ಶಿವಮೊಗ್ಗದಲ್ಲಿ ಸಾಮೂಹಿಕ ರಕ್ತದಾನಕ್ಕೆ ಮುಂದಾದ ವಿಎಚ್‌ಪಿ, ಬಜರಂಗ ದಳ ಕಾರ್ಯಕರ್ತರು!

Vijaya Karnataka Web 30 Apr 2021, 11:28 pm
ಶಿವಮೊಗ್ಗ: ಕೊರೊನಾ ಹೆಮ್ಮಾರಿ ಹಿಮ್ಮೆಟ್ಟಿಸಲು ಸರ್ಕಾರದ ಮಾರ್ಗಸೂಚಿಗಳ ನಡುವೆ ವ್ಯಾಕ್ಸಿನ್‌ ಒಂದೇ ಪರಿಣಾಮಕಾರಿ ಆಯುಧ. ಸರ್ಕಾರ ಕೂಡ ಪದೇ ಪದೇ ವ್ಯಾಕ್ಸಿನ್‌ ಅಗತ್ಯತೆಯನ್ನ ಒತ್ತಿಹೇಳುತ್ತಿದೆ. ವ್ಯಾಕ್ಸಿನ್ ಪೂರೈಕೆ ವಿಳಂಬವಾಗಿದ್ದರೂ ಲಸಿಕಾ ಕೇಂದ್ರದ ಎದುರು ಪ್ರತಿದಿನ ಸಾಲುಗಟ್ಟಿ ನಿಲ್ಲುವ ಜನ ಕಡಿಮೆಯಾಗಿಲ್ಲ.

ಇಷ್ಟೊಂದು ಜನ ಒಂದೆರಡು ತಿಂಗಳಲ್ಲಿ ಲಸಿಕೆ ತೆಗೆದುಕೊಂಡರೆ ಮುಂದಿನ ಅರವತ್ತು ದಿನಗಳ ಕಾಲ ರಕ್ತ ನೀಡಲು ಸಾಧ್ಯವಿಲ್ಲ ಹಾಗಾಗಿ ಮುಂದೆ ರಕ್ತ ದಾನ ವ್ಯತ್ಯಯದಿಂದ ಸಂಗ್ರಹದ ಮೇಲೆ ಹೊಡೆತ ಬೀಳಬಹುದು. ಈ ಬೆಳವಣಿಗೆ ಅರಿತ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಕಾರ್ಯಕರ್ತರು ಸಾಮೂಹಿಕ ರಕ್ತದಾನಕ್ಕೆ ನಾಂದಿ ಹಾಡಿದ್ದಾರೆ.

ದೇಶದ ಉದ್ದಗಲ ರಕ್ತದಾನ ಆರಂಭವಾಗಿದ್ದು ಶಿವಮೊಗ್ಗದಲ್ಲಿ ಕೂಡ ರೋಟರಿ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತದಾನ ಶಿಬಿರ ಏರ್ಪಾಟು ಮಾಡಲಾಗಿತ್ತು. ಮೊದಲ ದಿನ ಕೋವಿಡ್‌ ನಿಯಮಾನುಸಾರ ಮೂವತ್ತು ಯುವಕರು ರಕ್ತದಾನ ಮಾಡಿದ್ದಾರೆ.

ರಕ್ತದಾನ ಶಿಬಿರದ ತುರ್ತು ಅಗತ್ಯತೆ ಬಗ್ಗೆ ಮಾತನಾಡಿದ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿಎಸ್ ಅರುಣ್‌ ಯುವಕರು ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಎಂದು ಕರೆ ನೀಡಿದರು.

ಕಳೆದೊಂದು ವರ್ಷದಿಂದ ಕೊರೊನಾ ಹೊಡೆತಕ್ಕೆ ಹೈರಾಣಾಗಿದ್ದೇವೆ. ನಮ್ಮ ಮನುಕುಲಕ್ಕೆ ಕೊರೊನಾ ಮಾರಕವಾಗಿ ಪರಿಣಮಿಸಿದೆ. ಸದ್ಯ ಭಾರತದಲ್ಲಿ ರಕ್ತದ ಅಗತ್ಯತೆ ಇದೆ. ವ್ಯಾಕ್ಸಿನ್‌ ತೆಗೆದುಕೊಂಡ ನಂತರ ರಕ್ತಕೊಡುವ ಹಾಗಿಲ್ಲ ಎಂಬ ಹೇಳಿಕೆ ಬಂದಿರುವ ಕಾರಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಎಚ್‌ಪಿ ಹಾಗೂ ಬಜರಂಗದಳದಿಂದ ರಕ್ತದಾನ ಅಭಿಯಾನ ಆರಂಭವಾಗಿದೆ.
Loading ...