ಆ್ಯಪ್ನಗರ

ಕುಡುಕರ ದಾಂಧಲೆ ತಪ್ಪಿಸಿ: ಮಕ್ಕಳ ಹಕ್ಕೊತ್ತಾಯ

ಶಾಲೆಯ ಆವರಣದಲ್ಲಿ ನಿತ್ಯ ಮದ್ಯಪಾನದ ಬಾಟಲಿಗಳು ಬಿದ್ದಿರುತ್ತವೆ. ಶಾಲೆಗೆ ತೆರಳುತ್ತಿದ್ದಂತೆ ಅವುಗಳನ್ನು ಎತ್ತಿಹಾಕುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕೂಡಲೇ ಈ ಸಮಸ್ಯೆ ಬಗೆಹರಿಸುವ ಜತೆಗೆ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಮಾಡಬೇಕೆಂದು ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅಗ್ರಹಿಸಿದರು.

Vijaya Karnataka 25 Nov 2018, 5:00 am
ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಸರಣಿ ತೆರೆದಿಟ್ಟ ಮಕ್ಕಳು
Vijaya Karnataka Web avoid drunkers from school school childrens complaints
ಕುಡುಕರ ದಾಂಧಲೆ ತಪ್ಪಿಸಿ: ಮಕ್ಕಳ ಹಕ್ಕೊತ್ತಾಯ


ತುಮಕೂರು: ಶಾಲೆಯ ಆವರಣದಲ್ಲಿ ನಿತ್ಯ ಮದ್ಯಪಾನದ ಬಾಟಲಿಗಳು ಬಿದ್ದಿರುತ್ತವೆ. ಶಾಲೆಗೆ ತೆರಳುತ್ತಿದ್ದಂತೆ ಅವುಗಳನ್ನು ಎತ್ತಿಹಾಕುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕೂಡಲೇ ಈ ಸಮಸ್ಯೆ ಬಗೆಹರಿಸುವ ಜತೆಗೆ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಮಾಡಬೇಕೆಂದು ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅಗ್ರಹಿಸಿದರು.

ತುಮಕೂರು ತಾಲೂಕಿನ ಭೂವನಹಳ್ಳಿ ಗ್ರಾಮ ಪಂಚಾಯಿತಿಯು ಭೂವನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾಮಕ್ಕಳು ಸಮಸ್ಯೆಗಳ ಸರಣಿಯನ್ನೇ ತೆರೆದಿಟ್ಟರು.

ತಮ್ಮ ಶಾಲೆಯ ಮುಂಭಾಗ ತಿಪ್ಪೆಗಳಿದ್ದು, ಕೊಳೆತು ನಾರುತ್ತಿವೆ. ಇದರಿಂದಾಗಿ ಶಾಲೆಗೆ ಬರಲು ಕಷ್ಟವಾಗುತ್ತಿದೆ. ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಶಾಲಾ ಕಾಂಪೌಂಡ್‌ ಇಲ್ಲದೆ ಕಾಡುಹಂದಿ ನುಗ್ಗಿದ ಪರಿಣಾಮ ಆಗಬೇಕಿದ್ದ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಾಲಾ ಆವರಣದಲ್ಲಿ ಮಳೆಬಂದಾಗ ಯತೇಚ್ಚವಾಗಿ ನೀರು ನಿಲ್ಲುವುದರಿಂದ ನಮಗೆ ಶಾಲೆ ಒಳಗೆ ಹೋಗಲು ತೊಂದರೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಮಕ್ಕಳು ಆಗ್ರಹಿಸಿದರು.

ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಅಡಿಪಾಯ ಹಾಕುವವರು ನಾವು. ಆದರೆ ಗ್ರಾಮ ಪಂಚಾಯಿತಿಯಲ್ಲಿ ಅಂಗನವಾಡಿಗೆ ನೀರಿನ ಸೌಲಭ್ಯ, ಆಟದ ಸಾಮಾಗ್ರಿ, ಪೀಠೋಪಕರಣದ ಯಾವುದೇ ಸೌಲಭ್ಯಗಳಿಲ್ಲವೆಂದು ಅಂಗನವಾಡಿ ಕಾರ್ಯಕರ್ತೆ ತಮ್ಮ ಅಳಲನ್ನು ತೋಡಿಕೊಂಡರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕ್ರೀಡಾ ಅನುದಾನದ ಬಗ್ಗೆ ತಿಳಿಸಿ, ಮಕ್ಕಳು ಕೇಳಿದ ಸಮಸ್ಯೆಗಳನ್ನು ಮುಂದಿನ ಕ್ರೀಯಾಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸಿಎಂಸಿಎ ಎಜುಕೇಟರ್‌ ಆದ ಸಿ.ಎಂ.ಎಸ್‌ ಗೌಡರವರು ಮಕ್ಕಳ ಹಕ್ಕುಗಳು, ಮಕ್ಕಳ ಗ್ರಾಮ ಸಭೆಯ ಇತಿಹಾಸ, ಮಕ್ಕಳ ಗ್ರಾಮ ಸಭೆಯಲ್ಲಿ ಚರ್ಚಿಸುವ ವಿಚಾರಗಳ ಬಗ್ಗೆ ಸಭೆ ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಸಮಸ್ಯೆಗಳೇನೋ ಕೇಳಿಬಂದವು. ಆದರೆ ಪರಿಹರಿಸುವ ಜನಪ್ರತಿನಿಧಿಗಳ ಕೊರತೆಯೇ ಎದ್ದುಕಾಣುತ್ತಿತ್ತು. ಇಡೀ ಭೂವನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸದಸ್ಯರ ಪೈಕಿ ಕೇವಲ ಒಬ್ಬರು ಹಾಜರಿದ್ದು ಅಧ್ಯಕ್ಷರು ಕೂಡ ಗೈರು ಹಾಜರಾಗಿದ್ದರು. ಭೂವನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಂಜಾನಾಯ್ಕ, ಸಿ.ಎಂ.ಸಿ.ಎ ಎಜುಕೇಟರ್‌ ಅಶ್ವಿನಿ ಎಂ., ಸಿ.ಆರ್‌.ಪಿ ನರಸಿಂಹಮೂರ್ತಿ, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ