ಆ್ಯಪ್ನಗರ

ಗದ್ದೆಯಲ್ಲಿ ಕೃಷಿಗಿಳಿದ ವ್ಯವಸ್ಥಾಪಕ: ನಗರದ ಜಂಜಾಟಗಳಿಗೆ ಗುಡ್‌ಬೈ ಹೇಳಿದ ತುಮಕೂರಿನ ಯುವಕ

ಲಾಕ್‌ಡೌನ್‌ ನಂತರ ನಗರದಲ್ಲಿ ಹಲವು ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ.

Vijaya Karnataka Web 5 Aug 2020, 12:26 pm
ಪ್ರಸನ್ನ ದೊಡ್ಡಗುಣಿ ನಿಟ್ಟೂರು
Vijaya Karnataka Web ಸಾಂದರ್ಭಿಕ ಚಿತ್ರ

ತುಮಕೂರು: ಗುಬ್ಬಿ ತಾಲೂಕಿನ ಅಂಕಾಪುರದ ಬಿಬಿಎಂ ಪದವೀಧರ ಬಸವರಾಜು ದಾಬಸ್‌ಪೇಟೆ ಕೈಗಾರಿಕೆಯೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ನಂತರ ಕೆಲಸ ಕಳೆದುಕೊಂಡು ಇರುವ ಅಲ್ಪ ಭೂಮಿಯಲ್ಲೆ ಯಾಕೆ ಕೃಷಿ ಮಾಡಬಾರದು ಎಂದು ನಿರ್ಧರಿಸಿ ತರಕಾರಿ ಬೆಳೆಯಲು ಶುರು ಮಾಡಿ, ಆದಾಯದ ನಿರೀಕ್ಷೆಯಲ್ಲಿದ್ದಾರೆ. ಸೊಪ್ಪು ಬೆಂಡೇಕಾಯಿ ಟೊಮೇಟೊ ಬೆಳೆಯುತ್ತಿದ್ದು, ಆದಾಯ ಕಾಣುತ್ತಿದ್ದಾರೆ. ಅವರೇ ಸ್ವತಃ ಹಳ್ಳಿಗಳಿಗೆ ಹೋಗಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಹೆಚ್ಚಿನ ಲಾಭ ಬರುತ್ತಿದೆ ಎನ್ನುತ್ತಾರೆ ಬಸವರಾಜು.

ನೌಕರಿಯಲ್ಲಿದ್ದಾಗ 15 ಸಾವಿರ ರೂ. ಸಿಗುತ್ತಿತ್ತು. ಈಗ 3 ತಿಂಗಳ ಅವಧಿಯಲ್ಲಿ ಸುಮಾರು 80 ಸಾವಿರ ರೂ. ದುಡಿದಿದ್ದೇನೆ. ಮುಂದೆ ನಗರದತ್ತ ಹೋಗುವುದಿಲ್ಲ. ಇಲ್ಲಿಯೇ ಕುಟುಂಬದ ಜತೆ ಇದ್ದು ಕೃಷಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ.

ನಗರದಲ್ಲಿ ಒತ್ತಡದ ಬದುಕು ಸಾಕಾಗಿದೆ. ಮನೆಯ ಮಕ್ಕಳ ಜತೆ ಮಾತನಾಡಲು ಆಗದ ಸ್ಥಿತಿಯಲ್ಲಿ ಬದುಕಬೇಕಾ ಅನ್ನಿಸಿಬಿಟ್ಟಿದೆ. 3 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಮನೆಯ ಕಡೆ ನೋಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಈಗ ಮನೆಯಲ್ಲೇ ಇರುವುದರಿಂದ ಕುಟುಂಬದ ಜತೆ ಕಾಲ ಕಳೆಯಲು ಸಾಧ್ಯವಾಗುತ್ತಿದೆ. ಸಾವಯುವ ಕೃಷಿಯತ್ತ ಮುಖ ಮಾಡಿದ್ದೇನೆ. ಎಲ್ಲಿಯೂ ನಗರದಲ್ಲಿ ಹೋಗಿ ಮಾರುಕಟ್ಟೆಗೆ ನೀಡಿಲ್ಲ. ನಾನೇ ಖುದ್ದು ಮಾರಾಟ ಮಾಡುತ್ತಿದ್ದು ಲಾಭ ಬರುತ್ತಿದೆ. ಬೆಳಗ್ಗೆ 6ರಿಂದ 10ರ ತನಕ ಸುತ್ತಮುತ್ತಲ ಗ್ರಾಮಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದೇನೆ. ಇದರಿಂದ ದುಡಿಮೆ ಮತ್ತು ಲಾಭ ನೋಡಲು ಸಾಧ್ಯವಾಗುತ್ತಿದೆ.

ಕುಟುಂಬದವರೇ ಸೇರಿ ಕೆಲಸ ಮಾಡುತ್ತಿದ್ದೇವೆ ಅಡಕೆ ತೋಟದ ಮಧ್ಯೆ 2 ಸಾವಿರ ಟೊಮೇಟೊ ಗಿಡಗಳನ್ನು ಹಾಕಿದ್ದೆ. 2,200 ಕೆಜಿ ಬಂದಿತ್ತು. 30 ಸಾವಿರ ರೂ. ಖರ್ಚು ಬಂದಿತ್ತು. ಲಾಭ 50 ಸಾವಿರ ರೂ. ಬಂದಿದೆ 3 ತಿಂಗಳಿಗೆ. ಬೆಂಡೆ 40 ದಿನಕ್ಕೆ ಬಂದಿದೆ. 2 ಸಾವಿರ ರೂ. ಖರ್ಚು ಬಂದಿದೆ. ಸದ್ಯಕ್ಕೆ 10 ಸಾವಿರ ರೂ. ಸಿಕ್ಕಿದ್ದು, ಇನ್ನೂ ಮುಂದಿನ ಒಂದು ತಿಂಗಳಲ್ಲಿ 8-10 ಸಾವಿರ ರೂ. ಬರಬಹುದು. 2 ದಿನಕ್ಕೆ ಒಂದು ದಿನ ಕಟಾವು ಮಾಡುತ್ತೇವೆ. ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದೇವೆ. ಹಸು ಗಂಜಲು, ಸಗಣಿ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟನ್ನು ಗಂಜಲಿನಲ್ಲಿ ಮಿಶ್ರಣ ಮಾಡಿ, ಅದನ್ನೇ ಗೊಬ್ಬರದ ರೀತಿ ನೀಡಲಾಗುತ್ತಿದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಬಸವರಾಜು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ