ಆ್ಯಪ್ನಗರ

ಮಾಜಿ ಶಾಸಕರ ಪುತ್ರರಿಗೆ ಜೈಲು

ಬಿಜೆಪಿ ತಾಲೂಕು ಅಧ್ಯಕ್ಷ ಡಿ. ಕೃಷ್ಣಕುಮಾರ್‌ ಹಾಗೂ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರ ಪುತ್ರರಾದ ಬಿ.ನ್‌.ಜಗದೀಶ್‌ ಮತ್ತು ಬಿ.ಎನ್‌.ಶಂಕರ್‌ ಅವರಿಗೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ 4 ವರ್ಷ 3 ತಿಂಗಳು ಜೈಲು ಶಿಕ್ಷೆ ಹಾಗೂ 93 ಸಾವಿರ ರೂ. ದಂಡ ವಿಧಿಸಿ ಕುಣಿಗಲ್‌ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮದ್‌ ಮೊಯಿದ್ದೀನ್‌ ಆದೇಶ ನೀಡಿದರು.

Vijaya Karnataka 28 Jul 2018, 5:00 am
ಕುಣಿಗಲ್‌: ಬಿಜೆಪಿ ತಾಲೂಕು ಅಧ್ಯಕ್ಷ ಡಿ. ಕೃಷ್ಣಕುಮಾರ್‌ ಹಾಗೂ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರ ಪುತ್ರರಾದ ಬಿ.ನ್‌.ಜಗದೀಶ್‌ ಮತ್ತು ಬಿ.ಎನ್‌.ಶಂಕರ್‌ ಅವರಿಗೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ 4 ವರ್ಷ 3 ತಿಂಗಳು ಜೈಲು ಶಿಕ್ಷೆ ಹಾಗೂ 93 ಸಾವಿರ ರೂ. ದಂಡ ವಿಧಿಸಿ ಕುಣಿಗಲ್‌ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮದ್‌ ಮೊಯಿದ್ದೀನ್‌ ಆದೇಶ ನೀಡಿದರು.
Vijaya Karnataka Web former mlas son gets jail
ಮಾಜಿ ಶಾಸಕರ ಪುತ್ರರಿಗೆ ಜೈಲು


ಕಳೆದ 13 ವರ್ಷಗಳಿಂದ ವಿಚಾರ ನಡೆಯುತ್ತಿದ್ದ ಈ ಪ್ರಕರಣದ ಅಂತಿಮ ತೀರ್ಪು ತೀವ್ರ ಕುತೂಹಲ ಮೂಡಿಸಿತ್ತು. ಈ ಸಂಬಂಧ ನ್ಯಾಯಾಲಯದ ಆವರಣದಲ್ಲಿ ಸಾಕಷ್ಟು ಮಂದಿ ಸಾರ್ವಜನಿಕರು ಜಮಾಯಿಸಿದ್ದರು. ಹಾಗಾಗಿ, ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು 326ರ (ಮಾರಣಾಂತಿಕ ಹಲ್ಲೆ) ಕಾಯ್ದೆಯಡಿ 2 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, 504ರ (ಅವಾಚ್ಯ ಶಬ್ದ ನಿಂದನೆ) ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, 324ರ ( ತೀವ್ರ ಹಲ್ಲೆ) ಕಾಯ್ದೆಯಡಿ 1 ವರ್ಷ ಜೈಲು, 10 ಸಾವಿರ ರೂ. ದಂಡ ಹಾಗೂ 323ರಡಿ (ಹಲ್ಲೆ ಕಾಯ್ದೆಯಡಿ) 3 ತಿಂಗಳು ಜೈಲು ಶಿಕ್ಷೆ, 1 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ನಂತರ ವೈಯಕ್ತಿಕ ಜಾಮೀನಿನ ಮೇಲೆ ಮೂವರು ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು.

ಏನಿದು ಪ್ರಕರಣ?


2005ನೇ ಮಾರ್ಚ್‌ 1ರಂದು ಕುಣಿಗಲ್‌ ಪಟ್ಟಣದ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಗ್ರಾಪಂ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿತ್ತು. ಆಗ ಮತ ಎಣಿಕೆ ಕೇಂದ್ರದಲ್ಲಿ ತಾಲೂಕಿನ ಚೊಟ್ಟನಹಳ್ಳಿ ರವಿಕುಮಾರ್‌ಗೂ ಹಾಗೂ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರ ಪುತ್ರರಾದ ಬಿ.ಎನ್‌.ಜಗದೀಶ್‌, ಶಂಕರ್‌ ಹಾಗೂ ಡಿ.ಕೃಷ್ಣಕುಮಾರ್‌ ನಡುವೆ ಗಲಾಟೆ ನಡೆಯಿತು. ಈ ವೇಳೆ ರವಿಕುಮಾರ್‌ ಅವರಿಗೆ ಮಾರಣಾಂತಿಕವಾಗಿ ಮೂರು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್‌ಐ ಬಾಳೇಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. 13 ವರ್ಷ ವಿಚಾರಣೆ ನಡೆದು ಅಂತಿಮವಾಗಿ ಶುಕ್ರವಾರ ತೀರ್ಪು ಹೊರಬಿದ್ದಿದೆ.

2005ರಲ್ಲಿ ಡಿ.ನಾಗರಾಜಯ್ಯ ಜೆಡಿಎಸ್‌ ಶಾಸಕರಾಗಿ ಅಧಿಕಾರದಲ್ಲಿದ್ದರು. ಸಹೋದರ ಡಿ.ಕೃಷ್ಣಕುಮಾರ್‌ ಅವರು ಅಣ್ಣನ ಜತೆಯಲ್ಲೇ ಇರುತ್ತಾರೆ. ಈಗ ಅವರು ಬಿಜೆಪಿ ಪಕ್ಷ ದಲ್ಲಿದ್ದಾರೆ. ಜೆಡಿಎಸ್‌ನಲ್ಲಿ ಒಟ್ಟಾಗಿ ಇದ್ದಾಗ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರ ಸಹೋದರ ಡಿ.ಕೃಷ್ಣಕುಮಾರ್‌ ಹಾಗೂ ಪುತ್ರರಾದ ಜಗದೀಶ್‌ ಮತ್ತು ಶಂಕರ್‌ ಗಲಾಟೆ ನಡೆದು ಪ್ರಕರಣ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ