ಆ್ಯಪ್ನಗರ

ಮೆಗ್ಗಾನ್‌ ಆಸ್ಪತ್ರೆಯಲ್ಲೂ ನೀರಿಗೆ ಬರ!

ಶಿವಮೊಗ್ಗದಂತ ಮಲೆನಾಡು ಪ್ರದೇಶವನ್ನೂ ಕಾಡುತ್ತಿರುವ ಬರಕ್ಕೆ ಮೆಗ್ಗಾನ್‌ ಆಸ್ಪತ್ರೆಯೂ ತುತ್ತಾಗಿದ್ದು, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಟ್ಯಾಂಕರ್‌ ನೀರಿನ ಮೊರೆ ಹೋಗಿದೆ.

Vijaya Karnataka 9 Jun 2019, 5:00 am
ಗಣೇಶ್‌ ತಮ್ಮಡಿಹಳ್ಳಿ
Vijaya Karnataka Web SMR-8GANESH2


ಶಿವಮೊಗ್ಗ :
ಶಿವಮೊಗ್ಗದಂತ ಮಲೆನಾಡು ಪ್ರದೇಶವನ್ನೂ ಕಾಡುತ್ತಿರುವ ಬರಕ್ಕೆ ಮೆಗ್ಗಾನ್‌ ಆಸ್ಪತ್ರೆಯೂ ತುತ್ತಾಗಿದ್ದು, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಟ್ಯಾಂಕರ್‌ ನೀರಿನ ಮೊರೆ ಹೋಗಿದೆ.

ಜೂನ್‌ ಬಂದರೂ ಬಾರದ ಮಳೆಯಿಂದ ತುಂಗಾ ನದಿ ದಡದಲ್ಲಿದ್ದರೂ ನಗರದಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಮಹಾನಗರ ಪಾಲಿಕೆ ಇನ್ನು ಮುಂದೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ನಿರ್ಧರಿಸಿದೆ. ಆಸ್ಪತ್ರೆಗಳಿಗೆ ಪ್ರತಿದಿನ ನೀರು ಪೂರೈಕೆ ಮಾಡುವುದಾಗಿ ಪಾಲಿಕೆ ಭರವಸೆ ನೀಡಿದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ದೊಡ್ಡ ಆಸ್ಪತ್ರೆ ಮೆಗ್ಗಾನ್‌ನಲ್ಲಿ ನೀರಿಲ್ಲದೆ ರೋಗಿಗಳು, ಅವರ ಸಂಬಂಧಿಗಳು ಮತ್ತು ಸಿಬ್ಬಂದಿ ಪರದಾಡುವಂತಾಗಿದೆ. ಆಸ್ಪತ್ರೆಯ ಶೌಚಾಲಯಗಳ ಸ್ವಚ್ಛತೆ ಮತ್ತು ಇತರೆ ಅಗತ್ಯಗಳಿಗೆ ನೀರಿಲ್ಲದೆ ಸಮಸ್ಯೆಯಾಗಿದೆ.

ಟ್ಯಾಂಕರ್‌ ನೀರೇ ಗತಿ!
ಒಂದು ಸಾವಿರ ಹಾಸಿಗೆ ಸಾಮರ್ಥ್ಯ‌ದ ಆಸ್ಪತ್ರೆಗೆ ನಿತ್ಯ ಒಂದುವರೆ ಲಕ್ಷ ಲೀಟರ್‌ಗೂ ಅಧಿಕ ಪ್ರಮಾಣದ ನೀರು ಬೇಕು. ಆದರೆ, ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿರುವುದರಿಂದ ಪಾಲಿಕೆಯು ಆಸ್ಪತ್ರೆಯ ಬೇಡಿಕೆಯಷ್ಟು ನೀರನ್ನು ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಜಲಾಶಯದಲ್ಲೆ ನೀರಿಲ್ಲ. ಹೀಗಾಗಿ, ಬೇಡಿಕೆಯಷ್ಟು ನೀರು ಪೂರೈಕೆ ಮಾಡುವುದು ಅಸಾಧ್ಯ ಎನ್ನುತ್ತಿದ್ದಾರೆ.

ಪಾಲಿಕೆ ನೀರು ಪೂರೈಕೆ ಮಾಡದಿದ್ದರೂ ಆಸ್ಪತ್ರೆ ಅಗತ್ಯಕ್ಕೆ ನೀರು ಒದಗಿಸಲೇಬೇಕು. ಹೀಗಾಗಿ, ಆಸ್ಪತ್ರೆ ಅಧಿಕಾರಿಗಳು ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಖಾಸಗಿ ಸಂಸ್ಥೆಗಳ ಮೂಲಕ ದಿನಕ್ಕೆ ಸುಮಾರು 15 ಟ್ಯಾಂಕರ್‌ ನೀರು ತರಿಸಿಕೊಳ್ಳಲಾಗುತ್ತಿದೆ. ಒಂದು ಟ್ಯಾಂಕರ್‌ ನೀರಿನ ದರ 850 ರೂ.ಗಳಿದ್ದು, ಅದಕ್ಕಾಗಿ ಆಡಳಿತ ಮಂಡಳಿ ನಿತ್ಯ ಸಾವಿರಾರು ರೂ.ಗಳನ್ನು ಖರ್ಚು ಮಾಡುತ್ತಿದೆ.

ಕೈಕೊಟ್ಟ ಕೊಳವೆ ಬಾವಿಗಳು:
ಆಸ್ಪತ್ರೆ ಆವರಣದಲ್ಲಿ ನೀರಿಗಾಗಿ 6 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಅಂತರ್ಜಲ ಕುಸಿತದಿಂದಾಗಿ ಅವು ಬತ್ತಿಹೋಗಿದೆ. ಇತ್ತೀಚೆಗೆ ತೆಗೆಸಿದ 2 ಕೊಳವೆ ಬಾವಿಯಲ್ಲಿ ಒಂದರಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ನೀರು ಸಿಕ್ಕಿದೆ. ಇದರಿಂದ ಹಳೆ ಕಟ್ಟಡಕ್ಕೆ ಮಾತ್ರ ನೀರು ಸಿಗುತ್ತಿದೆ. ಇನ್ನು ಹೊಸ ಕಟ್ಟಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗಿರುವುದರಿಂದ ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಬಾಟಲ್‌ ನೀರಿಗೆ ರೋಗಿಗಳ ಮೊರೆ:
ಆಸ್ಪತ್ರೆಯಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಒಳರೋಗಿಗಳಿದ್ದಾರೆ. ಇನ್ನು ಹೊರ ರೋಗಿಗಳ ಸಂಖ್ಯೆ ಪ್ರತಿದಿನ 2 ಸಾವಿರ ಮೀರುತ್ತದೆ. ಆಸ್ಪತ್ರೆಗೆ ಟ್ಯಾಂಕರ್‌ ನೀರಿನ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಗೊತ್ತಾದ ಬಳಿಕ ರೋಗಿಗಳು ಕುಡಿಯುವ ನೀರಿಗೆ ಬಾಟಲ್‌ಗಳ ಮೊರೆ ಹೋಗಿದ್ದಾರೆ. ಮನೆಯಿಂದ ತರುವುದು ಇಲ್ಲವೆ ಅಂಗಡಿಗಳಲ್ಲಿ ಖರೀದಿ ಮಾಡುತ್ತಿದ್ದಾರೆ.

-------
ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ 15 ದಿನಗಳಿಂದ ಆಸ್ಪತ್ರೆಯ ಬೇಡಿಕೆಯಷ್ಟು ನೀರು ಪೂರೈಕೆಯಾಗುತ್ತಿಲ್ಲ. ನೀರಿಗೆ ತೊಂದರೆಯಾಗುವುದರಿಂದ ಅನಿವಾರ್ಯವಾಗಿ ನಾವೇ ಹಣಕೊಟ್ಟು ಖಾಸಗಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುತ್ತಿದ್ದೇವೆ.

-ಡಾ. ರಘುನಂದನ್‌, ಜಿಲ್ಲಾ ಸರ್ಜನ್‌, ಮೆಗ್ಗಾನ್‌ ಆಸ್ಪತ್ರೆ.
---------


ಆಸ್ಪತ್ರೆಯಲ್ಲಿ ಕಳೆದ 3-4ದಿನಗಳಿಂದ ನೀರಿನ ಕೊರತೆ ಹೆಚ್ಚಾಗಿದೆ. ಈಗಾಗಲೇ ಟ್ಯಾಂಕರ್‌ಗಳ ಮೂಲಕ ಖಾಸಗಿಯವರಿಂದ ನೀರನ್ನು ತರಿಸುತ್ತಿದ್ದೇವೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ.

-ಡಾ.ಎಚ್‌. ಲೇಪಾಕ್ಷಿ, ಸಿಮ್ಸ್‌ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ