ಆ್ಯಪ್ನಗರ

‘ಮಿತ ಬಳಕೆಯಿಂದ ಜೀವಜಲ ಉಳಿವು’

ನೀರು ಸಕಲ ಜೀವರಾಶಿಗಳಿಗೆ ಬೇಕಾಗಿರುವ ಜೀವಜಲ. ನೀರನ್ನು ನಾವು ಬೇಕಾಬಿಟ್ಟಿ ಬಳಸಿ ನಾಶ ಮಾಡುತ್ತಿರುವ ಪರಿಣಾಮ ಇಂದು ವಿಶ್ವದಲ್ಲಿ ಶೇ.30ರಷ್ಟು ನೀರನ್ನು ಜನ ಖರೀದಿಸುತ್ತಿದ್ದಾರೆ ಎಂದು ಪರಿಸರವಾದಿ ಶೇಖರ್‌ ಗೌಳೇರ್‌ ಹೇಳಿದರು

Vijaya Karnataka Web 23 Mar 2018, 5:00 am
ಶಿವಮೊಗ್ಗ: ನೀರು ಸಕಲ ಜೀವರಾಶಿಗಳಿಗೆ ಬೇಕಾಗಿರುವ ಜೀವಜಲ. ನೀರನ್ನು ನಾವು ಬೇಕಾಬಿಟ್ಟಿ ಬಳಸಿ ನಾಶ ಮಾಡುತ್ತಿರುವ ಪರಿಣಾಮ ಇಂದು ವಿಶ್ವದಲ್ಲಿ ಶೇ.30ರಷ್ಟು ನೀರನ್ನು ಜನ ಖರೀದಿಸುತ್ತಿದ್ದಾರೆ ಎಂದು ಪರಿಸರವಾದಿ ಶೇಖರ್‌ ಗೌಳೇರ್‌ ಹೇಳಿದರು.
Vijaya Karnataka Web 22SMG4


ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಜಲ ದಿನ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನುಷ್ಯನ ಐಷಾರಾಮಿ ಜೀವನ, ಪರಿಸರವನ್ನು ದುರಂತದೆಡೆಗೆ ಕೊಂಡೊಯ್ಯುತ್ತಿದೆ. ಇದರ ಪರಿಣಾಮ ಜಲಮೂಲಗಳು ವಿಷಮವಾಗಿವೆ. ಮುಂದಿನ ತಲೆಮಾರಿನ ಯೋಚನೆ ಇಲ್ಲದ ಲೋಭಿತನ ರೋಗಿಷ್ಟ ಸಮಾಜವನ್ನು ಸೃಷ್ಟಿಸುತ್ತಿದೆ ಎಂದರು.

ಜಲಮೂಲಗಳು ನಿಂತಲ್ಲೇ ಪ್ರಾಣ ಕಾಪಾಡುತ್ತವೆ. ಆದರೆ ಮನುಷ್ಯ ಓಡಾಡಿ ಕೊಂಡು ಅವುಗಳ ಉಸಿರನ್ನು ಕೊಲ್ಲುತ್ತಿದ್ದಾನೆ . ಕೆರೆಕಟ್ಟೆಗಳ ಪುನರುಜ್ಜೀವನ ಜತೆಗೆ ಗಿಡಗಳ ನೆಡುವಿಕೆಯನ್ನು ಅಭಿಯಾನದ ರೀತಿ ಕೈಗೊಂಡಾಗ ನೀರನ್ನು ತಲೆಮಾರುಗಳವರೆಗೆ ದಾಟಿಸಬಹುದು ಎಂದು ಕಿವಿಮಾತು ಹೇಳಿದರು.

ಪಾರಂಪರಿಕ ವಿಧಾನಗಳ ಮೂಲಕ ನೀರನ್ನು ಗುಣಾತ್ಮಕವಾಗಿ ಸಂರಕ್ಷಿಸಬಹುದಾದ ಅವಶ್ಯಕತೆ ಇದ್ದು, ಈ ಕುರಿತು ಜಾಗೃತಿ ಮೂಡಿಸಬೇಕು. ನೀರಿನ ಮರುಬಳಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕವಾಗಿ ನೀರನ್ನು ಹೆಚ್ಚಾಗಿ ಬಳಸುವುದನ್ನು ಬಿಟ್ಟು, ನೀರು ಉಳಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಇಂದು ವಿನಾಕಾರಣ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಹಾಗಾಗಿ ಕೈಗಾರಿಕೆ, ಕೃಷಿ ಮತ್ತು ಮಾನವ ಬಳಕೆಗೆ ಎಷ್ಟು ಪ್ರಮಾಣದಲ್ಲಿ ನೀರು ಬಳಸಿಕೊಳ್ಳಬೇಕೆಂಬ ಕುರಿತು ಮರುಚಿಂತನೆ ನಡೆಸಬೇಕಿದೆ. ಪಶ್ಚಿಮಘಟ್ಟದಲ್ಲಿ ಸಾಕಷ್ಟು ನೀರಿದ್ದರೂ ಅವುಗಳನ್ನು ಉಳಿಸುವ ಯಾವ ಯೋಜನೆಯೂ ಜಾರಿಯಲ್ಲಿಲ್ಲ ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಕೆ.ಶಿಲ್ಪಾ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲರಾದ ಕೆ.ಆರ್‌. ಶಶಿರೇಖಾ ಅಧ್ಯಕ್ಷ ತೆ ವಹಿಸಿದ್ದರು. ಕುವೆಂಪು ವಿವಿ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಮಧುಸೂದನ್‌, ಪ್ರೊ. ನಾಗರಾಜ್‌ ಪರಿಸರ ಮತ್ತಿತರರು ಇದ್ದರು.


ನೀರು ಉಳಿಸುವ ಯಾವ ಯೋಜನೆಯೂ ಜಾರಿಯಲ್ಲಿಲ್ಲ. ರಾಜಕಾರಣಿಗಳು ಮಹದಾಯಿ, ಕಾವೇರಿ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸುತ್ತಿದ್ದಾರೆ ವಿನಾ ಜಲಸಂಪನ್ಮೂಲ ಉಳಿಸುವ ಬಗ್ಗೆ ಎಲ್ಲಿಯೂ ಕರೆ ನೀಡುತ್ತಿಲ್ಲ. ಅರಣ್ಯ, ಪರಿಸರ ಉಳಿಸುವ ಬಗ್ಗೆ ಚಕಾರ ಎತ್ತುತ್ತಿಲ್ಲ.

- ಶೇಖರ್‌ ಗೌಳೇರ್‌, ಪರಿಸರವಾದಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ