ಆ್ಯಪ್ನಗರ

ಲೆಕ್ಕಾಚಾರದ ವೈದ್ಯ ವೃತ್ತಿ ಪ್ರಾಮಾಣಿಕವಲ್ಲ

ಹಣದ ಲೆಕ್ಕಾಚಾರವನ್ನಿಟ್ಟುಕೊಂಡು ವೈದ್ಯ ವೃತ್ತಿ ಮಾಡುವವರು ಪ್ರಾಮಾಣಿಕ ವೈದ್ಯರಾಗಲು ಸಾಧ್ಯವಿಲ್ಲ ಎಂದು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷ ಡಾ.ಎಚ್‌.ಎನ್‌.ರವೀಂದ್ರ ಅಭಿಪ್ರಾಯಪಟ್ಟರು.

Vijaya Karnataka 17 Jul 2018, 5:00 am
ತುಮಕೂರು: ಹಣದ ಲೆಕ್ಕಾಚಾರವನ್ನಿಟ್ಟುಕೊಂಡು ವೈದ್ಯ ವೃತ್ತಿ ಮಾಡುವವರು ಪ್ರಾಮಾಣಿಕ ವೈದ್ಯರಾಗಲು ಸಾಧ್ಯವಿಲ್ಲ ಎಂದು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷ ಡಾ.ಎಚ್‌.ಎನ್‌.ರವೀಂದ್ರ ಅಭಿಪ್ರಾಯಪಟ್ಟರು.
Vijaya Karnataka Web doctors day celebration
ಲೆಕ್ಕಾಚಾರದ ವೈದ್ಯ ವೃತ್ತಿ ಪ್ರಾಮಾಣಿಕವಲ್ಲ


ನಗರದ ಎಸ್‌.ಐ.ಟಿ. ಕಾಲೇಜು ಬಿರ್ಲಾ ಸಭಾಂಗಣದಲ್ಲಿ ಐಎಂಎ ತುಮಕೂರು ಘಟಕದ ವತಿಯಿಂದ ಸೋಮವಾರ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವೈದ್ಯರೂ ಸೇವಾ ಮನೋಭಾವದಿಂದ ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗಿದ್ದೇ ಆದಲ್ಲಿ ಹಣ ಹಾಗೂ ಯಶಸ್ಸು ತಾನಾಗಿಯೆ ಒಲಿಯುತ್ತದೆ ಎಂದು ಹೇಳಿದರು.

ವೈದ್ಯರು ತಮ್ಮ ಕೆಲಸದಲ್ಲಿ ಆತ್ಮತೃಪ್ತಿಗೆ ಹೆಚ್ಚು ಒತ್ತು ನೀಡಬೇಕೇ ಹೊರತು ಹಣಕ್ಕಲ್ಲ ಎಂದ ಅವರು, ವೈದ್ಯರಾದವರಿಗೆ ಸ್ವಾಅನುಕಂಪ ಒಂದು ಅಪಾಯಕಾರಿ. ವೈದ್ಯರ ಮೇಲಿನ ನಿರ್ಲಕ್ಷ್ಯದ ಬಗ್ಗೆ ಅನೇಕರು ತಮ್ಮ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹಾಗಾಗಿ ನಾವು ಅವರಿವರನ್ನು ದೂರದೆ ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಬೇಕಿದೆ ಎಂದರು.

ಕೆಲ ವೈದ್ಯರು ತಾವು ರಾಜಕೀಯವನ್ನು ವಿರೋಧಿಸುವುದಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ವೈದ್ಯರೂ ಸಹ ರಾಜಕೀಯವನ್ನು ಪ್ರೀತಿಸಬೇಕು, ಗೌರವಿಸಬೇಕು. ರಾಜಕೀಯದ ಒಂದು ಭಾಗವಾಗಬೇಕು. ನಾವು ರಾಜಕೀಯವನ್ನು ಪ್ರೀತಿಸಿದರೆ ಮಾತ್ರ ರಾಜಕೀಯ ವ್ಯಕ್ತಿಗಳೂ ನಮ್ಮನ್ನು ಪ್ರೀತಿಸುತ್ತಾರೆ. ನಮ್ಮಲ್ಲಿ ಕೆಲವು ರಾಜಕೀಯ ವ್ಯಕ್ತಿಗಳ ಧೋರಣೆ ಸರಿಯಿಲ್ಲ ಎಂಬ ಮಾತ್ರಕ್ಕೆ ನಾವು ರಾಜಕೀಯವೇ ಸರಿಯಿಲ್ಲ ಎಂಬ ಭಾವನೆಗೆ ಬರಬಾರದು ಎಂದು ಹೇಳಿದರು.

ಕುಣಿಗಲ್‌ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಮಾತನಾಡಿ, ಕುಟುಂಬದೊಂದಿಗೆ ಅತಿ ಕಡಿಮೆ ಸಮಯ ಕಾಲ ಕಳೆಯುವ ಏಕೈಕ ವೃತ್ತಿ ಎಂದರೆ, ಅದು ವೈದ್ಯ ವೃತ್ತಿ. ವೈದ್ಯರಾದವನಿಗೆ ಆಸ್ಪತ್ರೆ, ರೋಗಿಗಳೇ ಪ್ರಪಂಚವಾಗಿರುತ್ತದೆ. ಆಧುನಿಕ ಜಗತ್ತಿನಲ್ಲಿ ವೈದ್ಯರ ಮೇಲಿನ ನಂಬಿಕೆ, ಸವಾಲುಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ವೈದ್ಯರೂ ಸಂಘಟಿತರಾಗಿ ತಮ್ಮ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಐಎಂಎ ಕೇಂದ್ರ ನಿರ್ದೇಶಕ ಡಾ. ಜಿ.ಎನ್‌. ಪ್ರಭಾಕರ ಮಾತನಾಡಿ, ಪ್ರತೀ ವರ್ಷ ಜುಲೈ ತಿಂಗಳಿನಲ್ಲಿ ಡಾ.ಬಿ.ಸಿ.ರಾಯ್‌ ಅವರನ್ನು ನೆನೆಯುತ್ತಾ ಅವರ ಹೆಸರಿನಲ್ಲಿ ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರ ಸೇವೆ ನನೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಐಎಂಎ ತುಮಕೂರು ಶಾಖೆಯ ಅಧ್ಯಕ್ಷ ಡಾ.ಸುರೇಶ್‌ಬಾಬು ಮಾತನಾಡಿದರು. ಮಧುಗಿರಿಯ ವೈದ್ಯರಾದ ಡಾ. ಕಾಮರಾಜ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಐಎಂಎ ತುಮಕೂರು ಶಾಖೆಯ ಕಾರ್ಯದರ್ಶಿ ಡಾ.ಕೆ.ಆರ್‌. ಶ್ರೀನಾಥ್‌ ಸೇರಿದಂತೆ ಇತರೆ ಪದಾಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ