ಆ್ಯಪ್ನಗರ

ಜುಲೈನಲ್ಲೇ ಕಳೆಗುಂದಿದ ತುಂಗೆ

ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಜುಲೈ ತಿಂಗಳಿನಲ್ಲೂ ಜೀವನದಿ ತುಂಗೆಯನ್ನು ಅಪಾಯದ ಅಂಚಿಗೆ ತಲುಪಿಸಿದೆ. ಮಳೆ ತಿಂಗಳು ಜುಲೈನಲ್ಲಿ ತುಂಬಿ ಹರಿಯಬೇಕಾದ ತುಂಗೆ ಇದೀಗ ಮಳೆ ಇಲ್ಲದೆ ಜೀವ ಕಳೆ ಕಳೆದುಕೊಂಡಿದೆ.

Vijaya Karnataka 21 Jul 2019, 5:00 am
ತೀರ್ಥಹಳ್ಳಿ : ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಜುಲೈ ತಿಂಗಳಿನಲ್ಲೂ ಜೀವನದಿ ತುಂಗೆಯನ್ನು ಅಪಾಯದ ಅಂಚಿಗೆ ತಲುಪಿಸಿದೆ. ಮಳೆ ತಿಂಗಳು ಜುಲೈನಲ್ಲಿ ತುಂಬಿ ಹರಿಯಬೇಕಾದ ತುಂಗೆ ಇದೀಗ ಮಳೆ ಇಲ್ಲದೆ ಜೀವ ಕಳೆ ಕಳೆದುಕೊಂಡಿದೆ.
Vijaya Karnataka Web SMR-19TTH2


ನೀರಿಲ್ಲದ ತುಂಗೆಯ ಈಗಿನ ದೃಶ್ಯ ಸಹಜವಾಗಿ ಜನರನ್ನು ಆತಂಕಕ್ಕೆ ತಳ್ಳಿದೆ. ಜೀವನದಿ ತುಂಗೆಯ ಸ್ಥಿತಿ ಭಯಾನಕವಾಗಿದ್ದು, ಜನರಲ್ಲಿ ಮುಂದೇನು ಎಂಬ ಕಳವಳಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಬರಗಾಲದ ಸನ್ನಿವೇಶ ಕಾಣಿಸಿದೆ.

ಕಳೆದ ವರ್ಷ ಸುರಿದ ಭಾರೀ ಮಳೆಗೆ ತುಂಬಿ ಹರಿದ ತುಂಗೆ ನವೆಂಬರ್‌ ಅಂತ್ಯದಲ್ಲಿ ಹರಿವಿನ ಶಕ್ತಿ ಕಳೆದುಕೊಂಡು ಆತಂಕ ಸೃಷ್ಟಿಸಿತ್ತು. ಈ ವರ್ಷದ ಮುಂಗಾರು ಮಳೆ ಭಾರೀ ಪ್ರಮಾಣದಲ್ಲಿ ಕೊರತೆಯಾಗಿದ್ದು, ಜುಲೈ ತಿಂಗಳಿನಲ್ಲಿ ತುಂಗೆ ನೀರಿಲ್ಲದೆ ಬಣಗುಟ್ಟುತ್ತಿದೆ. ಇನ್ನೊಂದೆಡೆ ಭತ್ತ ಸಸಿ ಮಡಿಗೆ ನೀರಿಲ್ಲದ ಸ್ಥಿತಿ ಅಗ್ರಹಾರ, ಮಂಡಗದ್ದೆ ಹೋಬಳಿ ಭಾಗದಲ್ಲಿ ಕಾಣಿಸಿದೆ.

ಮಳೆ ವೈಭವ ಕಾಣದ ಮಲೆನಾಡು
ಮಲೆನಾಡಿನ ಸೊಬಗನ್ನು ಹೆಚ್ಚಿಸುವ ಜುಲೈ ತಿಂಗಳ ವರ್ಷಾಧಾರೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಸ್ಮಯ ಕ್ಷಣ. ಆಗುಂಬೆಯಲ್ಲಿ 2016ಜುಲೈನಲ್ಲಿ 1,186.01, 2017ರ ಜುಲೈನಲ್ಲಿ 2,220.08, 2018 ಜುಲೈನಲ್ಲಿ 2,555.05 ಮಳೆಯಾಗಿದ್ದು, 2019 ಜುಲೈ ತಿಂಗಳ ಈ ವರೆಗೆ ಕೇವಲ 643 ಮಿ.ಮೀ. ಮಳೆ ಸುರಿದಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ 2016 ಜುಲೈನಲ್ಲಿ 591.00, 2017 ಜುಲೈನಲ್ಲಿ 669.09, 2018 ಜುಲೈನಲ್ಲಿ 1,163.02, 2019 ಜುಲೈ ತಿಂಗಳನಲ್ಲಿ 241.00 ಮಿ.ಮೀ. ಮಳೆಯಾಗಿದೆ. ಋುತುಮಾನದಲ್ಲಿ ಅಧಿಕ ಮಳೆ ಸುರಿಯುವ ಜುಲೈ ತಿಂಗಳು ಮುಕ್ಕಾಲು ಭಾಗ ಕಳೆದರೂ ಈ ವರೆಗೂ ಮಲೆನಾಡು ಮಳೆಯ ವೈಭವ ಕಂಡಿಲ್ಲ. ದಕ್ಷಿಣ ಚಿರಾಪುಂಜಿ ಪ್ರಸಿದ್ದಿಯ ಆಗುಂಬೆ ಭಾಗದಲ್ಲೂ ಮಳೆ ಪ್ರಮಾಣ ಸಂಪೂರ್ಣ ಕುಸಿತಗೊಂಡಿದೆ. ಮಳೆ ವೈಭವ ಇಲ್ಲದ ಆಗುಂಬೆ ತನ್ನ ಎಂದಿನ ಸೊಬಗನ್ನು ಕಳೆದುಕೊಂಡಿದೆ.

ಭತ್ತ ಸಸಿಮಡಿಗೆ ಮಳೆ ನೀರಿಲ್ಲ
ಧೋ ಎಂದು ಸುರಿಯುವ ಜುಲೈ ತಿಂಗಳ ಮಳೆ ಬಹುತೇಕ ಹಿನ್ನಡೆ ಕಂಡಿದೆ. ಮಂಡಗದ್ದೆ, ಅಗ್ರಹಾರ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಭತ್ತ ಸಸಿಮಡಿಗೆ ನೀರಿಲ್ಲದ ಸನ್ನಿವೇಶ ಉದ್ಭವಿಸಿದೆ. ಮಕ್ಕಿಗದ್ದೆ ಸಾಗುವಳಿ ಮಾಡುವ ರೈತರು ಭತ್ತದ ಸಸಿಮಡಿ ಗದ್ದೆಗೆ ಕೊಳವೆ ಬಾವಿ ನೀರನ್ನು ಆಶ್ರಯಿಸುವಂತಹ ಅನಿವಾರ‍್ಯತೆ ಎದುರಾಗಿದೆ. ತುಂಬು ಮಳೆಗಾಲದಲ್ಲಿ ಮಳೆ ಇಲ್ಲದ ದಿನಗಳನ್ನು ಕಾಣುತ್ತಿರುವ ಜನರು ಸಹಜವಾಗಿ ಪ್ರಕೃತಿ ವೈಪರೀತ್ಯದ ಕುರಿತು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಗಾಲದಲ್ಲಿಯೇ ಮಳೆ ಇಲ್ಲದ ಮೇಲೆ ಮುಂಬರುವ ದಿನಗಳ ಸ್ಥಿತಿ ಭೀಕರವಾಗಿರುತ್ತದೆ ಎಂಬುದನ್ನು ಮನಃಗಾಣುವಂತಾಗಿದೆ. ಕಳೆದ ವರ್ಷ ಜುಲೈ ತಿಂಗಳನಲ್ಲಿ ನಾಲ್ಕಾರು ಬಾರಿ ತುಂಗೆ, ಮಾಲತಿ, ಕುಶಾವತಿ ನದಿಯಲ್ಲಿ ಪ್ರವಾಹ ಕಾಣಿಸಿತ್ತು. ಭತ್ತದ ಸಸಿಮಡಿ,ಸಾಗುವಳಿ ಭೂ ಪ್ರದೇಶ ಪ್ರವಾಹದಿಂದ ಕೊಚ್ಚಿ ಹೋಗಿತ್ತು. ಈ ವರ್ಷ ಭತ್ತ ಸಸಿಮಡಿಗೆ ನೀರಿಲ್ಲದ ಕಾಲ ಎದುರಾಗಿದೆ.

ಮಳೆ ಬಾರದ ದಾಖಲೆ ದಿನ..!
ಮುಂಗಾರು ಮಳೆಯ ಜುಲೈ ತಿಂಗಳ ಇತಿಹಾಸದಲ್ಲಿ ತೀರ್ಥಹಳ್ಳಿಯಲ್ಲಿ ಮಳೆ ಸುರಿಯದ ದಿನಗಳಿಲ್ಲ. ಆದರೆ, ಜು. 17ರಂದು ಪಟ್ಟಣದಲ್ಲಿ 00 ಮಿ.ಮೀ. ಮಳೆ ದಾಖಲಾಗಿದೆ. ದಾಖಲೆಗಳ ಅನ್ವಯ ಜುಲೈ 17 ಮಳೆ ಇತಿಹಾಸ ಪುಟ ಸೇರಿದೆ. ಪಟ್ಟಣಕ್ಕೆ ಹತ್ತಿರದಲ್ಲಿರುವ ತುಂಗೆ ಈಗ ಯಾವುದೇ ಶಬ್ಧ ಇಲ್ಲದೆ ತಳಮಟ್ಟದಲ್ಲಿ ಹರಿಯುತ್ತಿದೆ.

-------------
ಇಷ್ಟು ವರ್ಷಕ್ಕೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಕುಸಿತ ಆಗಿದೆ. ಕೆಲ ಹೋಬಳಿಯ ಹಳ್ಳಿಗಳಲ್ಲಿ ಭತ್ತದ ಸಸಿಮಡಿಗೆ ನೀರಿಲ್ಲದಾಗಿದೆ. ರೈತರು ಭತ್ತ ಸಸಿಮಡಿಗೆ, ಗದ್ದೆ ನಾಟಿಗೆ ತೊಂದರೆ ಅನುಭವಿಸುವಂತಾಗಿದೆ.

- ಕೌಶಿಕ್‌, ಕೃಷಿ ಅಧಿಕಾರಿ, ತೀರ್ಥಹಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ