ಆ್ಯಪ್ನಗರ

ಅಪೌಷ್ಠಿಕ ಮಕ್ಕಳ ವರದಿಗೆ ಮೇಲ್ವಿಚಾರಕರೇ ಹೊಣೆ

ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 20 Jul 2019, 5:00 am
ತುಮಕೂರು: ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web if mimnority children found malnutritious supervisors are responsible dc
ಅಪೌಷ್ಠಿಕ ಮಕ್ಕಳ ವರದಿಗೆ ಮೇಲ್ವಿಚಾರಕರೇ ಹೊಣೆ


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಲ್ಪಸಂಖ್ಯಾತ ಕಲ್ಯಾಣದ ಪ್ರಧಾನ ಮಂತ್ರಿಗಳ 15 ಅಂಶಗಳ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಗುಬ್ಬಿ ಹಾಗೂ ತುಮಕೂರು ತಾಲೂಕಿನಲ್ಲಿ ಒಟ್ಟು 114 ಅಲ್ಪಸಂಖ್ಯಾತರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೊರಗುಳಿದ ಮಕ್ಕಳನ್ನು ವಿಶೇಷ ದಾಖಲಾತಿ ಆಂದೋಲನಡಿಯಲ್ಲಿ ಜಾಗೃತಿ ಮೂಡಿಸಿ ಶಾಲೆಗೆ ದಾಖಲಿಸಬೇಕು. ತಂದೆ, ತಾಯಿಗೆ ಮಕ್ಕಳ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಉರ್ದು ಶಾಲೆಗಳಿಗೆ ಅವಶ್ಯಕತೆಯಿರುವ ಶೌಚಾಲಯ, ಶಾಲಾ ಕಟ್ಟಡ ಸಾಮಗ್ರಿಗಳು, ಆವರಣ ಗೋಡೆ ಹಾಗೂ ಗ್ರಂಥಾಲಯದ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ ಒಟ್ಟು 228 ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳಿದ್ದು, ಈ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರದ ಕೊರತೆಯಾಗದಂತೆ ಪೂರೈಸಬೇಕು. ಮೇಲ್ವಿಚಾರಕರು ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಮಕ್ಕಳ ಮನೆ ಮನೆಗೆ ತೆರಳಿ ಅಪೌಷ್ಠಿಕತೆ ಬಗ್ಗೆ ತಿಳಿದು ತಮಗೆ ವರದಿ ಸಲ್ಲಿಸಬೇಕು. ಅಪೌಷ್ಠಿಕತೆ ಮಕ್ಕಳ ಬಗ್ಗೆ ವರದಿಯಾದರೆ ಆಯಾ ಮೇಲ್ವಿಚಾರಕರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಡಿಡಿಪಿಐ ಕಾಮಾಕ್ಷಿ ಮಾತನಾಡಿ, ಅಲ್ಪಸಂಖ್ಯಾತ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಯಾಗುತ್ತಿರುವುದಕ್ಕೆ ಕಾರಣಗಳಿವೆ. ಆರ್ಥಿಕವಾಗಿ ಹಿಂದುಳಿದಿರುವ ಪೋಷಕರು ತಮ್ಮ ಮಕ್ಕಳನ್ನು ಗ್ಯಾರೇಜು, ಮತ್ತಿತರ ಕಡೆ ಕೆಲಸಕ್ಕೆ ಕಳುಹಿಸುತ್ತಿರುವುದರಿಂದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌.ನಟರಾಜ್‌ ಮಾತನಾಡಿ, ಇಲಾಖೆ ಯೋಜನೆಯಡಿ ಅಲ್ಪಸಂಖ್ಯಾತ ಮಹಿಳೆಯರಿಗೆ 2019ನೇ ಸಾಲಿನ ಭಾಗ್ಯಲಕ್ಷ್ಮಿ, ಉದ್ಯೋಗಿನಿ, ಸಮೃದ್ಧಿ, ಧನಶ್ರೀ, ಮುಂತಾದ ಯೋಜನೆಗಳ ಮಹಿಳಾ ಫಲಾನುಭವಿಗಳಿಗೆ ತರಬೇತಿ ನೀಡಿ ಚೆಕ್‌ ವಿತರಿಸಲಾಗಿದೆ ಎಂದು ತಿಳಿಸಿದರು.

ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಕೃಷಿ ಇಲಾಖೆಯಿಂದ ಅಲ್ಪಸಂಖ್ಯಾತ ಫಲಾನುಭವಿ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ತುಂತುರು ನೀರಾವರಿ ಸಾಮಗ್ರಿಗಳು, ಸ್ಪಿಂಕ್ಲರ್‌, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ 15 ಅಂಶಗಳ ಸಮಿತಿ ಸದಸ್ಯ ಖಧೀರ್‌ ಅಹಮದ್‌, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ರಘು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಜ್ಯೋತಿಗಣೇಶ್‌ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ