ಆ್ಯಪ್ನಗರ

ಲಿಂಕ್‌ ಕೆನಾಲ್‌ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆಯುವ ಪ್ರಯತ್ನ, ಪ್ರತಿಭಟನಾಕಾರರ ಬಂಧನ

ಜಿಲ್ಲೆಯ ಹೇಮಾವತಿ ನೀರು ಕಸಿಯುವ ಹುನ್ನಾರದ ಲಿಂಕ್‌ ಕೆನಾಲ್‌ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಮಾಜಿ ಸಂಸದ ಜಿ.ಎಸ್‌. ಬಸವರಾಜು ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾದಿಂದ ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

Vijaya Karnataka 21 Feb 2019, 5:00 am
ತುಮಕೂರು: ಜಿಲ್ಲೆಯ ಹೇಮಾವತಿ ನೀರು ಕಸಿಯುವ ಹುನ್ನಾರದ ಲಿಂಕ್‌ ಕೆನಾಲ್‌ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಮಾಜಿ ಸಂಸದ ಜಿ.ಎಸ್‌. ಬಸವರಾಜು ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾದಿಂದ ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
Vijaya Karnataka Web drop link canal scheme protest in national highway protesters arrested
ಲಿಂಕ್‌ ಕೆನಾಲ್‌ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆಯುವ ಪ್ರಯತ್ನ, ಪ್ರತಿಭಟನಾಕಾರರ ಬಂಧನ


ನಗರ ಹೊರವಲಯದ ಬಟವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಧರಣಿ ನಡೆಸಿದ ಬಳಿಕ ಹೆದ್ದಾರಿ ತಡೆಯಲು ಮುಂದಾದ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಹೆದ್ದಾರಿ ತಡೆಗೆ ಬಿಡದೆ ಬಂಧಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಜಿ.ಎಸ್‌.ಬಸವರಾಜು, ಲಿಂಕ್‌ ಕೆನಾಲ್‌ನ ಪೈಪ್‌ಲೈನ್‌ ಮೂಲಕ ಗುಬ್ಬಿ ತಾಲೂಕು ಕಡಬ ಬಳಿಯಿಂದ ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲೆಗೆ ಹರಿಯುವ ಹೇಮಾವತಿ ನೀರನ್ನು ತೆಗೆದುಕೊಂಡುವ ಹೋಗುವ ಈ ಯೋಜನೆ ಅನುಮೋದನೆಗಾಗಿ ಸಂಪುಟ ಸಭೆ ಮುಂದಿಡಲಿದ್ದು, ಯೋಜನೆಗೆ ಅನುಮೋದನೆ ನೀಡದೆ ಕೈಬಿಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ನೀರಾವರಿಗೆ ಸಮ್ಮಿಶ್ರ ಸರಕಾರ ಮರಣ ಶಾಸನ ಬರೆಯಲು ಹೊರಟಿದೆ. ಹಾಸನದ ಗೊರೂರು ಡ್ಯಾಂನಿಂದ ತುಮಕೂರಿಗೆ ಬರಬೇಕಾದ ಹೇಮಾವತಿಯ 25 ಟಿಎಂಸಿ ನೀರನ್ನು ನ್ಯಾಯೋಚಿತವಾಗಿ ಹರಿಸದೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್‌, ಶಾಸಕ ಡಾ.ರಂಗನಾಥ್‌ ಜಿಲ್ಲೆಗೆ ಹರಿಯುವ ನೀರನ್ನೂ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ನ ಮೂಲಕ ಕುಣಿಗಲ್‌ ಮಾರ್ಗವಾಗಿ ರಾಮನಗರ ಜಿಲ್ಲೆ ಕನಕಪುರಕ್ಕೆ ಹೆಚ್ಚುವರಿಯಾಗಿ ತೆಗೆದುಕೊಂಡು ಹೋಗುವ ಷಡ್ಯಂತರವನ್ನು ರೂಪಿಸಿದ್ದು, ಜಿಲ್ಲೆಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇದರ ಬಗ್ಗೆ ಮಾತನಾಡಿದಾಗ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಸುಳ್ಳು ಆಶ್ವಾಸನೆ ನೀಡಿ, ಈಗ ಯಾವುದೇ ಸೂಚನೆ ಇಲ್ಲದೆ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು. ನಮ್ಮ ಜಿಲ್ಲೆಯ ಜನರಿಗೆ ನೀರಿಗೆ ಹಾಹಾಕಾರವಾಗಿದ್ದು, ಕುಡಿಯಲು, ವ್ಯವಸಾಯಕ್ಕೆ ನೀರಿಲ್ಲದೆ ಸಂಕಷ್ಟದಲ್ಲಿದ್ದು ಕೂಡಲೇ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್‌.ಶಿವಪ್ರಸಾದ್‌ ಮಾತನಾಡಿ, ಸಮ್ಮಿಶ್ರ ಸರಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ತುಮಕೂರು ಜಿಲ್ಲೆ ಭೀಕರ ಬರದಿಂದ ತತ್ತರಿಸುತ್ತಿದ್ದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಿರುವಾಗ ನಮ್ಮ ಪಾಲಿನ ನೀರನ್ನು ವ್ಯವಸ್ಥಿತ ಹುನ್ನಾರದ ಮುಖೇನ ತೆಗೆದುಕೊಂಡು ಹೋಗುವ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲವೆ? ಸಚಿವರಾದ ಎಸ್‌.ಆರ್‌.ಶ್ರೀನಿವಾಸ್‌, ವೆಂಕಟರಮಣಪ್ಪ ನೀವೆಲ್ಲಾ ಏನು ಮಾಡುತ್ತಿದ್ದೀರಾ? ಜಿಲ್ಲೆಯ ಜನಪ್ರತಿನಿಧಿಗಳಿಗೆ ನಿಮಗೆಲ್ಲ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಟಿ.ಎಚ್‌.ಹನುಮಂತರಾಜು, ಜಿ.ಪಂ.ಸದಸ್ಯ ಹುಚ್ಚಯ್ಯ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್‌, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ರುದ್ರೇಶ್‌, ಸುರೇಶ್‌, ಶರತ್‌, ರಾಕೇಶ್‌, ರಮೇಶ್‌ ಮಗದೂರು, ವಿನಯ್‌ ಹಿರೇಹಳ್ಳಿ, ರಕ್ಷಿತ್‌, ತರಕಾರಿ ಮಹೇಶ್‌, ಬಂಬೂ ಮೋಹನ್‌, ಪುರುಷೋತ್ತಮ, ಪಾಲಿಕೆ ಸದಸ್ಯರಾದ ರಮೇಶ್‌, ಮಂಜುಳಾ, ದೀಪ, ಬಿ.ಜಿ.ಕೃಷ್ಣಪ್ಪ, ನವೀನ, ಅರುಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ