ಆ್ಯಪ್ನಗರ

ನೆರೆ ಪೀಡಿತರಿಗಾಗಿ ಜೋಳಿಗೆ ಹಿಡಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ

ಕರ್ನಾಟಕದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೂಡಲೇ ಘೋಷಣೆ ಮಾಡಬೇಕು ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ಆಗ್ರಹಿಸಿದರು.

Vijaya Karnataka 13 Aug 2019, 7:43 am
ಕೊರಟಗೆರೆ: ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯಲ್ಲಿ ಬಿದ್ದ ಮಹಾಮಳೆಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಪ್ರವಾಹದಿಂದ ಕಂಗಲಾಗಿರುವ ಕರ್ನಾಟಕದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೂಡಲೇ ಘೋಷಣೆ ಮಾಡಬೇಕು ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ಆಗ್ರಹಿಸಿದರು.
Vijaya Karnataka Web tumkur


ಪಟ್ಟಣದ ಸರಕಾರಿ ಬಸ್‌ ನಿಲ್ದಾಣ, ಮುಖ್ಯರಸ್ತೆ ಮತ್ತು ಪಪಂ ಮುಂಭಾಗ ಹಿಂದು-ಮುಸ್ಲಿಂ ಬಾಂಧವರು ಸೋಮವಾರ ನಡೆಸಿದ ನೇರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬೆಳಗಾವಿ, ಕಲಬುರಗಿ, ಉಡುಪಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗದಗ, ಕೊಡಗು ಸೇರಿ 17 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಪ್ರವಾಹದಿಂದ ನೊಂದ ಜೀವಗಳ ಜತೆ ಕರುನಾಡು ಸದಾ ಜತೆಗಿದೆ. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಎಲೆರಾಂಪುರ ಕುಂಚಿಟಿಗ ಮಠದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕೇಂದ್ರ ಸರಕಾರ ಕರ್ನಾಟಕ ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದರೆ ಬೆಳೆಹಾನಿ, ಸರಕಾರಿ ಆಸ್ತಿಪಾಸ್ತಿ, ಜೀವಹಾನಿ ಪರಿಹಾರ ಸಂಪೂರ್ಣವಾಗಿ ಲಭಿಸಲಿದೆ. ನೆರೆ ಸಂತ್ರಸ್ತರಿಗಾಗಿ ಕೊರಟಗೆರೆ ಮತ್ತು ಮಧುಗಿರಿಯ ಸಾವಿರಾರು ಭಕ್ತ ಸಮೂಹ ಸಾಕಷ್ಟು ದೇಣಿಗೆ ನೀಡಿದ್ದಾರೆ ಎಂದು ಹೇಳಿದರು.

ಜಾಮೀಯಾ ಮಸೀದಿ ಮುತ್ತುವಲ್ಲಿ ಇದಾಯತ್‌ವುಲ್ಲಾ ಷರೀಫ್‌ ಮಾತನಾಡಿ, ಪವಿತ್ರ ಬಕ್ರೀದ್‌ ಹಬ್ಬದ ದಿನ ನಾವೆಲ್ಲರೂ ಪಟ್ಟಣದಲ್ಲಿ ನೆರೆ ಸಂತ್ರಸ್ತರಿಗಾಗಿ ಸ್ವಾಮೀಜಿಗಳ ಜತೆಗೂಡಿ ಬಿಕ್ಷಾಟನೆ ಮಾಡುತ್ತಿದ್ದೇವೆ. ರಾಜ್ಯದ ಜನರು ಸಂಕಷ್ಟದಲ್ಲಿ ಇರುವಾಗ ನಾವೆಲ್ಲರೂ ಜತೆಯಾಗಿ ಸಹಾಯಹಸ್ತ ನೀಡುವುದೇ ಪವಿತ್ರ ಧರ್ಮವಾಗಿದೆ. ಜಾತಿಬೇಧ ಇಲ್ಲದೇ ಸಾಧ್ಯವಾದಷ್ಟು ದೇಣಿಗೆ ಸಂಗ್ರಹಿಸುವ ಕರ್ತವ್ಯ ನಮ್ಮದಾಗಿದೆ ಎಂದು ತಿಳಿಸಿದರು.

ಪಟ್ಟಣದ ಸರಕಾರಿ ಬಸ್‌ ನಿಲ್ದಾಣದಿಂದ ಸಂತೆ ಮೈದಾನ, ಮುಖ್ಯರಸ್ತೆಯ ಅಂಗಡಿ ಮಳಿಗೆ, ಪಪಂ ಮುಂಭಾಗ ಸೇರಿದಂತೆ ಆಸ್ಪತ್ರೆಯ ಮುಂಭಾಗ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ಮತ್ತು ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಜೊಳಿಗೆ ಹಿಡಿದು ಬಿಕ್ಷಾಟನೆ ಮಾಡಿದರು. ಪೊಲೀಸ್‌ ಇಲಾಖೆ, ಪತ್ರಕರ್ತರ ಸಂಘ, ಮುಸ್ಲಿಂ ಮುಖಂಡರು, ವರ್ತಕರ ಸಂಘ, ಆಟೋ ಚಾಲಕರ ಸಂಘಗಳು ದೇಣಿಗೆ ಸಂಗ್ರಹಣೆಗೆ ಸಹಕಾರ ನೀಡಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ