ಆ್ಯಪ್ನಗರ

ಪಾಳು ಬೀಳುತ್ತಿದೆ ವಿಐಎಸ್‌ಎಲ್‌ ಟೌನ್‌ಶಿಪ್‌

ಭದ್ರಾ ನದಿ ದಂಡೆಯಲ್ಲಿ ಮೈಸೂರು ಮಹಾರಾಜರು ಮತ್ತು ಸರ್‌ ಎಂ.ವಿಶ್ವೇಶ್ವರಯ್ಯ ಅವರು ಉದಾತ್ತ ಧ್ಯೇಯದೊಂದಿಗೆ ಕಟ್ಟಿದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಹಾಗೂ ಸ್ಟೀಲ್‌ಟೌನ್‌ಶಿಪ್‌ ಎಂಬ ಆಶಾಗೋಪುರ ಕುಸಿಯಲಾರಂಭಿಸಿದೆ.

Vijaya Karnataka 27 Jul 2019, 5:00 am
ಸಂತೋಷ್‌ ಕಾಚಿನಕಟ್ಟೆ
Vijaya Karnataka Web SMG-2607-2-15-26SMG8


ಶಿವಮೊಗ್ಗ:
ಭದ್ರಾ ನದಿ ದಂಡೆಯಲ್ಲಿ ಮೈಸೂರು ಮಹಾರಾಜರು ಮತ್ತು ಸರ್‌ ಎಂ.ವಿಶ್ವೇಶ್ವರಯ್ಯ ಅವರು ಉದಾತ್ತ ಧ್ಯೇಯದೊಂದಿಗೆ ಕಟ್ಟಿದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಹಾಗೂ ಸ್ಟೀಲ್‌ಟೌನ್‌ಶಿಪ್‌ ಎಂಬ ಆಶಾಗೋಪುರ ಕುಸಿಯಲಾರಂಭಿಸಿದೆ.

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯೊಂದಿಗೆ ಮಲೆನಾಡಿಗೆ ಭಿನ್ನವಾದ ಬಯಲುಸೀಮೆಯ ಕೆಚ್ಚೆದೆಯ ಸಂಸ್ಕೃತಿ, ಕಲೆ, ಕ್ರೀಡೆಗಳೊಂದಿಗೆ ಬೆಳೆದ ಟೌನ್‌ಶಿಪ್‌ ಪಾಳು ಬೀಳುತ್ತಿದೆ. ಯಾವ ಕಾರ್ಖಾನೆಯಿಂದಾಗಿ ವೈಭವದ ದಿನಗಳನ್ನು ಕಂಡಿತ್ತೋ ಅದೇ ಕಾರ್ಖಾನೆಯ ಅವನತಿಯೊಂದಿಗೆ ಉಕ್ಕಿನ ನಗರದ ವಿಶೇಷವಾದ ಸಂಸ್ಕೃತಿಯು ಅವನತಿಯ ಹಾದಿ ಹಿಡಿದಿದೆ. ಕಾರ್ಖಾನೆಯು ಉತ್ತುಂಗದ ಸ್ಥಿತಿಯಲ್ಲಿದ್ದಾಗ ಇಲ್ಲಿನ ರಂಗ ತಂಡಗಳು ರಾಜ್ಯದೆಲ್ಲೆಡೆ ವೇದಿಕೆ ಮೇಲೆ ಕಲಾ ಲೋಕವನ್ನೇ ತೆರೆದಿಟ್ಟಿದ್ದವು. ಕಬಡ್ಡಿ ತಂಡಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಐಎಸ್‌ಎಲ್‌ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದವು.

ವಿಐಎಸ್‌ಎಲ್‌ ಕ್ರೀಡಾಂಗಣವು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ಅತಿದೊಡ್ಡ ಮತ್ತು ಸುಸಜ್ಜಿತ ಕ್ರಿಕೆಟ್‌ ಅಂಗಣವೆಂಬ ಕೀರ್ತಿ ಪಡೆದು ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಪ್ರೌಢಶಾಲೆ ಹಂತದಲ್ಲೇ ತಾಂತ್ರಿಕ ಶಿಕ್ಷಣ ನೀಡುವ ಜೆಟಿಎಸ್‌, ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಹೆಸರಾದ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌, ವರ್ಷಕ್ಕೊಮ್ಮೆ ನಡೆಸಲಾಗುವ ವಸ್ತು ಪ್ರದರ್ಶನ, ಪಟಾಕಿ, ಸಿಡಿಮದ್ದು ಪ್ರದರ್ಶನ, ಸಿಲ್ವರ್‌ಜುಬ್ಲಿ ಪ್ರೌಢಶಾಲೆಯ ವಾರ್ಷಿಕೋತ್ಸವಗಳು, ಕಾರ್ಖಾನೆ ಉದ್ಯಾನವನಗಳು ಭದ್ರಾವತಿಯ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದವು.

ಬಿಕೋ ಎನ್ನುತ್ತಿರುವ ರಸ್ತೆಗಳು:
28 ಪ್ಲಾಂಟ್‌ಗಳಲ್ಲಿ ಖಾಯಂ ಮತ್ತು ಗುತ್ತಿಗೆ 18ಸಾವಿರ ಕಾರ್ಮಿಕರಿಂದಾಗಿ ಲೋಯರ್‌ ಹುತ್ತಾ ಕಾಲೊನಿ, ಅಪ್ಪರ್‌ ಹುತ್ತಾ ಕಾಲೋನಿ, ಗೋಲ್ಡನ್‌ ಜುಬ್ಲಿ, ನ್ಯೂ ಕಾಲೊನಿ, ಜನ್ನಾಪುರ, ಉದ್ಯಾನವನ, ಕ್ರೀಡಾಂಗಣವು ಸದಾ ಜನಜಂಗುಳಿಯಿಂದ ಕೂಡಿರುತ್ತಿತ್ತು. ಹುತ್ತಾ ಕಾಲೊನಿಯ ಬಯಲು ರಂಗಮಂಟಪ ಮತ್ತು ಅದರ ಆವರಣವು ನಾಟಕ, ಕಲೆ ಮತ್ತು ಕಬಡ್ಡಿಯಿಂದಾಗಿ ಸದಾ ಚಟುವಟಿಕೆಯಿಂದ ಕೂಡಿರುತ್ತಿತ್ತು.

ಕಾರ್ಖಾನೆಯಲ್ಲಿ ಕಾರ್ಮಿಕರು ಕರಗಿದಂತೆ ವಸತಿಗೃಹಗಳು ಪಾಳು ಬೀಳಲಾರಂಭಿಸಿವೆ. ಬಡಾವಣೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಕೆಲ ರಸ್ತೆಗಳಲ್ಲಿ ರಾತ್ರಿ ವೇಳೆ ಇರಲಿ, ಹಗಲಿನಲ್ಲೂ ಅಡ್ಡಾಡಲು ಭಯವಾಗುವಷ್ಟು ಬಿಕೋ ಎನ್ನುವಂತಹ ವಾತಾವರಣ ಅಲ್ಲಿದೆ. ಕಾರ್ಖಾನೆಯ ವೆಲ್‌ಫೇರ್‌ ಶಾಲೆಗಳು ಪಾಳು ಬಿದ್ದಿವೆ, ರಂಗಮಂದಿರಗಳು, ಬಯಲು ರಂಗಮಂದಿರಗಳು, ಆಟದ ಮೈದಾನಗಳು, ಕಲಾವಿದರಿಲ್ಲದೆ, ಕ್ರೀಡಾಪಟುಗಳಿಲ್ಲದೆ ಹಾಳುಸುರಿಯುತ್ತಿವೆ.

ಅಸ್ತಿಪಂಜರವಾದ ಮನೆಗಳು:
ಅಕಸ್ಮಾತ್‌ ಕಾರ್ಖಾನೆಗೆ ಶಾಶ್ವತ ಬೀಗ ಬಿದ್ದಲ್ಲಿ ಟೌನ್‌ಶಿಪ್‌ ಸಂಪೂರ್ಣವಾಗಿ ಪಾಳು ಬೀಳುವುದರಲ್ಲಿ ಅಚ್ಚರಿ ಇಲ್ಲ. ಏಕೆಂದರೆ ಈಗಾಗಲೆ ನ್ಯೂಟೌನ್‌ ಎಸ್‌ಡಬ್ಲ್ಯೂಎಂಸಿ ಮತ್ತು ಹುತ್ತಾ ಕಾಲೊನಿ ಎಸ್‌ಡಬ್ಲ್ಯೂಎಂಸಿ ಒಂದು ಮತ್ತು ಎರಡು ಅಂತಸ್ತಿನ ವಸತಿಗೃಹಗಳು ಪಾಳು ಬಿದ್ದಿವೆ. ಮನೆಗಳ ಕಿಟಕಿ ಬಾಗಿಲುಗಳನ್ನು ಕಳ್ಳಕಾಕರು ಕದ್ದೊಯ್ದಿದ್ದು ಅಸ್ತಿಪಂಜರದಂತೆ ಕಾಣುತ್ತಿವೆ. ಕಾರ್ಖಾನೆ ಆಡಳಿತ ಮಂಡಳಿಯು ಅವುಗಳನ್ನು ಧ್ವಂಸಗೊಳಿಸುವಂತೆ ಸೂಚನೆ ನೀಡಿದೆ. ಕೆಲ ಬಡಾವಣೆಗಳಲ್ಲಿ ಈಗಾಗಲೆ ಬಹಳಷ್ಟು ಮನೆಗಳು ಪಾಳುಬಿದ್ದು ನೆಲಸಮಗೊಂಡಿವೆ.

ಕಾರ್ಖಾನೆಯೊಂದಿಗೆ ಟೌನ್‌ಶಿಪ್‌ ಅನ್ನೂ ಮಾರಾಟಕ್ಕಿಟ್ಟಿರುವ ಉಕ್ಕು ಪ್ರಾಧಿಕಾರವು ನಿವೃತ್ತ ನೌಕರರಿಗೆ ನೀಡಿರುವ 2280 ಮನೆಗಳ ಅಲ್ಪಾವಧಿ ಲೀಸ್‌(33 ತಿಂಗಳು) ಅವಧಿಯನ್ನು 11ತಿಂಗಳಿಗೆ ಇಳಿಸಲಾಗಿದೆ. ದೀರ್ಘಾವಧಿ(33 ವರ್ಷ) ಲೀಸ್‌ಗೆ ನೀಡಿರುವ 557 ಮನೆಗಳಲ್ಲಿನ ನಿವೃತ್ತ ನೌಕರರಿಗೆ ಮುಂದೇನಾಗುವುದೋ ಎಂಬ ಭಯ ಆವರಿಸಿದೆ.

ಹಾಳಾದ ಆಸ್ಪತ್ರೆ: ವಿಶಾಲವಾದ ಕಟ್ಟಡ, ಸುಸಜ್ಜಿತ ವೈದ್ಯಕೀಯ ಸೌಲಭ್ಯ, 25ಕ್ಕೂ ಹೆಚ್ಚು ವೈದ್ಯರು, ನೂರಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಕೂಡಿದ ಕಾರ್ಖಾನೆ ಆಸ್ಪತ್ರೆ ಸಹ ಪಾಳುಬೀಳಲಾರಂಭಿಸಿದೆ. ಒಂದಸ್ತಿನ ಕಟ್ಟಡದಲ್ಲಿ ಮೇಲ್ಭಾಗವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ನೆಲ ಅಂತಸ್ತಿನಲ್ಲಿ ಮುಕ್ಕಾಲು ಪಾಲು ಮುಚ್ಚಿ ಬೆರಳೆಣಿಕೆಯಷ್ಟು ಕೊಠಡಿಗಳಲ್ಲಿ ಉಳಿದ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಈಗ ಐದಾರು ವೈದ್ಯರು, ನಾಲ್ವರು ಸಿಸ್ಟರ್‌ಗಳು, ನಾಲ್ವರು ಆಯಾಗಳಿದ್ದಾರೆ. ಔಷಧ ಮಾತ್ರೆಗಳು ಒಂದಿದ್ದರೆ ಇನ್ನೊಂದು ಇರುವುದಿಲ್ಲ. ಹೀಗಾಗಿ ದಿನಕ್ಕೆ 500-600 ರೋಗಿಗಳು ಬರುತ್ತಿದ್ದ ಆಸ್ಪತ್ರೆಗೆ ಈಗ ಬೆರಳೆಣಿಕೆಯಷ್ಟೆ ರೋಗಿಗಳು ಬರುತ್ತಿದ್ದಾರೆ.

----------------------------
ಕಾರ್ಖಾನೆ ವಸತಿಗೃಹಗಳು, ಅಲ್ಲಿನ ಬೀದಿಗಳು, ಕ್ರೀಡಾಂಗಣ, ಆಸ್ಪತ್ರೆ, ಶಾಲೆ ಕಾಲೇಜುಗಳನ್ನು ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತದೆ. ವಿದೇಶಿ ಕಂಪನಿಗಳ ನೆರವು ಪಡೆದು ವಿಶ್ವೇಶ್ವರಯ್ಯ ಅವರು ಬಹಳಷ್ಟು ಕಷ್ಟಪಟ್ಟು ಕಾರ್ಖಾನೆ ಮತ್ತು ನಗರವನ್ನು ಕಟ್ಟಿದ್ದರು. ಆದರೆ, ಎಲ್ಲವೂ ಇದ್ದರೂ ಆಧುನಿಕ ಸರಕಾರಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.

*ಬಸಂತ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ, ಕಾರ್ಮಿಕರ ಸಂಘ, ವಿಐಎಸ್‌ಎಲ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ