸ್ವರೂಪ


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಸಾರಿಗೆ ಇಲಾಖೆ, ಪರಿಸರ ಅಧ್ಯಯನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ, ವಾಸವಿ ಮತ್ತು ಮಹಾವೀರ ವಿದ್ಯಾಲಯ ಆಶ್ರಯದಲ್ಲಿ ನಗರದ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 'ವಿಶ್ವ ಪರಿಸರ ದಿನಾಚರಣೆ' ಉದ್ಘಾಟಿಸಿ ಮಾತನಾಡಿದರು.

ಜೀವಿಗಳು ಹೊರಹಾಕುವ ಕಾರ್ಬನ್‌ ಡೈಆಕ್ಸೈಡ್‌, ವಾಹನಗಳು ಉಗುಳುವ ಹೊಗೆ ಸೇರಿದಂತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಎಲ್ಲ ವಿಷಾನಿಲಗಳನ್ನು ಮರಗಳು ಸೇವಿಸಿ ಸ್ವಚ್ಛ ಆಮ್ಲಜನಕ ನೀಡುತ್ತಿದೆ. ಹೀಗಾಗಿ, ಇದನ್ನು 'ಶಿವ' ಸ್ವರೂಪವೆಂದು ಭಾವಿಸುತ್ತೇನೆ. ಮರಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಪ್ಲಾಸ್ಟಿಕ್‌ ವಿರೋಧಿಗಳಾಗಲು ಸಲಹೆ:
ವ್ಯಕ್ತಿಯನ್ನಷ್ಟೇ ಅಲ್ಲ ಪರಿಸರವನ್ನೂ ಸಾಯಿಸುವ ಶಕ್ತಿ 'ಪ್ಲಾಸ್ಟಿಕ್‌'ಗಿದೆ. ಅದಕ್ಕಾಗಿಯೇ ಈ ವರ್ಷ 'ಪ್ಲಾಸ್ಟಿಕ್‌ ಮಾಲಿನ್ಯ ಹಿಮ್ಮೆಟ್ಟಿಸಿ' ಎಂಬ ಘೋಷಣೆಯೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಅವ್ಯಾಹತವಾಗಿ ಪ್ಲಾಸ್ಟಿಕ್‌ ಬಳಸುತ್ತಿದ್ದು, ಇದಕ್ಕೆ ಮಿತಿ ಹೇರುವ ಅವಶ್ಯಕತೆ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್‌ ನ್ಯಾಯಾಧೀಶ ಸೋಮಶೇಖರ್‌ ಸಿ.ಬಾದಾಮಿ ಎಚ್ಚರಿಸಿದರು.

ಪ್ಲಾಸ್ಟಿಕ್‌ ಸುಡುವುದರಿಂದ ಹೊರಡುವ ವಿಷಾನಿಲ ಶ್ವಾಸಕೋಶಕ್ಕೆ ಸೇರಿ 'ಕ್ಯಾನ್ಸರ್‌'ಗೆ ತುತ್ತಾಗುವ ಸಾಧ್ಯತೆಯೂ ಇರುವುದಾಗಿ ಇತ್ತೀಚೆಗೆ, ವಿಜ್ಞಾನಿಗಳು ಖಾತರಿ ಪಡಿಸಿದ್ದಾರೆ. ಹೀಗಾಗಿ, ಸಾಧ್ಯವಾದಷ್ಟು ಮಿತಿಯೊಳಗೆ ಪ್ಲಾಸ್ಟಿಕ್‌ ಬಳಸೋಣ ಎಂದರು.

ಬೆಳಗ್ಗೆ ಮುದ್ದಿನಕೊಪ್ಪ ಟ್ರಿ ಪಾರ್ಕ್‌ನಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದ 2018-19ನೇ ಸಾಲಿನ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಎ.ಎಸ್‌. ಚಂದ್ರಶೇಖರ್‌ ಅವರು 'ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ಬಳಕೆ ದುಷ್ಪರಿಣಾಮಗಳು' ಕುರಿತು ಉಪನ್ಯಾಸ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್‌.ಮರಿಯಪ್ಪ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್‌.ಶೇಜೇಶ್ವರ್‌, ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್‌.ಜನಾರ್ದನ್‌, ಡಯಟ್‌ ಉಪನ್ಯಾಸಕ ನಾಗೇಂದ್ರಪ್ಪ, ವಕೀಲರಾದ ತಿಲಕಾ ಮಧು, ಸಿ.ನಾಗೇಂದ್ರಪ್ಪ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಮತ್ತು ಶಿಕ್ಷ ಕರು ಉಪಸ್ಥಿತರಿದ್ದರು. ವೈ.ಎಸ್‌.ಹರಿಶಂಕರ್‌ ಸ್ವಾಗತಿಸಿದರು.

ಹಸಿರು ಸಂರಕ್ಷಣೆ ಸಂದೇಶ ಸಾರುವ ಸ್ತಬ್ಧ ಚಿತ್ರ ನಗರದ ನಾನಾ ಸ್ಥಳಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿತು. ಮಧ್ಯಾಹ್ನ ಸಾಗರ ರಸ್ತೆಯಲ್ಲಿ ಉಚಿತ ವಾಹನ ಹೊಗೆ ತಪಾಸಣೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ